ADVERTISEMENT

Web Exclusive|ಶಿವಮೊಗ್ಗ: ಶತಮಾನದ ಹಾದಿ ಸವೆಸಿದ ಎಂಎಂಎಸ್–ಎಸ್‌ಟಿಎ ಬಸ್

ವೆಂಕಟೇಶ ಜಿ.ಎಚ್.
Published 25 ಡಿಸೆಂಬರ್ 2025, 19:31 IST
Last Updated 25 ಡಿಸೆಂಬರ್ 2025, 19:31 IST
<div class="paragraphs"><p>50ರ ದಶಕದಲ್ಲಿ ಓಡಾಡುತ್ತಿದ್ದ ಬೆಂಜ್&nbsp;ಕಂಪೆನಿಯ ಎಂಎಂಎಸ್–ಎಸ್‌ಟಿಎ ಬಸ್<br></p></div>

50ರ ದಶಕದಲ್ಲಿ ಓಡಾಡುತ್ತಿದ್ದ ಬೆಂಜ್ ಕಂಪೆನಿಯ ಎಂಎಂಎಸ್–ಎಸ್‌ಟಿಎ ಬಸ್

   

ಶಿವಮೊಗ್ಗ: ಅದು 1917ರ ಡಿಸೆಂಬರ್ ತಿಂಗಳು. ಇದ್ದಿಲು (ಚಾರ್‌ಕೋಲ್‌) ಉರಿದು ಅದರಿಂದ ಹಾಯುತ್ತಿದ್ದ ಉಗಿಯಿಂದ ಓಡುತ್ತಿದ್ದ ಬಸ್, ಹಸಿರ ಹಾದಿಯಲ್ಲಿ ಏದುಸಿರು ಬಿಡುತ್ತಾ ಶಿವಮೊಗ್ಗೆಯಿಂದ ಆಗುಂಬೆಯತ್ತ ಹೊರಟಿತ್ತು. ಈಗಿನಂತೆ ಆಗ ರಸ್ತೆ ಇರಲಿಲ್ಲ. ದಟ್ಟ ಕಾನನದ ನಡುವೆ ಇದ್ದದ್ದು ಮಣ್ಣಿನ ಬಂಡಿ ದಾರಿ. ಅದರಲ್ಲೇ ಸಾಗಿತ್ತು ಬಸ್‌ನ ಸವಾರಿ. ಚಾಲಕ ಆಗಾಗ ಇಳಿದು–ಹತ್ತುತ್ತಾ ರಸ್ತೆಗೆ ಅಡ್ಡಲಾಗಿದ್ದ ಗಿಡ–ಗಂಟಿ, ಮರಗಳ ಕೊಂಬೆ ಕತ್ತರಿಸುತ್ತಾ ದಾರಿ ಮಾಡಿಕೊಂಡು ತೀರ್ಥಹಳ್ಳಿ ದಾಟಿಕೊಂಡು ಆಗುಂಬೆ ಮುಟ್ಟಿದಾಗ ಬರೋಬ್ಬರಿ ಒಂದು ವಾರ ಕಳೆದಿತ್ತು..

ಹೀಗೆ 108 ವರ್ಷಗಳ ಹಿಂದೆ ದೂರದ ಕೋಲಾರದಿಂದ ಶಿವಮೊಗ್ಗಕ್ಕೆ ಬಂದು ಇಲ್ಲಿ ಮೊದಲ ಬಾರಿಗೆ ಬಸ್ ಸಂಚಾರ ಆರಂಭಿಸಿ ಸಾಹಸ ಮೆರೆದಿದ್ದ ತನ್ನ ಅಜ್ಜ ಮೀರ್ ಮೊಯಿದ್ದೀನ್ ಸಾಬ್ ಅವರ ಯಶೋಗಾಥೆಯನ್ನು ಮೊಮ್ಮಗ ಮೀರ್‌ ಅಲ್ತಾಫ್ ಹುಸೇನ್ ಬಿಚ್ಚಿಟ್ಟರು. 

