ADVERTISEMENT

ಶಿವಮೊಗ್ಗ ವಿಧಾನಪರಿಷತ್‌ ಚುನಾವಣೆ: ಕಾಂಗ್ರೆಸ್–ಬಿಜೆಪಿ ನೇರ ಹಣಾಹಣಿ

ವೃದ್ಧಿಸಿದ ಕಾಂಗ್ರೆಸ್‌ ಬಲ, ಕ್ಷೇತ್ರದಲ್ಲೇ ಠಿಕಾಣಿ ಹೂಡಿದ ಬಿ.ಎಸ್. ವೈ

ಚಂದ್ರಹಾಸ ಹಿರೇಮಳಲಿ
Published 1 ಡಿಸೆಂಬರ್ 2021, 5:08 IST
Last Updated 1 ಡಿಸೆಂಬರ್ 2021, 5:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿವಮೊಗ್ಗ: ದಾವಣಗೆರೆ ಜಿಲ್ಲೆಯ ಮೂರು, ಶಿವಮೊಗ್ಗ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಒಳಗೊಂಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಆಯ್ಕೆ ಬಯಸಿ ನಾಲ್ವರು ಅಭ್ಯರ್ಥಿಗಳು ಕಣದಲ್ಲಿ ಇದ್ದರೂ, ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ.

ಹಾಲಿ ಸದಸ್ಯ ಕಾಂಗ್ರೆಸ್‌ನ ಆರ್.ಪ್ರಸನ್ನಕುಮಾರ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬಿಜೆಪಿಯಿಂದ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಪುತ್ರ ಡಿ.ಎಸ್‌.ಅರುಣ್‌, ಜೆಡಿಯುನಿಂದ ಬಿ.ಕೆ. ಶಶಿಕುಮಾರ್, ಪಕ್ಷೇತರ ಅಭ್ಯರ್ಥಿ ಪಿ.ವೈ.ರವಿ ಕಣದಲ್ಲಿ ಇದ್ದಾರೆ. ಹಿಂದಿನ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಇತ್ತು. ಈ ಬಾರಿ ಜೆಡಿಎಸ್‌ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ. ಹೀಗಾಗಿ ಕಾಂಗ್ರೆಸ್, ಬಿಜೆಪಿ ಮಧ್ಯೆ ನೇರ ಸ್ಪರ್ಧೆಗೆ ಕಣ ಸಜ್ಜಾಗಿದೆ.

ಕ್ಷೇತ್ರದಲ್ಲೇ ಯಡಿಯೂರಪ್ಪ ಠಿಕಾಣಿ: ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಬಿಜೆಪಿ ನಾಯಕರು ಪಣತೊಟ್ಟವರಂತೆ ಕ್ಷೇತ್ರ ಸುತ್ತುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಒಂದು ವಾರ ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದು, ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಹತ್ತು ವಿಧಾನ ಸಭಾ ಕ್ಷೇತ್ರಗಳಲ್ಲಿ ಒಂಬತ್ತರಲ್ಲಿ ಬಿಜೆಪಿ ಶಾಸಕರಿದ್ದು, ಎಲ್ಲರೂ ಸಾಥ್ ನೀಡುತ್ತಿದ್ದಾರೆ.

ADVERTISEMENT

ಕಾಂಗ್ರೆಸ್‌ ಅಭ್ಯರ್ಥಿ ಪ್ರಸನ್ನಕುಮಾರ್ ಪರ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ ಸೇರಿದಂತೆ ಪಕ್ಷದ ಮುಖಂಡರ ದಂಡು ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ಸೊರಬ ಕ್ಷೇತ್ರದ ಮಾಜಿ ಶಾಸಕ ಮಧು ಬಂಗಾರಪ್ಪ, ಸಹಕಾರಿ ಧುರೀಣ ಆರ್.ಎಂ.ಮಂಜುನಾಥ ಗೌಡ ಅವರು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ ನಂತರ ಪಕ್ಷದ ಬಲ ವೃದ್ಧಿಸಿದೆ. ಜೆಡಿಎಸ್‌ ಮತಗಳನ್ನು ಸೆಳೆಯಲು ಎರಡೂ ಪಕ್ಷಗಳು ಕಸರತ್ತು ನಡೆಸಿವೆ.

