ADVERTISEMENT

ನಿವೇಶನ ಬದಲಿಗೆ ಇನ್ನು ಅಪಾರ್ಟ್‌ಮೆಂಟ್‌ಗೆ ಒತ್ತು: ಸುಂದರೇಶ್

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 7:31 IST
Last Updated 23 ಆಗಸ್ಟ್ 2025, 7:31 IST
ಎಚ್.ಎಸ್.ಸುಂದರೇಶ
ಎಚ್.ಎಸ್.ಸುಂದರೇಶ   

ಶಿವಮೊಗ್ಗ: ‘ಶೇ 50ರ ಅನುಪಾತದಲ್ಲಿ ಬಡಾವಣೆಗಳ ಅಭಿವೃದ್ಧಿಗೆ ಭೂಮಿ ಕೊಡಲು ರೈತರು ಮುಂದೆ ಬರುತ್ತಿಲ್ಲ. ಹೀಗಾಗಿ ಇನ್ನು ಮುಂದೆ ನಿವೇಶನಗಳ ಬದಲಿಗೆ ಪ್ರಾಧಿಕಾರದಿಂದ ಅಪಾರ್ಟ್‌ಮೆಂಟ್‌ಗಳ ನಿರ್ಮಿಸಿ ವಸತಿ ರಹಿತರಿಗೆ ಹಂಚಿಕೆ ಮಾಡಲು ಒತ್ತು ಕೊಡಲಿದ್ದೇವೆ’ ಎಂದು ಶಿವಮೊಗ್ಗ– ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ತಿಳಿಸಿದರು.

‘ಅದಕ್ಕೆ ಪೂರಕವಾಗಿ ಊರಗಡೂರು ವಸತಿ ಬಡಾವಣೆಯ 4 ಎಕರೆ ಪ್ರದೇಶ ಮತ್ತು ಸೋಮಿನಕೊಪ್ಪದ ಪ್ರಾಧಿಕಾರದ ಒಂದು ಎಕರೆ ಜಾಗದಲ್ಲಿ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಅತ್ಯಾಧುನಿಕ ಸೌಲಭ್ಯ ಒಳಗೊಂಡ ಅಪಾರ್ಟ್‌ಮೆಂಟ್‌ ನಿರ್ಮಿಸಲು ಸಿದ್ಧತೆ ನಡೆಸಿದ್ದೇವೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಗೋಪಶೆಟ್ಟಿಕೊಪ್ಪದಲ್ಲಿ 104 ಎಕರೆ ಜಮೀನಿನ ಪೈಕಿ ಶೇ 50ರ ಅನುಪಾತದಲ್ಲಿ ಅಭಿವೃದ್ಧಿಪಡಿಸಲು ರೈತರು ಒಪ್ಪಿಗೆ ಸೂಚಿಸಿರುವ 30 ಎಕರೆಯಲ್ಲಿ ಮೊದಲ ಹಂತದಲ್ಲಿ ಬಡಾವಣೆ ಅಭಿವೃದ್ಧಿಪಡಿಸಲು ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗಿದೆ. ಭದ್ರಾವತಿ ನಗರದಲ್ಲಿ ಸುಡಾ ಅಧೀನದ 34 ಎಕರೆ ಜಮೀನಿನಲ್ಲೂ ಬಡಾವಣೆ ಅಭಿವೃದ್ಧಿಗೆ ಶೀಘ್ರ ಕಾಮಗಾರಿ ಆರಂಭಿಸಲಾಗುತ್ತಿದೆ’ ಎಂದರು.

ADVERTISEMENT

‘ಸುಡಾ ವ್ಯಾಪ್ತಿಯಲ್ಲಿ ಮಹಾಯೋಜನೆ-11ರ ಕಾರ್ಯ ಪ್ರಗತಿಯಲ್ಲಿದೆ. ಪ್ರಸ್ತಾಪಿತ ಭೂ–ಉಪಯೋಗ ನಕ್ಷೆ. ರಸ್ತೆ ಪರಿಚಲನ ನಕ್ಷೆಗಳ ಸಿದ್ಧಪಡಿಸಿ ತಾತ್ಕಾಲಿಕ ಅನುಮೋದನೆ ಪಡೆಯಲು ಸರ್ಕಾರಕ್ಕೆ ಸಲ್ಲಿಸಲು ಪ್ರಸ್ತಾವ ಸಿದ್ಧಪಡಿಸಲಾಗಿದೆ’ ಎಂದು ಹೇಳಿದರು.