ADVERTISEMENT

ಮೀರ್ ಮೊಯಿದ್ದೀನ್ ಸಾಹೇಬರು ಮೂಲತಃ ಕೋಲಾರದವರು. ಬ್ರಿಟಿಷ್ ಸರ್ಕಾರದಲ್ಲಿ ಅಂಚೆ ಗುತ್ತಿಗೆದಾರ (ಮೇಲ್ ಕಂಟ್ರಾಕ್ಟರ್). ಕೋಲಾರದಲ್ಲಿದ್ದಾಗ ಅಲ್ಲಿನ ಮುಖ್ಯ ಪೋಸ್ಟ್‌ ಮಾಸ್ಟರ್ ಅವರೊಂದಿಗೆ ಸ್ನೇಹ ಬೆಳೆದಿತ್ತು. ಆ ಅಧಿಕಾರಿ ಶಿವಮೊಗ್ಗಕ್ಕೆ ವರ್ಗಾವಣೆ ಆಗಿ ಬಂದಾಗ ಆತನ ಒತ್ತಾಸೆಯಂತೆ ಮೊಯಿದ್ದೀನ್ ಕೂಡ ಶಿವಮೊಗ್ಗಕ್ಕೆ ಬಂದರು. ಇಲ್ಲಿನ ಗಾಂಧಿ ಬಜಾರ್‌ನಲ್ಲಿ ನೆಲೆಸಿದ್ದ ಅವರು, ಶಿವಮೊಗ್ಗದಿಂದ ನಿತ್ಯ ತೀರ್ಥಹಳ್ಳಿ, ಆಗುಂಬೆ ಹಾಗೂ ಚಿತ್ರದುರ್ಗಕ್ಕೂ ಅಂಚೆ ಸಾಗಾಣೆಯ ಗುತ್ತಿಗೆ ಪಡೆದಿದ್ದರು. ಆರಂಭದಲ್ಲಿ ಕೆಲಕಾಲ ಕುದುರೆ ಗಾಡಿಯಲ್ಲಿ ಅಂಚೆ ಸಾಗಣೆ ನಡೆಯಿತು. ನಂತರ ಅದೇ ಬ್ರಿಟಿಷ್‌ ಅಂಚೆ ಅಧಿಕಾರಿಯ ಪ್ರೋತ್ಸಾಹದಿಂದ ಬಸ್‌ ಖರೀದಿಸಲು ಮುಂದಾದರು. ಆತನದ್ದೇ ಶಿಫಾರಸು ಪಡೆದು ಇಂಗ್ಲೆಂಡ್‌ನಿಂದ ಬಸ್‌ ಖರೀದಿಸಿ ತಂದರು. ಅಂಚೆ ಪಾರ್ಸೆಲ್‌ ಸಾಗಣೆಗಾಗಿ ಮೊದಲಿಗೆ ತೀರ್ಥಹಳ್ಳಿ–ಆಗುಂಬೆ ಮಾರ್ಗದಲ್ಲಿಯೇ ಅದರ ಓಡಾಟ ಆರಂಭಿಸಿದ್ದರು. 

ಬಿದಿರು ಸುಟ್ಟು ಭದ್ರಾವತಿಯ ಕಾಗದ ಕಾರ್ಖಾನೆಗೆ ಇದ್ದಲು ಪೂರೈಸುತ್ತಿದ್ದವರೇ ಮೊಯಿದ್ದೀನ್ ಅವರ ಬಸ್‌ಗೂ ಇಂಧನ (ಇದ್ದಿಲು) ಕೊಡುತ್ತಿದ್ದರು. ಇದ್ದಿಲಿನ ಉಗಿಯಿಂದ ಓಡುತ್ತಿದ್ದ ಬಸ್‌ಗೆ 70 ಟಿನ್ ಸಾಮರ್ಥ್ಯದ ಟ್ಯೂಬ್ ಇಲ್ಲದ ಸಾಲಿಡ್ ಟೈರ್‌ ಇದ್ದವು. ಕೆಳಗೆ ಎತ್ತಿನ ಗಾಡಿಯ ರೀತಿ ಹಲಗೆ ಜೋಡಣೆ. ಪ್ರಯಾಣಿಕರು ಕೂರಲು ಎರಡು ಕಡೆ ಬೆಂಚ್‌ ಕೂರಿಸಿದ್ದರು. ಬಸ್‌ನ ಯಾವುದೇ ಭಾಗದಿಂದ ಬೇಕಾದರೂ ಪ್ರಯಾಣಿಕರು ಇಳಿಯಬಹುದಿತ್ತು.