‘ಹಿಂದಿನ ಚುನಾವಣೆಯಲ್ಲಿ ಹಣದ ಹೊಳೆ ಹರಿದಿತ್ತು. ಈ ಬಾರಿಯೂ ಹಲವು ಸದಸ್ಯರು ಅದೇ ನಿರೀಕ್ಷೆಯಲ್ಲಿ ಇದ್ದಾರೆ. ಇಲ್ಲಿ ಅಭ್ಯರ್ಥಿಯ ಒಳ್ಳೆಯತನ, ಪಕ್ಷನಿಷ್ಠೆಯ ಜತೆಗೆ ಹಣವೂ ಪ್ರಧಾನ ಪಾತ್ರ ವಹಿಸುತ್ತದೆ’ ಎನ್ನುತ್ತಾರೆ ಮತದಾರರು.

ಬಿಜೆಪಿಗೆ ಅಭಿವೃದ್ಧಿ ಮಂತ್ರ, ಕಾಂಗ್ರೆಸ್‌ಗೆ ಬೆಲೆ ಏರಿಕೆ ಅಸ್ತ್ರ: ಪ್ರಚಾರದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಜಾರಿಗೆ ತಂದ ಅಬಿವೃದ್ಧಿ ಕೆಲಸಗಳು, ಜನಪರ ಕಾರ್ಯಗಳನ್ನು ಬಿಜೆಪಿ ಪ್ರಸ್ತಾಪಿಸುತ್ತಿದೆ. ಕಾಂಗ್ರೆಸ್ ಪೆಟ್ರೋಲ್‌, ಡೀಸೆಲ್‌ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ರೈತ ವಿರೋಧಿ ಕಾನೂನು ವಿಷಯ ಪ್ರಸ್ತಾಪಿಸಿ ಬಿಜೆಪಿಗೆ ಪ್ರತಿ ಸವಾಲು
ಒಡ್ಡುತ್ತಿದೆ.

***

ಕಣದಲ್ಲಿರುವ ಅಭ್ಯರ್ಥಿಗಳು

ಆರ್. ಪ್ರಸನ್ನಕುಮಾರ್ – ಕಾಂಗ್ರೆಸ್

ಡಿ.ಎಸ್‌. ಅರುಣ್‌ – ಬಿಜೆಪಿ

ಬಿ.ಕೆ. ಶಶಿಕುಮಾರ್ – ಜೆಡಿಯು

ಪಿ.ವೈ. ರವಿ – ಪಕ್ಷೇತರ

***

ಮತದಾರರು 4,180

ಶಿವಮೊಗ್ಗ ಜಿಲ್ಲೆ 2,885

ದಾವಣಗೆರೆ ಜಿಲ್ಲೆ 1,295

––––––––––––––––

ಮತಗಟ್ಟೆಗಳು 365

ಶಿವಮೊಗ್ಗ ಜಿಲ್ಲೆ 257

ದಾವಣಗೆರೆ ಜಿಲ್ಲೆ 108

***

ಇದು ಪಕ್ಷಾತೀತ ಚುನಾವಣೆ. ಜನರು ಅಭ್ಯರ್ಥಿಯ ವ್ಯಕ್ತಿತ್ವಕ್ಕೆ ಮನ್ನಣೆ ನೀಡುತ್ತಾರೆ. ಬಿಜೆಪಿ ನಡೆಯಿಂದ ಜನರು ಬೇಸತ್ತು ಹೋಗಿದ್ದಾರೆ. ಇದು ಕಾಂಗ್ರೆಸ್‌ಗೆ ವರವಾಗಲಿದೆ.

–ಆರ್‌.ಪ್ರಸನ್ನಕುಮಾರ್, ಕಾಂಗ್ರೆಸ್‌ ಅಭ್ಯರ್ಥಿ.

***

ಕ್ಷೇತ್ರದ ಗ್ರಾಮ ಪಂಚಾಯತಿಗಳಲ್ಲಿ ಬಿಜೆಪಿ ಬೆಂಬಲಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅಭ್ಯರ್ಥಿ ನೆಪ ಮಾತ್ರ. ಪಕ್ಷವೇ ಪ್ರಧಾನ. ಹಾಗಾಗಿ, ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಗೆಲುವು ದೊರಕಲಿದೆ.

–ಡಿ.ಎಸ್‌.ಅರುಣ್‌, ಬಿಜೆಪಿ ಅಭ್ಯರ್ಥಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.