ADVERTISEMENT

ಶಿರಾಳಕೊಪ್ಪ: ಪುರಸಭೆಗೆ ಸೇರಿದರೂ ಅಭಿವೃದ್ಧಿ ಕಾಣದ ಕ್ಯಾದಿಕೊಪ್ಪ

ಸಮರ್ಪಕ ರಸ್ತೆ, ಚರಂಡಿ, ಆರೋಗ್ಯ ಕೇಂದ್ರ ಇಲ್ಲ

ಎಂ.ನವೀನ್ ಕುಮಾರ್
Published 1 ಮೇ 2022, 6:19 IST
Last Updated 1 ಮೇ 2022, 6:19 IST
ಕ್ಯಾದಿಕೊಪ್ಪ ಗ್ರಾಮದಲ್ಲಿ ಸಮರ್ಪಕ ರಸ್ತೆ ಇಲ್ಲ
ಕ್ಯಾದಿಕೊಪ್ಪ ಗ್ರಾಮದಲ್ಲಿ ಸಮರ್ಪಕ ರಸ್ತೆ ಇಲ್ಲ   

ಶಿರಾಳಕೊಪ್ಪ:ತಾಲ್ಲೂಕಿನ ಕಡೆಯ ಗ್ರಾಮವಾದ ಕ್ಯಾದಿಕೊಪ್ಪ ಗ್ರಾಮ ಹಲವು ಸಮಸ್ಯೆ ಎದುರಿಸುತ್ತಿದೆ. ಇಲ್ಲಿನ ಗ್ರಾಮಸ್ಥರು ಹಕ್ಕುಪತ್ರಕ್ಕಾಗಿ ಕಚೇರಿಗಳಿಗೆ ಹಲವು ವರ್ಷಗಳಿಂದ ಅಲೆದಾಡುತ್ತಲೇ ಇದ್ದಾರೆ.

ಗ್ರಾಮಕ್ಕೆ ಸಮರ್ಪಕ ಸಾರಿಗೆ ಸೌಲಭ್ಯ ಇಲ್ಲ. ಸ್ವಂತ ವಾಹನ ಇಲ್ಲವೇ ಆಟೊ ನೆಚ್ಚಿಕೊಂಡು ದೂರದ ಶಿರಾಳಕೊಪ್ಪಗೆ ಹೋಗುವ ಅನಿವಾರ್ಯ ಇಲ್ಲಿನ ಗ್ರಾಮಸ್ಥರದ್ದು. ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲ. ತುರ್ತು ಸಂದರ್ಭಗಳಲ್ಲಿ ಶಿರಾಳಕೊಪ್ಪದ ಆಸ್ಪತ್ರೆಗೇ ಹೋಗಬೇಕು.

ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಾಲೆ ಇದೆ. ಆದರೆ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗೆ ವಿದ್ಯಾರ್ಥಿಗಳು ದೂರದ ಶಿರಾಳಕೊಪ್ಪ, ಇಲ್ಲವೇ ತಡಗಣಿಗೆ ಹೋಗಬೇಕಿದೆ. ಸಮರ್ಪಕ ರಸ್ತೆಯೂ ಇಲ್ಲ. ಚರಂಡಿ ದೂರದ ಮಾತು.

ADVERTISEMENT

ಗ್ರಾಮದಲ್ಲಿ 91 ಮನೆಗಳಿದ್ದು, 500ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇದನ್ನು ಈಚೆಗೆ ಅಭಿವೃದ್ಧಿಯ ದೂರದೃಷ್ಟಿಯಿಂದ ಗ್ರಾಮವನ್ನು ಪುರಸಭೆಗೆ ಸೇರಿಸಲಾಗಿದೆ. ಆದರೆ ಇದರಿಂದ ಗ್ರಾಮ ಪಂಚಾಯಿತಿ ಇದ್ದಾಗ ಸಿಗುತ್ತಿದ್ದ ಸೌಲಭ್ಯಗಳು ಈಗ ಸಿಗುತ್ತಿಲ್ಲ. ಮನೆ ನಿರ್ಮಿಸಲು ಸಾಲ ಸೌಲಭ್ಯ ಪಡೆಯಲು ಇದರಿಂದ ತೊಂದರೆಯಾಗಿದೆ ಎಂಬುದು ಗ್ರಾಮಸ್ಥರ ಅಳಲು.