ಹಳ್ಳಿ ಪಂಚಾಯ್ತಿ..

ಬಸ್‌ ಹೊರಟರೆ ಉಗಿಯ ಕೊಳವೆಯಿಂದ ದಟ್ಟ ಹೊಗೆ ಹೊರ ಉಗುಳುತ್ತಿತ್ತು. ಜೊತೆಗೆ ‘ಗಡ್‌ ಗಡ್’ ಜೋರು ಸದ್ದು. ಬಸ್‌ನ ಆರ್ಭಟಕ್ಕೆ ರಸ್ತೆಯ ಅಕ್ಕಪಕ್ಕದ ಹಳ್ಳಿಗಳ ಜನರು ಬೆದರುತ್ತಿದ್ದರು. ಯಾವುದೋ ದಯ್ಯ ಬಂದಿತೆಂದು ಬಾಗಿಲು ಹಾಕಿಕೊಂಡು ಮನೆಯೊಳಗೆ ಸೇರಿಕೊಳ್ಳುತ್ತಿದ್ದರು. ಬರೋಬ್ಬರಿ ಮೂರು ತಿಂಗಳು ಬಸ್‌ನ ಯಾರೂ ಸನಿಹಕ್ಕೂ ಬಂದಿರಲಿಲ್ಲ. ಹೀಗಾಗಿ ದಾರಿ ಮಧ್ಯದಲ್ಲಿ ಬಸ್ ಹತ್ತುವವರ ಸುಳಿವೇ ಇರಲಿಲ್ಲ. ಶಿವಮೊಗ್ಗದಿಂದ ಕರೆದೊಯ್ಯುತ್ತಿದ್ದ ಪ್ರಯಾಣಿಕರನ್ನೇ ವಾಪಸ್ ಕರೆತರಬೇಕಿತ್ತು. ಇಲ್ಲವೇ ಅಂಚೆ ಪಾರ್ಸಲ್ ಮಾತ್ರ ಒಯ್ಯಬೇಕಿತ್ತು.

‘ಇದು ಹೀಗೆ ಆದರೆ ಸರಿ ಆಗುವುದಿಲ್ಲ ಎಂದು ಭಾವಿಸಿದ ಮೊಯಿದ್ದೀನ್ ಸಾಬ್, ಕುದುರೆ ಗಾಡಿಯಲ್ಲಿ ಅಂಚೆ ಪಾರ್ಸಲ್‌ ಒಯ್ಯುತ್ತಿದ್ದಾಗ ಪರಿಚಯವಾಗಿದ್ದ ಊರುಗಳ ಮುಖಂಡರ ಕಂಡು ಅದು ಅಂಚೆ ಸಾಗಣೆ ಹಾಗೂ ಜನರ ಓಡಾಟಕ್ಕೆ ಬಸ್‌ ಆರಂಭಿಸಿದ್ದು, ಅದು ಜನರ ಅನುಕೂಲಕ್ಕಾಗಿಯೇ ಇರುವುದು ಎಂಬುದನ್ನು ಅವರಿಗೆ ಮನದಟ್ಟು ಮಾಡಿದ್ದರು. ಅವರ ಸಹಕಾರದಿಂದ ಕ್ರಮೇಣ ಜನರ ವಿಶ್ವಾಸ ಗೆದ್ದರಂತೆ’ ಎಂದು ಅಜ್ಜನ ಬಸ್ ಉದ್ಯಮದ ಆರಂಭದ ದಿನಗಳ ಹೋರಾಟವನ್ನು ಅಲ್ತಾಫ್ ಸ್ಮರಿಸುತ್ತಾರೆ.

