ADVERTISEMENT

ಶಿವಮೊಗ್ಗ| ಗ್ಯಾರಂಟಿ ಮುಂದಿಟ್ಟುಕೊಂಡು ಪಂಚಾಯ್ತಿ ಚುನಾವಣೆ: ಸಲೀಂ ಅಹಮದ್

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 6:18 IST
Last Updated 26 ಜನವರಿ 2026, 6:18 IST
ಸಲೀಂ ಅಹಮದ್
ಸಲೀಂ ಅಹಮದ್   

ಶಿವಮೊಗ್ಗ: ‘ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಮತ ಕೇಳಲಿದೆ’ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮ್ಮದ್ ಹೇಳಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕಾಂಗ್ರೆಸ್ ನುಡಿದಂತೆ ನಡೆದಿದೆ. ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಇದರಿಂದ ಮಹಿಳೆಯರು, ಬಡವರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿದೆ. ನಿರುದ್ಯೋಗಿ ಯುವಕರಿಗೂ ನೆರವು ದೊರೆತಿದೆ. ಇದು ಪಕ್ಷದ ಗೆಲುವಿಗೆ ನೆರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 12 ವರ್ಷಗಳಿಂದಲೂ ಸುಳ್ಳು ಹೇಳುತ್ತಲೇ ಬಂದಿದೆ. ರಾಜ್ಯಕ್ಕೆ ನೀಡಬೇಕಾದ ಅನುದಾನಗಳನ್ನು ಸರಿಯಾಗಿ ಕೊಡುತ್ತಿಲ್ಲ. ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಲೋಪವಿದೆ ಎಂಬುದನ್ನು ಪತ್ತೆ ಮಾಡಲು 12 ವರ್ಷ ತೆಗೆದುಕೊಂಡು ಈಗ ಗಾಂಧಿ ಹೆಸರನ್ನೇ ತೆಗೆದು ಯೋಜನೆಯ ಸ್ವರೂಪ ಬದಲಾಯಿಸಿದ್ದಾರೆ ಎಂದು ದೂರಿದರು.

ರಾಜ್ಯದ ಐದು ಜನ ಸಚಿವರು ಕೇಂದ್ರ ಸಂಪುಟದಲ್ಲಿದ್ದರೂ ಕರ್ನಾಟಕಕ್ಕೆ ಯಾವುದೇ ಉಪಯೋಗವಾಗುತ್ತಿಲ್ಲ. ರಾಜ್ಯದ ಪಾಲಿನ ಅನುದಾನ ತರುವಲ್ಲಿ ವಿಫಲರಾಗಿರುವ ಅವರು, ಸಂಸತ್ತಿನಲ್ಲಿ ಮಾತನಾಡುತ್ತಿಲ್ಲ. ಮಹಾದಾಯಿ, ಮೇಕೆದಾಟು ಯೋಜನೆಗಳಿಗೆ ಹಸಿರು ನಿಶಾನೆ ಕೊಡಿಸುವಲ್ಲಿಯೂ ವಿಫಲರಾಗಿದ್ದಾರೆ ಎಂದರು.

ಸರ್ಕಾರದ ಸಿದ್ಧಪಡಿಸಿದ ಭಾಷಣವನ್ನು ರಾಜ್ಯಪಾಲರು  ಜಂಟಿ ಅಧಿವೇಶನದಲ್ಲಿ ಓದಿಲ್ಲ. ಇದು ಸಂವಿಧಾನ ಬಾಹಿರ ನಡೆಯಾಗಿರುವುದರಿಂದ ಕಾನೂನು ಹೋರಾಟ ನಡೆಸುವ ಸಂಬಂಧ ತಜ್ಞರ ಅಭಿಪ್ರಾಯ ಪಡೆಯಲಾಗುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ವಿಧಾನ ಪರಿಷತ್‌ ಸದಸ್ಯೆ ಬಲ್ಕೀಶ್ ಬಾನು, ಪ್ರಮುಖರಾದ ಎನ್. ರಮೇಶ್, ಇಸ್ಮಾಯಿಲ್ ಖಾನ್, ಯು.ಶಿವಾನಂದ, ಎಸ್.ಟಿ. ಹಾಲಪ್ಪ ಇದ್ದರು.

ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಮುಸ್ಲಿಂ ಅಭ್ಯರ್ಥಿಯನ್ನು ಪರಿಗಣಿಸುವಂತೆ ಹೇಳಿಲ್ಲ. ಆದರೆ ಅಪ್ಪಟ ಕಾಂಗ್ರೆಸ್ ಅಭ್ಯರ್ಥಿಯನ್ನು ನಿಲ್ಲಿಸಿ ಗೆಲ್ಲಿಸಿಕೊಳ್ಳಲಾಗುತ್ತದೆ
ಸಲೀಂ ಅಹಮದ್ ವಿಧಾನ ಪರಿಷತ್ ಮುಖ್ಯ ಸಚೇತಕ

ಮನರೇಗಾ ಪರ ಫೆ.10ಕ್ಕೆ ದೇಶಾದ್ಯಂತ ಹೋರಾಟ

ಮನರೇಗಾ ಯೋಜನೆ ಉಳಿಸಿಕೊಂಡು ಹೊಸ ಕಾಯ್ದೆಯನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಫೆ.10 ರಿಂದ ದೇಶದಾದ್ಯಂತ ಕಾಂಗ್ರೆಸ್ ಹೋರಾಟ ನಡೆಸಲಿದೆ.  ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಮೂಡಿಸುವಂತಹ ಕೆಲಸ ಮಾಡಲಿದೆ. ರಾಜ್ಯ ಸರ್ಕಾರಕ್ಕೆಸಾವಿರ ದಿನಗಳಾಗುತ್ತಿರುವ ಹಿನ್ನೆಲೆಯಲ್ಲಿ ಫೆ.13ರಂದು ಹಾವೇರಿಯಲ್ಲಿ ಬೃಹತ್ ಸಮಾವೇಶ ನಡೆಸಿ ರಾಜ್ಯ ಸರ್ಕಾರದ ಸಾಧನೆಯನ್ನು ಜನರ ಮುಂದೆ ಇಡಲಾಗುತ್ತಿದೆ ಎಂದು ಸಲೀಂ ಅಹಮದ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.