ಮನೆಗಳಿಗೆ ಇದುವರೆಗೂ ಅಧಿಕೃತ ಖಾತೆಗಳು ಇಲ್ಲ. ಬಗರ್‌ಹುಕುಂ ಹಾಗೂ ಅರಣ್ಯಹಕ್ಕು ಕಾಯ್ದೆಯ ಅಡಿಯಲ್ಲಿ ಮನೆಗಳು, ಜಮೀನಿಗೆ ಅರ್ಜಿಗಳನ್ನು ಸಲ್ಲಿಸಿದ್ದರೂ ದಶಕ ಕಳೆದರೂ ಹಕ್ಕುಪತ್ರ ಸಿಕ್ಕಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಗ್ರಾಮದರವಿಕುಮಾರ.

ಗ್ರಾಮದಲ್ಲಿ ಕನ್ನಡ ಹಾಗೂ ಉರ್ದು ಕಿರಿಯ ಪ್ರಾಥಮಿಕ ಶಾಲೆ ಇದೆ. ತಡಗಣಿಯಿಂದ ಕ್ಯಾದಿಕೊಪ್ಪವರೆಗೂ ಡಾಂಬರು ರಸ್ತೆ ಸಂಪರ್ಕವಿದೆ. ಆದರೆ ಗ್ರಾಮದ ಒಳಗಿನ ಕೇರಿಗಳಲ್ಲಿರಸ್ತೆ ಹಾಗೂ ಚರಂಡಿಗಳು ಇಲ್ಲ.

ರಸ್ತೆ ಸರಿ ಇಲ್ಲದ ಕಾರಣ ಸಾರಿಗೆ ಸೌಲಭ್ಯ ಇಲ್ಲ. ಜನರು ನಡೆದುಕೊಂಡು ಇಲ್ಲವೇ ಆಟೊ ಹಾಗೂ ಸ್ವಂತ ವಾಹನಗಳಲ್ಲಿ ಶಿರಾಳಕೊಪ್ಪ ಸೇರಿ ದೂರದ ಊರುಗಳಿಗೆ ಹೋಗಬೇಕಿದೆ. ವಿದ್ಯಾರ್ಥಿಗಳು ಪ್ರೌಢಶಾಲೆಗೆ ಹೋಗಲು 2 ಕಿ.ಮೀ ದೂರದ ತಡಗಣಿ ಇಲ್ಲವೇ 5 ಕಿ.ಮೀ ದೂರದ ಶಿರಾಳಕೊಪ್ಪ ನಡೆದುಕೊಂಡು ಹೋಗುವ ಸ್ಥಿತಿ ಇದೆ. ಇಲ್ಲವೇ ಬೈಕ್‌, ಆಟೊಗಳಲ್ಲಿ ಶಾಲೆಗೆ ಹೋಗಬೇಕಿದೆ.

ಬಹುತೇಕ ಕೃಷಿಯನ್ನೇ ಅವಲಂಬಿಸಿರುವ ಇಲ್ಲಿನ ಜನರ ಬದುಕು ದಶಕ ಕಳೆದರೂ ಸುಧಾರಿಸಿಲ್ಲ. ಗ್ರಾಮವನ್ನು ಪುರಸಭೆಗೆ ಸೇರಿಸಿದ್ದರೂ ಸೌಲಭ್ಯ ಮಾತ್ರ ಮರೀಚಿಕೆಯಾಗಿದೆ. ದುಬಾರಿ ಕಂದಾಯ ಕಟ್ಟಬೇಕಾಗಿದೆ. ಉದ್ಯೋಗ ಖಾತ್ರಿಯಡಿ ಕೂಲಿಯೂ ಸಿಗುತ್ತಿಲ್ಲ ಎಂದು ದೂರುತ್ತಾರೆ ಗ್ರಾಮದ ವಿಜಯಕುಮಾರ್.