ಒಮ್ಮೆ ಬಸ್ ಹತ್ತಿದ್ದರೆ ಹೊಗೆಯ ರೇಜಿಗೆ ಪ್ರಯಾಣಿಕರ ಮೈಯೆಲ್ಲ ಕಪ್ಪಿಡುತ್ತಿತ್ತು. ಬಸ್ ಇಳಿದವರೇ ಮನೆಗೆ ಹೋಗಿ ಸ್ನಾನ ಮಾಡಬೇಕಿತ್ತು. ಬಸ್ ಆರಂಭಿಸಿದ ಮೊದಲ ದಿನಗಳಲ್ಲಿ ಟಿಕೆಟ್ ಇರಲಿಲ್ಲ. ಆಗ ಅಂಚೆ ಪಾರ್ಸಲ್ ಸಾಗಣೆಗೆ ಮೊದಲ ಆದ್ಯತೆ. ಪ್ರಯಾಣಿಕರು ಹತ್ತಿದರೂ ಅವರು ಹಣದ ಬದಲು ಅಕ್ಕಿ, ರಾಗಿ, ಬಾಳೆಹಣ್ಣು, ಹಲಸು ಹೀಗೆ ತಾವು ಬೆಳೆದದ್ದನ್ನು ತಂದುಕೊಡುತ್ತಿದ್ದರು.

ಬೆಡ್‌ಪೋರ್ಡ್‌ ಬಸ್‌ಗೆ ಬಡ್ತಿ..

ಆಗುಂಬೆ ಮಾರ್ಗದಲ್ಲಿ ಚಾರ್‌ಕೋಲ್‌ ಬಸ್‌ನ ಓಡಾಟ ಯಶಸ್ವಿಯಾಗುತ್ತಿದ್ದಂತೆಯೇ ಮೊಯಿದ್ದೀನ್‌ ಚಿತ್ರದುರ್ಗಕ್ಕೂ ಬಸ್ ಆರಂಭಿಸಿದ್ದರು. ಮೊದಲ ಬಸ್‌ಗೆ ಇಟ್ಟಿದ್ದ ಎಂಎಂಎಸ್‌–ಎಸ್‌ಟಿಎ (ಮೀರ್‌ ಮೊಯಿದ್ದೀನ್ ಸಾಬ್–ಶಿವಮೊಗ್ಗ, ತೀರ್ಥಹಳ್ಳಿ ಹಾಗೂ ಆಗುಂಬೆ) ಹೆಸರನ್ನೇ ಚಿತ್ರದುರ್ಗ ಮಾರ್ಗದ ಬಸ್‌ಗೂ ಮುಂದುವರೆಸಿದ್ದರು. ಆರಂಭದಲ್ಲಿ ಸುಮಾರು 20 ವರ್ಷ ಚಾರ್‌ಕೋಲ್ ಬಸ್ ಓಡಾಟ ನಡೆದಿತ್ತು. ನಂತರ ಪೆಟ್ರೋಲ್‌ನಿಂದ ಓಡುವ ಪೋರ್ಡ್ ಕಂಪೆನಿಯ ಬೆಡ್‌ಫೋರ್ಡ್ ಬಸ್ಸನ್ನು ಇಂಗ್ಲೆಂಡ್‌ನಿಂದಲೇ ಖರೀದಿಸಿ ತಂದರು. ಇದು ಕೂಡ ಟ್ರೂಬ್‌ ಇಲ್ಲದ ಸಾಲಿಡ್‌ ಟೈರ್‌ ಬಸ್ ಆಗಿತ್ತು. ಇದು ಕಂಪೆನಿಯ ಸ್ಥಿತ್ಯಂತರದ ಕಾಲ ಎನ್ನುತ್ತಾರೆ.

1952ರಲ್ಲಿ ಪೆಟ್ರೋಲ್‌ ಎಂಜಿನ್‌ನ ಬೆಂಜ್ (ಈಗಿನ ಟಾಟಾ ಬಸ್‌ನ ಮುತ್ತಜ್ಜ) ಬಸ್ಸನ್ನು ಇಂಗ್ಲೆಂಡ್‌ನಿಂದ ₹12,500 ಕೊಟ್ಟು ಖರೀದಿಸಿ ತಂದಿದ್ದರು. ಅದು ಟ್ಯೂಬ್ ಇರುವ ಟೈರ್ ಹೊಂದಿತ್ತು. 

