ADVERTISEMENT

ಶಿವಮೊಗ್ಗ | ವಿಮಾನ ನಿಲ್ದಾಣ; 111 ಎಕರೆಯಲ್ಲಿ ಅಭಿವೃದ್ಧಿ ಕಾರ್ಯ

ಪಂಚತಾರಾ ಹೋಟೆಲ್, ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಸಿದ್ಧತೆ–ಎಸ್.ಜಿ.ನಂಜಯ್ಯನಮಠ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 3:17 IST
Last Updated 9 ಅಕ್ಟೋಬರ್ 2025, 3:17 IST
ಎಸ್.ಜಿ.ನಂಜಯ್ಯನಮಠ
ಎಸ್.ಜಿ.ನಂಜಯ್ಯನಮಠ   

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣ ಆವರಣದ 111 ಎಕರೆ ಜಾಗದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮಾಲ್, ವಾಣಿಜ್ಯ ಸಂಕೀರ್ಣ, ಪಂಚತಾರಾ ಹೋಟೆಲ್, ವಸತಿಗೃಹಗಳನ್ನು ನಿರ್ಮಿಸಲಾಗುವುದು ಎಂದು ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್‌.ಜಿ.ನಂಜಯ್ಯನಮಠ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾರ್ವಜನಿಕರಿಗೆ ಅನುಕೂಲವಾಗುವ ಮಾಲ್, ವಾಣಿಜ್ಯ ಸಂಕೀರ್ಣ ನಿರ್ಮಿಸಿ 30 ವರ್ಷಗಳಿಗೆ ಗುತ್ತಿಗೆ ನೀಡಲಾಗುವುದು. ಈ ಬಗ್ಗೆ ಅ.17ರಂದು ನಡೆಯುವ ನಿಗಮದ ಆಡಳಿತ ಮಂಡಳಿ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಈಗ ಹಗಲು ಹೊತ್ತು ಮಾತ್ರ ವಿಮಾನಯಾನ ಸೌಲಭ್ಯವಿದೆ. ರಾತ್ರಿ ಹೊತ್ತು ವಿಮಾನ ಲ್ಯಾಂಡಿಂಗ್ ಆಗಲು ಅಗತ್ಯವಿರುವ ಉಪಕರಣಗಳ ಅಳವಡಿಕೆ ಕೆಲಸ ನಡೆಯುತ್ತಿದೆ. ಕೆಲವು ಕಾಮಗಾರಿಗಳಿಗೆ ಟೆಂಡರ್ ಆಗಿದೆ. ಉಪಕರಣವೂ ಬಂದಿವೆ. ಕೆಲವನ್ನು ತರಿಸಿಕೊಳ್ಳಲು ಕೇಂದ್ರದಿಂದ ಅನುಮತಿ ಬೇಕಿದೆ ಎಂದು ತಿಳಿಸಿದರು.

ADVERTISEMENT

ಕೆಐಡಿಬಿಯಿಂದ ಭೂಸ್ವಾಧೀನ ಆಗಿದ್ದು, ಕೆಎಸ್‌ಎಸ್‌ಐಡಿಸಿಗೆ ಅದಿನ್ನೂ ಹಸ್ತಾಂತರವಾಗಿಲ್ಲ. ರಾಜ್ಯದಲ್ಲಿ ರಾಯಚೂರು, ಹಾಸನದಲ್ಲಿ ವಿಮಾನ ನಿಲ್ದಾಣ ಕಾರ್ಯ ನಡೆಯುತ್ತಿದೆ. ಚಿಕ್ಕಮಗಳೂರಿನಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆಗಿಲ್ಲ ಎಂದು ಹೇಳಿದರು.

ವಿಮಾನ ನಿಲ್ದಾಣಕ್ಕೆ ಜಾಗ ಬಿಟ್ಟುಕೊಟ್ಟ 371 ಭೂಮಾಲೀಕರಿಗೆ ನಿವೇಶನ ನೀಡಲು ಈ ಹಿಂದೆ ಸರ್ಕಾರ ಒಪ್ಪಿಕೊಂಡಿತ್ತು. ಈ ಕುರಿತು ಭೂಮಾಲೀಕರು ಅನೇಕ ಬಾರಿ ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡಿದ್ದರು. ಅ.9ರಂದು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿಮಾನ ನಿಲ್ದಾಣದ ಎದುರು ಪುನಃ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಭೂ ಮಾಲೀಕರಿಗೆ ನಿವೇಶನ ನೀಡುವ ಕುರಿತಂತೆ ಸಂಬಂಧಿಸಿದ ಇಲಾಖಾ ಮುಖ್ಯಸ್ಥರೊಡನೆ ಸಮಾಲೋಚಿಸಲಾಗುವುದು ಎಂದು ಭರವಸೆ ನೀಡಿದರು.

ವಿಮಾನ ನಿಲ್ದಾಣದ ನಿರ್ದೇಶಕ ಕ್ಯಾ.ಶಮಂತ್, ನಿಗಮದ ಅಧಿಕಾರಿ ವಿದ್ಯಾಧರ ಹಾಜರಿದ್ದರು.

ಶಿವಮೊಗ್ಗಕ್ಕೆ ವಿಮಾನ ನಿಲ್ದಾಣ ನಿರ್ಮಾಣವಾಗುವಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರ ಶ್ರಮ ಮುಖ್ಯವಾದದ್ದು. ಅವರ ಶ್ರಮವನ್ನು ಪಕ್ಷಾತೀತವಾಗಿ ಸ್ಮರಿಸಲೇಬೇಕು.
– ಎಸ್.ಜಿ.ನಂಜಯ್ಯನಮಠ, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ

ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಳ

ಶಿವಮೊಗ್ಗ ವಿಮಾನ ನಿಲ್ದಾಣದಿಂದ 2023ರಲ್ಲಿ 17229 ಪ್ರಯಾಣಿಕರು 2024ರಲ್ಲಿ 90000 ಹಾಗೂ 2025ರಲ್ಲಿ ಈವರೆಗೆ 1 ಲಕ್ಷ ಜನ ಪ್ರಯಾಣಿಸಿದ್ದಾರೆ. ಈ ಭಾಗದಲ್ಲಿ ವಿಮಾನಯಾನಕ್ಕೆ ಇರುವ ಬೇಡಿಕೆಯನ್ನು ಇದು ಬಿಂಬಿಸುತ್ತದೆ ಎಂದು ಎಸ್.ಜಿ.ನಂಜಯ್ಯನಮಠ ಹರ್ಷ ವ್ಯಕ್ತಪಡಿಸಿದರು. ವಿಮಾನ ನಿಲ್ದಾಣದಲ್ಲಿ ಮುಂದಿನ 4 ತಿಂಗಳಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆಗೆ ಉಪಕರಣ ಅಳವಡಿಕೆ ಕಾರ್ಯ ಪೂರ್ಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.