‘ಸ್ವಾಮಿ ವಿವೇಕಾನಂದ ಬಡಾವಣೆಯ ಮಹಿಳಾ ಪಾಲಿಟೆಕ್ನಿಕ್ ಪಕ್ಕದಲ್ಲಿ ಮಾಲ್ ನಿರ್ಮಿಸಲು ಉದ್ದೇಶಿಸಲಾಗಿದೆ. ಜೆ.ಎಚ್. ಪಟೇಲ್ ಬಡಾವಣೆಯ ಸೋಮಿನಕೊಪ್ಪ ಮುಖ್ಯರಸ್ತೆಯಲ್ಲೂ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ 60 ಮೀಟರ್ ಅಗಲದ ಹೊರ ವರ್ತುಲ ರಸ್ತೆ ₹ 50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಹಾಗೂ ಜೆ.ಎಚ್.ಪಟೇಲ್ ಬಡಾವಣೆ, ಅಟಲ್ ಬಿಹಾರಿ ವಾಜಪೇಯಿ ಬಡಾವಣೆ ಮತ್ತು ನಿಧಿಗೆ-ಮಾಚೇನಹಳ್ಳಿ ಬಡಾವಣೆಯಲ್ಲಿ ಒಟ್ಟು ಮೂರು ಉದ್ಯಾನಗಳ ಅಭಿವೃದ್ಧಿಪಡಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ’ ಎಂದು ಹೇಳಿದರು.

‘ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಶಿವಮೊಗ್ಗ ಮತ್ತು ಭದ್ರಾವತಿ ನಗರದಲ್ಲಿ ಒಟ್ಟು 57 ಉದ್ಯಾನ ಹಾಗೂ 25 ಆಟೊ ಶೆಲ್ಟರ್‌ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅಲ್ಲದೇ ಪ್ರಾಧಿಕಾರಕ್ಕೆ ಅಟಲ್ ಬಿಹಾರಿ ವಾಜಪೇಯಿ (ಮಲ್ಲಿಗೇನಹಳ್ಳಿ) ವಸತಿ ಬಡಾವಣೆಯಲ್ಲಿ ಹೊಸ ಕಚೇರಿ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ’ ಎಂದರು.

ಸೂಡಾ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಸದಸ್ಯರಾದ ಎಚ್. ರವಿಕುಮಾರ್‌, ಚನ್ನಪ್ಪ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Quote - ಊರುಗಡೂರು ವಸತಿ ನಿವೇಶನ ಹಂಚಿಕೆ ಕಾರ್ಯ ಜೇನುಗೂಡಿಗೆ ಕೈ ಹಾಕಿದಂತಿದೆ. ಆದರೂ ಮುಂದಿನ ಒಂದೂವರೆ ತಿಂಗಳಲ್ಲಿ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಎಚ್.ಎಸ್.ಸುಂದರೇಶ್ ಸುಡಾ ಅಧ್ಯಕ್ಷ

Cut-off box - ‘ಅಕ್ರಮ ಬಡಾವಣೆ ರದ್ದು ಮನೆ ಕಟ್ಟದವರಿಗೆ ನೋಟಿಸ್’ ಅಕ್ರಮ ಬಡಾವಣೆಗಳನ್ನು ಗುರುತಿಸಿ ಅವುಗಳನ್ನು ರದ್ದುಗೊಳಿಸುವಂತೆ ಸರ್ಕಾರದಿಂದ ಆದೇಶ ಬಂದಿದೆ. ಅಂತಹ ಲೇಔಟ್‌ಗಳ ಪರಿಶೀಲನೆ ಕಾರ್ಯ ಆರಂಭವಾಗಿದೆ ಎಂದು ಹೇಳಿದ ಸುಂದರೇಶ್ ‘ಪ್ರಾಧಿಕಾರದಿಂದ ಮಂಜೂರು ಆದ ನಿವೇಶನಗಳಲ್ಲಿ ನಿಗದಿತ ಅವಧಿಯಲ್ಲಿ ಮನೆ ಕಟ್ಟಿಕೊಳ್ಳದಿದ್ದರೆ ವಾಪಸ್ ಪಡೆಯುವಂತೆಯೂ ಸರ್ಕಾರ ನಿರ್ದೇಶನ ನೀಡಿದೆ. ಮನೆ ಕಟ್ಟಿಕೊಳ್ಳದವರಿಗೆ ನೋಟಿಸ್ ಕೂಡ ನೀಡಲಾಗುವುದು’ ಎಂದರು. ‘ವಾಜ‍ಪೇಯಿ ಬಡಾವಣೆಯಲ್ಲಿ ಅನರ್ಹರಿಗೆ ಹಂಚಿಕೆಯಾದ ನಿವೇಶನಗಳ ವಾಪಸ್ ಪಡೆಯಲಾಗಿದೆಯೇ ಎಂಬ ಪ್ರಶ್ನೆಗೆ ಅಂಥವರು ಕೋರ್ಟಿನ ಮೊರೆ ಹೋಗಿ ತಡೆಯಾಜ್ಞೆ ತರುತ್ತಿದ್ದಾರೆ’ ಎಂದು ನ್ಯಾಯಾಲಯದ ಕಡೆ ಕೈ ತೋರಿಸಿ ಸುಂದರೇಶ್ ತಾವು (ಪ್ರಾಧಿಕಾರ) ಅಸಹಾಯಕ ಎಂದು ಹೇಳಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.