ಶಿವಮೊಗ್ಗ–ಬನವಾಸಿ, ಶಿವಮೊಗ್ಗ–ಆನವಟ್ಟಿ ನಡುವೆ ಸದ್ಯ ಓಡಾಟ ನಡೆಸಿರುವ ಎಂಎಂಎಸ್–ಎಸ್‌ಟಿಎ ಬಸ್‌ಗಳು


ಡ್ರೈವರ್ ಅಲ್ಲ ಬಸ್ ಪೈಲಟ್ !

ಲಂಡನ್‌ನಿಂದ ಮದ್ರಾಸ್‌ನ ಬಂದರಿಗೆ ಬಂದಿದ್ದ ಬಸ್ಸನ್ನು ಓಡಿಸಲು ಬೆಂಜ್ ಕಂಪೆನಿಯವರು ಬ್ರಿಟನ್‌ನಿಂದ ಚಾಲಕನ ಕಳಿಸಿದ್ದರು. ವಿಮಾನದ ಪೈಲಟ್ ರೀತಿ ಬಿಳಿ ಪ್ಯಾಂಟ್, ಷರ್ಟ್, ಹ್ಯಾಟ್, ಟೈ ಧರಿಸಿ ಟಾಕು ಟೀಕಾಗಿರುತ್ತಿದ್ದ ಆ ಚಾಲಕನನ್ನು ಮೂರು ತಿಂಗಳು ಶಿವಮೊಗ್ಗದ ಸರ್ಕಿಟ್‌ ಹೌಸ್‌ನಲ್ಲಿ ಇರಿಸಲಾಗಿತ್ತು. ಇಲ್ಲಿ ಇಬ್ಬರಿಗೆ ಚಾಲನೆ ಕಲಿಸಿ ಆತ ವಾಪಸ್ ಮರಳಿದ್ದರು.

ಬೆಂಜ್ ನಂತರ ಅದೇ ವರ್ಷ ಶೆವರ್ಲೆ ಬಸ್ ಕೂಡ ತರಿಸಿದ್ದರು. ಮುಂದೆ ಲೇಲ್ಯಾಂಡ್ ಬಸ್ಸುಗಳು ಆರಂಭವಾದವು. 2 ಪೈಸೆ, 10 ಪೈಸೆ, ನಾಲ್ಕಾಣೆ ಟಿಕೆಟ್‌ ಆರಂಭವಾಯಿತು. ಡ್ರೈವರ್‌ ಹಾಗೂ ಕಂಡಕ್ಟರ್‌ಗೆ ದಿನಕ್ಕೆ 2 ಕಾಸು ವೇತನ. ಮುಂದೆ ಸಾಗರ, ಶಿಕಾರಿಪುರ, ಶಿರಾಳಕೊಪ್ಪ, ಆನವಟ್ಟಿ, ಹಿರೇಕೆರೂರು, ಶಿರಸಿ, ಹಾನಗಲ್, ಹಾವೇರಿ, ಬಳ್ಳಾರಿ, ದಾವಣಗೆರೆ ಮಾರ್ಗದಲ್ಲೂ ಬಸ್ ಓಡಾಟ ಆರಂಭಿಸಿದರು. ಒಂದು ಬಸ್‌ನಿಂದ ಆರಂಭವಾದ ಯಾನ 70 ಬಸ್‌ಗಳಿಗೆ ತಲುಪಿತ್ತು. ಮೊದಲ ರೂಟ್‌ನ ಹೆಸರನ್ನೇ (ಎಂಎಂಎಸ್–ಎಸ್‌ಟಿಎ) ಕಂಪೆನಿಗೆ ಇಟ್ಟರು. ಜೊತೆಗೆ ಹೊಸ ಮಾರ್ಗಗಳ ಅಂಚೆ ಗುತ್ತಿಗೆಯ ಹೊಣೆಯೂ ಇವರದ್ದಾಯಿತು. 1962ರಲ್ಲಿ ಮೀರ್ ಮೊಯಿದ್ದೀನ್ ಸಾಬ್ ನಿಧನರಾದ ನಂತರ ಅವರ ನಾಲ್ವರು ಮಕ್ಕಳು ಸೇರಿ (ಮೀರ್ ಆಜಮ್, ಮೀರ್ ಅಬ್ದುಲ್ ಮತೀನ್, ಮೀರ್ ಅಬ್ದುಲ್‌ ಸಲಾಂ, ಮೀರ್ ಅಕ್ಮಲ್ ಪಾಶಾ) ಬಸ್‌ಗಳನ್ನು ಮುನ್ನಡೆಸಿದರು. 1976ರಲ್ಲಿ ಬಸ್ ಮಾರ್ಗಗಳ ರಾಷ್ಟ್ರೀಕರಣದ ಫಲವಾಗಿ ಸುಮಾರು 70 ಬಸ್‌ಗಳನ್ನು ಸರ್ಕಾರ ವಶಕ್ಕೆ ಪಡೆಯಿತು. ಈಗ ಶಿವಮೊಗ್ಗ–ಆನವಟ್ಟಿ– ಹಾನಗಲ್, ಶಿವಮೊಗ್ಗ–ಬನವಾಸಿ–ಶಿರಸಿ, ಶಿವಮೊಗ್ಗ– ಆನವಟ್ಟಿ ಹಾಗೂ ಸಾಗರ–ಹಾವೇರಿ ಮಾರ್ಗದಲ್ಲಿ 12 ಬಸ್‌ಗಳು ಓಡಾಟ ನಡೆಸುತ್ತಿವೆ. ಈಗ ಮೀರ್ ಮೊಯಿದ್ದೀನ್ ಅವರ ನಾಲ್ಕನೇ ತಲೆಮಾರು ಈ ಬಸ್‌ಗಳ ದೇಖರೇಕಿ ಮಾಡುತ್ತಿದೆ.

