ADVERTISEMENT

ಶಿವಮೊಗ್ಗ: ಪರಿಶಿಷ್ಟರಿಗೆ ಮೀಸಲಿಟ್ಟ ಹಣ ವರ್ಗಾವಣೆಗೆ ವಿರೋಧ

ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 6:06 IST
Last Updated 11 ಫೆಬ್ರುವರಿ 2026, 6:06 IST
ಶಿವಮೊಗ್ಗದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಡಿಎಸ್‌ಎಸ್ ವತಿಯಿಂದ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು
ಶಿವಮೊಗ್ಗದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಡಿಎಸ್‌ಎಸ್ ವತಿಯಿಂದ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು   

ಶಿವಮೊಗ್ಗ: ಪರಿಶಿಷ್ಟರಿಗೆ ಮೀಸಲಿಟ್ಟ ಹಣವನ್ನು ಇತರೆ ಯೋಜನೆಗಳಿಗೆ ವರ್ಗಾಯಿಸಿರುವುದನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. 

‘ಪರಿಶಿಷ್ಟ ಜಾತಿ ಹಾಗೂ ಪಂಗಡದ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ₹42,000 ಕೋಟಿಯಷ್ಟು ಮೊತ್ತದಲ್ಲಿ ₹25,000 ಕೋಟಿಯನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸುವ ಮೂಲಕ ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯದ ವಿರುದ್ಧವಾಗಿ ನಡೆದುಕೊಂಡಿದೆ. ಅಷ್ಟೇ ಅಲ್ಲ ತಾನೇ ರೂಪಿಸಿರುವ ಕಾಯ್ದೆಯನ್ನು ಇಂತಹ ಅನುಚಿತ ಕ್ರಮದ ಮೂಲಕ ಅದು ಉಲ್ಲಂಘಿಸಿದೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.

‘ಬಜೆಟ್‌ನಲ್ಲಿ ದಲಿತರ ಜನಸಂಖ್ಯೆಗನುಗುಣವಾಗಿ ಶೇ 24.1ರಷ್ಟು ಅನುದಾನ ಮೀಸಲಿರಿಸಬೇಕು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಅವರಿಗೆ ಸರ್ಕಾರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ ಮಾಡಬೇಕು. ಪರಿಶಿಷ್ಟ ಜಾತಿ– ವರ್ಗಗಳ ಭೂ ಪರಭಾರೆ ನಿಷೇಧ ಕಾಯ್ದೆ (ಪಿಟಿಸಿಎಲ್) ಸೆಕ್ಷನ್ 3(1) (ಬಿ)ನಲ್ಲಿ ತಿದ್ದುಪಡಿ ಮಾಡಬೇಕು’ ಎಂದು ಮನವಿ ಮಾಡಿದರು.

‘ಲಿಡ್ಕರ್ ನಿಗಮಕ್ಕೆ ₹500 ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿ ಗಂಗಾ ಕಲ್ಯಾಣ, ಭೂ ಒಡೆತನ, ನೇರಸಾಲ, ಉದ್ಯಮಶೀಲತಾ, ಸ್ವಾವಲಂಬಿ ಸಾರಥಿ ಯೋಜನೆಗಳ ಘಟಕ ವೆಚ್ಚ ದ್ವಿಗುಣಗೊಳಿಸಬೇಕು’ ಎಂದು ಆಗ್ರಹಿಸಿದರು.
 
ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿ ಬರುವ ಶಾಲೆ ಮತ್ತು ವಸತಿ ನಿಲಯಗಳಲ್ಲಿ 5 ವರ್ಷಗಳಿಗಿಂತ ಹೆಚ್ಚು ಕಾಲದಿಂದ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ– ಹೊರಗುತ್ತಿಗೆ ನೌಕರರನ್ನು ಕಾಯಂ ಗೊಳಿಸಬೇಕು. ದೇವದಾಸಿ, ವಿಧವಾ ಮಹಿಳೆಯರು, ವೃದ್ಧರು ಹಾಗೂ ಅಂಗವಿಕಲರಿಗೆ ನೀಡುತ್ತಿರುವ ಮಾಸಿಕ ವೇತನವನ್ನು ₹5,000ಕ್ಕೆ ಹೆಚ್ಚಿಸಬೇಕು ಎಂಬುದೂ ಸೇರಿ 17ಕ್ಕೂ ಹೆಚ್ಚು ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು. 

ADVERTISEMENT

ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ಜಿಲ್ಲಾ ಸಂಚಾಲಕ ಏಳುಕೋಟಿ, ಪ್ರಮುಖರಾದ ಶಿವಬಸಪ್ಪ, ಹರಿಗೆ ರವಿ, ಚಂದ್ರಪ್ಪ ಜೋಗಿ, ಕೃಷ್ಣ ಬೊಮ್ಮನಕಟ್ಟೆ, ಎಂ. ರಮೇಶ್ ಚಿಕ್ಕಮರಡಿ, ನಾಗರಾಜ್ ಕಾಚಗೊಂಡನಹಳ್ಳಿ, ಜಗದೀಶ್ ಚರ್ಚಿಗುಂಡಿ, ಬಸವರಾಜ್ ಹಸ್ವಿ, ನಾಗರಾಜ್, ಯಡವಾಲ ಹನುಮಂತಪ್ಪ, ಮನ್ಸೂರ್ ಲಕ್ಕವಳ್ಳಿ, ಚೇತನ್‌ಕುಮಾರ್ ಹಸೂಡಿ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.