ಶಿವಮೊಗ್ಗ: ‘ಜೀವನದಲ್ಲಿ ಆರದಿರುವ ದೀಪವಿದ್ದರೆ ಅದು ವಿದ್ಯೆ ಮಾತ್ರ. ಆತ್ಮ ಇರುವವರೆಗೂ ವಿದ್ಯೆ ನಮ್ಮೊಂದಿಗೆ ಇರುತ್ತದೆ. ಹಣವನ್ನು ಯಾವುದೇ ಮಾರ್ಗದಿಂದ ಗಳಿಸಬಹುದು. ಆದರೆ, ವಿದ್ಯೆ ಸಂಪಾದಿಸಲು ಸಾಧ್ಯವಿಲ್ಲ’ ಎಂದು ನಿಟ್ಟೂರಿನ ನಾರಾಯಣಗುರು ಮಹಾಸಂಸ್ಥಾನ ಮಠದ ರೇಣುಕಾನಂದ ಸ್ವಾಮೀಜಿ ಹೇಳಿದರು.
ಬ್ರಹ್ಮಶ್ರೀ ನಾರಾಯಣಗುರು ಆರ್ಯ ಈಡಿಗ ಮಹಿಳಾ ಜಿಲ್ಲಾ ಸಂಘದಿಂದ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಾರಾಯಣ ಗುರುಗಳ ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
‘ವಿದ್ಯೆಯ ಜತೆಗೆ ವಿನಯವನ್ನೂ ರೂಢಿಸಿಕೊಂಡರೆ ಏಳಿಗೆ ಸಾಧ್ಯ. ಅನಕ್ಷರತೆ ಇರುವ ಯಾವುದೇ ಸಮುದಾಯಗಳು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಎಲ್ಲಾ ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕು’ ಎಂದರು.
‘ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಹೆಚ್ಚಿನ ಒತ್ತು ನೀಡಿದರೆ ಸಮುದಾಯದ ಅಭಿವೃದ್ಧಿಯಾಗಲಿದೆ. ಶಿಕ್ಷಣವಿದ್ದರೆ ಎಲ್ಲಿ ಬೇಕಾದರೂ ಬದುಕಬಹುದು. ಪ್ರಪಂಚ ವಿಸ್ತಾರವಾಗಿದ್ದು, ಸ್ವಯಂ ಉದ್ಯೋಗವಲ್ಲದೆ ಬೇರೆ ಬೇರೆ ಉದ್ಯೋಗಗಳನ್ನು ಮಾಡಿಕೊಂಡು ಬದುಕು ಕಟ್ಟಿಕೊಳ್ಳಬಹುದು. ವಿದ್ಯಾವಂತರು ಮನೆಯಿಂದ ಹೊರ ಬಂದು ಬದುಕು ರೂಪಿಸಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಹೇಳಿದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕೆ.ಕೆ. ಜ್ಯೋತಿ ಅವರನ್ನು ಸನ್ಮಾನಿಸಲಾಯಿತು.
ಶಾಸಕ ಎಸ್.ಎನ್. ಚನ್ನಬಸಪ್ಪ, ನಾರಾಯಣ ಗುರು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಕಲ್ಲನ, ಪ್ರಮುಖರಾದ ಪ್ರವೀಣ್ ಹಿರೆಇಡಗೋಡು, ಪುಷ್ಪಲತಾ ಮೂರ್ತಿ, ಗೀತಾಂಜಲಿ ದತ್ತಾತ್ರೇಯ, ಪ್ರೇಮಾ ವಿಜಯೇಂದ್ರ, ವೀಣಾ ವೆಂಕಟೇಶ್, ಶೋಭಾ ಮೋಹನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.