ಮೀಸೆ ರಂಗಣ್ಣ

ಆಂಬುಲೆನ್ಸ್ ರೀತಿಯೂ ಕೆಲಸ:

‘ಸರ್ಕಾರ ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ಆರಂಭಿಸುವ ಮುನ್ನವೇ ಮೀರ್‌ ಮೊಯಿದ್ದೀನ್ ಕುಟುಂಬ ತಮ್ಮ ಬಸ್‌ಗಳಲ್ಲಿ ಆ ಸವಲತ್ತು ಕಲ್ಪಿಸಿತ್ತು. ಎಂಎಂಎಸ್‌ ಬಸ್‌ಗಳಲ್ಲಿ ಮಿಡ್ಲ್‌ಸ್ಕೂಲ್‌ವರೆಗಿನ ಮಕ್ಕಳಿಗೆ ಪ್ರಯಾಣ ಸಂಪೂರ್ಣ ಉಚಿತ, ಹೈಸ್ಕೂಲ್, ಕಾಲೇಜು ಮಕ್ಕಳಿಗೆ ಅರ್ಧ ಚಾರ್ಜು ಪಡೆಯುತ್ತಿದ್ದರು’ ಎನ್ನುತ್ತಾರೆ ಶಿವಮೊಗ್ಗ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಆರ್‌.ರಂಗಪ್ಪ (ಮೀಸೆ ರಂಗಣ್ಣ).

’ಆಗೆಲ್ಲ ಈ ಬಸ್‌ಗಳು ಆಂಬುಲೆನ್ಸ್ ರೀತಿಯೂ ಕಾರ್ಯನಿರ್ವಹಿಸಿವೆ. ಗ್ರಾಮೀಣ ಪ್ರದೇಶಗಳಲ್ಲಿ ಆಸ್ಪತ್ರೆ ಸೌಲಭ್ಯ ಇರಲಿಲ್ಲ. ಗರ್ಭಿಣಿ ಹೆಣ್ಣು ಮಕ್ಕಳನ್ನು ಅಲ್ಲಿಂದ ಕರೆತಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಬಿಡುತ್ತಿದ್ದರು. ಬಹಳಷ್ಟು ಬಾರಿ ಬಸ್‌ನಲ್ಲಿಯೇ ಹೆರಿಗೆ ಆಗಿದೆ. ಬಸ್‌ಗಳ ಓಡಾಟವನ್ನು ಬರೀ ಉದ್ಯಮವನ್ನಾಗಿ ನೋಡದೇ ಮಾನವೀಯ ಹಾದಿಯಲ್ಲಿ ಓಡಿಸಿ ಮಲೆನಾಡಿನ ಜನರ ಮನಸ್ಸು ಗೆದ್ದವರು ಮೀರ್ ಮೊಯಿದ್ದೀನ್ ಸಾಹೇಬರು. ಅದೇ ಕಾರಣಕ್ಕೆ ಆ ಸಂಸ್ಥೆಯ ಬಸ್‌ಗಳು ಇಂದು ಶತಮಾನದ ಹಾದಿ ಪೂರೈಸಿವೆ’ ಎಂದು ರಂಗಪ್ಪ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

