ADVERTISEMENT

ಹೊಸನಗರ ಆರ್ಯ ಈಡಿಗರ ಸಂಘದ ದುರಾಡಳಿತ ಎಂದು ಆರೋಪಿಸಿ ಪ್ರತಿಭಟನೆ

ವಾಣಿಜ್ಯ ಸಂಕೀರ್ಣದ ₹ 2 ಕೋಟಿಗೂ ಅಧಿಕ ಬಾಡಿಗೆ ಹಣದ ಲೆಕ್ಕ ಕೊಟ್ಟಿಲ್ಲ: ಮಾಜಿ ಶಾಸಕ ಬಿ.ಸ್ವಾಮಿ ರಾವ್

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 5:14 IST
Last Updated 1 ಜನವರಿ 2026, 5:14 IST
ಹೊಸನಗರ ಪಟ್ಟಣದ ಆರ್ಯ ಈಡಿಗರ ಸಂಘದ ಎದುರು ಮಾಜಿ ಶಾಸಕ ಬಿ. ಸ್ವಾಮಿ ರಾವ್ ಧರಣಿ ನಡೆಸಿದರು
ಹೊಸನಗರ ಪಟ್ಟಣದ ಆರ್ಯ ಈಡಿಗರ ಸಂಘದ ಎದುರು ಮಾಜಿ ಶಾಸಕ ಬಿ. ಸ್ವಾಮಿ ರಾವ್ ಧರಣಿ ನಡೆಸಿದರು   

ಹೊಸನಗರ: ತಾಲ್ಲೂಕು ಆರ್ಯ ಈಡಿಗ ಸಂಘದಲ್ಲಿ ನಡೆದಿದೆ ಎನ್ನಲಾದ ದುರಾಡಳಿತ, ಅವ್ಯವಹಾರ, ಅಕ್ರಮ ಹಾಗೂ ಸಂಘದ ನಿಯಮಬಾಹಿರ ನಡೆ ಖಂಡಿಸಿ ಮಾಜಿ ಶಾಸಕ ಬಿ.ಸ್ವಾಮಿ ರಾವ್ ಅವರು ಈಡಿಗರ ಸಂಘದ ಸಂಕೀರ್ಣದ ಮುಂಭಾಗ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.  

‘ಕೆಲ ತಿಂಗಳ ಹಿಂದೆಯೇ ಪತ್ರದ ಮೂಲಕ ಸಂಘದ ದುರಾಡಳಿತ ವ್ಯವಸ್ಥೆ ಖಂಡಿಸಿ ಆಡಳಿತ ಮಂಡಳಿ ಸದಸ್ಯರ ರಾಜೀನಾಮೆಗೆ ಆಗ್ರಹಿಸಿದ್ದೆ. ಸಂಘದಲ್ಲಾದ ಅವ್ಯವಹಾರಗಳ ಮಾಹಿತಿಯನ್ನು ಸಂಘದ ಹಿರಿಯ ಹಾಗೂ ಪ್ರಮುಖ ನಾಯಕರಿಗೆ ತಿಳಿಸಿದ್ದೆ. ಆದರೆ, ಈವರೆಗೂ ಸೂಕ್ತ ಉತ್ತರ ದೊರೆತಿಲ್ಲ. ಈ ನಿಟ್ಟಿನಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಬೇಕಾಯಿತು’ ಎಂದು ಬಿ. ಸ್ವಾಮಿರಾವ್ ಹೇಳಿದರು.  

‘ಆರ್ಯ ಈಡಿಗರ ಸಂಘದಲ್ಲಿ ನಿರೀಕ್ಷೆಗೂ ಮೀರಿದ ದುರಾಡಳಿತ ನಡೆದಿದೆ. ಈ ಹಿಂದೆ ನನ್ನ ಸ್ವಂತ ಹಣದಲ್ಲಿ ಸಂಘದ ಆವರಣದಲ್ಲಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣದ ₹ 2 ಕೋಟಿಗೂ ಅಧಿಕ ಬಾಡಿಗೆ ಹಣದ ಲೆಕ್ಕ ಕೊಟ್ಟಿಲ್ಲ. ನಕಲಿ ಖಾತೆಯನ್ನು ತೆರೆದು ಅಕ್ರಮ ಎಸಗಲಾಗಿದೆ. ವಾರ್ಷಿಕ ಸಭೆಯನ್ನು ಕರೆಯದೆ ಸದಸ್ಯರನ್ನು ವಂಚಿಸಲಾಗುತ್ತಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು. 

ADVERTISEMENT

‘ಅಕ್ರಮ ಎಸಗಿರುವ ಸಂಘದ ಅಧ್ಯಕ್ಷರು ರಾಜೀನಾಮೆ ಕೊಡಬೇಕು. ಜೊತೆಗೆ ಚುನಾವಣೆಯ ಮೂಲಕ ಹೊಸ ಕಾರ್ಯಕಾರಿ ಸಮಿತಿಯನ್ನು ರಚಿಸಬೇಕು. ಈ ಬೇಡಿಕೆ ಈಡೇರುವವರೆಗೂ ಉಪವಾಸ ಮುಂದುವರಿಸುತ್ತೇನೆ’ ಎಂದು ತಿಳಿಸಿದರು. 

ನಾಯಕರ ಭೇಟಿ: ಸಮುದಾಯದ ಪ್ರಮುಖ ರಾಜಕೀಯ ನಾಯಕರಾದ ಜಿ.ಡಿ. ನಾರಾಯಣಪ್ಪ, ಹರತಾಳು ಹಾಲಪ್ಪ, ಕಲಗೂಡು ರತ್ನಾಕರ್, ರಾಜ ನಂದಿನಿ, ತಹಶೀಲ್ದಾರ್ ಭರತ್ ರಾಜ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾಜಿ ಶಾಸಕ ಬಿ.ಸ್ವಾಮಿ ರಾವ್ ಅವರೊಡನೆ ಚರ್ಚಿಸಿ ಪ್ರತಿಭಟನೆ ಕೈ ಬಿಡುವಂತೆ ಮನವರಿಸುವ ಪ್ರಯತ್ನ ನಡೆಸಿದರು. ಬಿ. ಸ್ವಾಮಿರಾವ್ ಅವರ ಆರೋಗ್ಯದಲ್ಲಿ ಏರುಪೇರು ಆಗಿದ್ದು ವೈದ್ಯರು ಬಂದು ಪರೀಕ್ಷೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.