ನಾಗರಿಕ ಸೌಲಭ್ಯ ವಂಚಿತವಾಗಿರುವ ಈ ಗ್ರಾಮವನ್ನು ಪುರಸಭೆಗೆ ಸೇರಿಸುವ ಮೂಲಕ ಜನರಿಗೆ ಮತ್ತೆ ಅನ್ಯಾಯ ಮಾಡಲಾಗಿದೆ. ಅರಣ್ಯಹಕ್ಕು ಹಾಗೂ ಬಗರ್‌ಹುಕುಂ ಅಡಿ ಮನೆಗಳು, ಜಮೀನಿನ ಹಕ್ಕುಪತ್ರಕ್ಕಾಗಿ ಅಲೆದಾಟ ತಪ್ಪಿಲ್ಲ. ಜನಪ್ರತಿನಿಧಿಗಳು ಗಮನಹರಿಸಿಲ್ಲ ಎಂದುಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಿಜಲಿಂಗಪ್ಪ ದೂರಿದರು.

‘ಗ್ರಾಮ ಪಂಚಾಯಿತಿಯಲ್ಲಿ ಅನುದಾನದ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದ್ದವು. ಈ ಗ್ರಾಮವನ್ನು ಪುರಸಭೆಗೆ ಸೇರಿಸಿದ ಬಳಿಕ ಸಂಸದ ಬಿ.ವೈ. ರಾಘವೇಂದ್ರ ಅವರು ತಡಗಣಿ, ಕ್ಯಾದಿಕೊಪ್ಪ, ಜಂಬೂರು ಹೊಸಕೊಪ್ಪ ಗ್ರಾಮಗಳಿಗೆ ಸಿಂಹಪಾಲು ಅನುದಾನ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಮೃತ ಮಹೋತ್ಸವ ಯೋಜನೆಯ ಅಡಿಯಲ್ಲಿ ಕ್ಯಾದಿಕೊಪ್ಪ ಗ್ರಾಮಕ್ಕೆ ₹ 88 ಲಕ್ಷ ಅನುದಾನ ಮಂಜೂರು ಮಾಡಿದ್ದಾರೆ’ ಎಂದು ವಿವರಿಸಿದರುಪುರಸಭೆ ಸದಸ್ಯ ತಡಗಣಿ ಮಂಜುನಾಥ.

***

ಗ್ರಾಮದಲ್ಲಿ ಹಲವಾರು ಬಗೆಯ ಸಮಸ್ಯೆಗಳಿವೆ. ಗ್ರಾಮಸ್ಥರ ಸಹಮತ ಇಲ್ಲದೇ ಅಂಗನವಾಡಿ ಕಾರ್ಯಕರ್ತೆಯನ್ನು ಅಧಿಕಾರಿಗಳು ನೇಮಕ ಮಾಡಿದ್ದಾರೆ. ಇದರಿಂದ ಜನರು ಗ್ರಾಮದ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

–ರವಿಕುಮಾರ,ಕೃಷಿಕ

***

ಗ್ರಾಮದ ಅಭಿವೃದ್ಧಿಗೆ ಅನುದಾನ ಬಂದಿದೆ. ಟೆಂಡರ್ ಪ್ರಕ್ರಿಯೆ ಮುಗಿದ ನಂತರ ರಸ್ತೆ, ಚರಂಡಿ ಸೇರಿ ಪ್ರಮುಖ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು.

-ತಡಗಣಿ ಮಂಜುನಾಥ, ಪುರಸಭೆ ಸದಸ್ಯ

***

ಅರಣ್ಯಹಕ್ಕು ಹಾಗೂ ಬಗರ್‌ಹುಕುಂ ಅಡಿ ಮನೆಗಳ ಹಕ್ಕುಪತ್ರಕ್ಕಾಗಿ ಅಲೆದಾಡಿ ಸಾಕಾಗಿದೆ. ವರ್ಷಗಳೇ ಕಳೆದರೂ ನಮ್ಮ ಸಮಸ್ಯೆ ಬಗೆಹರಿದಿಲ್ಲ.

–ನಿಜಲಿಂಗಪ್ಪ, ಗ್ರಾ.ಪಂ. ಮಾಜಿ ಸದಸ್ಯ

***

ಗ್ರಾಮ ಪುರಸಭೆಗೆ ಸೇರ್ಪಡೆಯಾದ ನಂತರ ಜನರಿಗೆ ಉದ್ಯೋಗ ಖಾತ್ರಿ ಕೆಲಸ ಲಭಿಸುತ್ತಿಲ್ಲ. ದುಬಾರಿ ಕಂದಾಯಗಳನ್ನು ಕಟ್ಟುವುದು ಜನರಿಗೆ ತೊಂದರೆ ಆಗಿದೆ.–

–ವಿಜಯಕುಮಾರ್, –ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.