‘ಕೆಲ ವರ್ಷಗಳ ಹಿಂದೆ ಹೈಕೋರ್ಟ್‌ನಲ್ಲಿ ಪ್ರಕರಣವೊಂದರ ವಿಚಾರಣೆಗೆ ಹೋದಾಗ ಅಲ್ಲಿ ಎಂಎಂಎಸ್‌ ಬಸ್‌ನವರ ಕೇಸ್ ಎಂದು ತಿಳಿದು ಜಡ್ಜ್ ರಾಮಾ ಜೋಯಿಸ್ ತಮ್ಮ ಬಾಲ್ಯದ ಬಗ್ಗೆ ಮಾತನಾಡಿದ್ದರು. ತಾವು ಶಾಲೆ ಓದುವಾಗ ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಹೊರಟ ಎಂಎಂಎಸ್ ಬಸ್, ಮಂಡಗದ್ದೆಗೆ ಬಂದರೆ ಆಗ ಸಂಜೆ 5 ಗಂಟೆ, ನಮ್ಮ ಶಾಲೆ ಬಿಟ್ಟಿತು ಎಂದರ್ಥ. ನಾವು ಆ ಬಸ್ ಬರುವುದನ್ನೇ ಕಾಯುತ್ತಿದ್ದೆವು. ಅವರು ಶಾಲೆ ಮಕ್ಕಳನ್ನು ಉಚಿತವಾಗಿ ಕರೆದೊಯ್ಯುತ್ತಿದ್ದರು ಎಂದು ನೆನಪಿಸಿಕೊಂಡಿದ್ದರು’ ಎಂದು ಮೀರ್ ಅಲ್ತಾಫ್ ಹುಸೇನ್ ಖುಷಿಯಿಂದ ಸ್ಮರಿಸುತ್ತಾರೆ.

ಅಲ್ತಾಫ್

ಬಂಗಾರಪ್ಪ–ಯಡಿಯೂರಪ್ಪ ಓಡಾಟ..

ಮಾಜಿ ಮುಖ್ಯಮಂತ್ರಿಗಳಾದ ಎಸ್‌.ಬಂಗಾರಪ್ಪ ಹಾಗೂ ಬಿ.ಎಸ್‌.ಯಡಿಯೂರಪ್ಪ ತಮ್ಮ ರಾಜಕೀಯದ ಆರಂಭದ ದಿನಗಳಲ್ಲಿ ಎಂಎಂಎಸ್‌ ಬಸ್‌ಗಳಲ್ಲಿ ಓಡಾಟ ನಡೆಸಿದ್ದವರು. ಬಂಗಾರಪ್ಪ ಮೊದಲ ಬಾರಿಗೆ ಶಾಸಕರಾದ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ರೈಲಿನಲ್ಲಿ ಹೊರಡುವ ಮೊದಲು ಎಂಎಂಎಸ್‌ ಬಸ್‌ ಕಚೇರಿಗೆ ಕರೆ ಮಾಡಿ ಹೇಳುತ್ತಿದ್ದರಂತೆ.

‘ಬಂಗಾರಪ್ಪ ಸಾಹೇಬರು ನಸುಕಿನಲ್ಲಿ ಶಿವಮೊಗ್ಗಕ್ಕೆ ಬಂದು ಎಚ್‌ಪಿಸಿ ಟಾಕೀಸ್ ಪಕ್ಕದ ಬೃಂದಾವನ ಲಾಡ್ಜ್‌ಗೆ ತೆರಳಿ ಸ್ನಾನ, ಉಪಹಾರ ಮುಗಿಸಿ 9 ಗಂಟೆಗೆ ಬಸ್‌ ಸ್ಟ್ಯಾಂಡ್‌ಗೆ ಬರುತ್ತಿದ್ದರು. ಆಗ ಆನವಟ್ಟಿಗೆ ಹೋಗುವ ಎಂಎಂಎಸ್ ಬಸ್‌ ಸಿದ್ಧವಾಗಿರುತ್ತಿತ್ತು. ಅವರು ಬರುವುದು ಐದೋ, ಹತ್ತು ನಿಮಿಷ ತಡವಾದರೂ ಕಾಯುತ್ತಾ ನಿಲ್ಲುತ್ತಿದ್ದೆವು. ಅವರಿಗೆಂದೇ ಮೊದಲ ಸೀಟು ಮೀಸಲಿರಿಸುತ್ತಿದ್ದೆವು. ಆನವಟ್ಟಿಗೆ ಬಸ್‌ ಕೊನೆ ಆದರೂ ಅಲ್ಲಿಂದ ಕುಬಟೂರಿನ ಅವರ ಮನೆಗೆ ಕರೆದೊಯ್ದು ಬಿಟ್ಟು ಬರುತ್ತಿದ್ದೆವು. ಇದನ್ನು ಮುಖ್ಯಮಂತ್ರಿ ಆದಾಗಲೂ ಬಂಗಾರಪ್ಪ ಹಲವಾರು ಬಾರಿ ಸ್ಮರಿಸಿದ್ದರು ಎಂದು ಮೀರ್ ಅಲ್ತಾಫ್ ಹೇಳುತ್ತಾರೆ. ಯಡಿಯೂರಪ್ಪ ಸಾಹೇಬರು ಶಿಕಾರಿಪುರ ಪುರಸಭೆ ಅಧ್ಯಕ್ಷರಾಗಿದ್ದಾಗ ಶಿವಮೊಗ್ಗಕ್ಕೆ ಪ್ರತಿಭಟನೆ, ಪಕ್ಷದ ಕಾರ್ಯಕ್ರಮಗಳಲ್ಲಿ ನಮ್ಮ ಬಸ್‌ನಲ್ಲೇ ಬರುತ್ತಿದ್ದರು ಎಂದು ನೆನೆಯುತ್ತಾರೆ.

ನಿಶ್ಯಕ್ತಿಗೊಳಿಸಿದ ಶಕ್ತಿ..

ಸಂಸ್ಥೆಯ ಶತಮಾನದ ಸಂಭ್ರಮವನ್ನು ಸರ್ಕಾರದ ’ಶಕ್ತಿ’ ಯೋಜನೆ ಕಿತ್ತುಕೊಂಡಿದೆ. ನಮ್ಮನ್ನು (ಖಾಸಗಿ ಬಸ್‌ ಮಾಲೀಕರನ್ನು) ನಿಶ್ಯಕ್ತಿಗೊಳಿಸಿದೆ ಎಂದು ಅಲ್ತಾಫ್ ಬೇಸರ ವ್ಯಕ್ತಪಡಿಸುತ್ತಾರೆ. ಹೆಣ್ಣುಮಕ್ಕಳನ್ನು ಉಚಿತವಾಗಿ ಬಸ್‌ನಲ್ಲಿ ಕರೆದೊಯ್ಯುವುದನ್ನು ನಾವು ವಿರೋಧಿಸುವುದಿಲ್ಲ. ಆದರೆ ಆ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ಸರ್ಕಾರ ವಿಸ್ತರಿಸಬೇಕಿತ್ತು. ಬಸ್ ಮಾಲೀಕರ ಮಾತ್ರವಲ್ಲ ಡ್ರೈವರ್‌, ಕಂಡಕ್ಟರ್‌, ಕ್ಲೀನರ್‌, ಸ್ಟ್ಯಾಂಡ್ ಏಜೆಂಟ್‌, ಆಟೊಮೊಬೈಲ್ಸ್ ಅಂಗಡಿಯವ, ಗ್ಯಾರೇಜ್‌, ಎಲೆಕ್ಟ್ರಿಶಿಯನ್‌ ಹೀಗೆ ಒಂದು ಬಸ್‌ ನಂಬಿ 20 ಜನರ ಕುಟುಂಬಗಳು ಜೀವನ ನಡೆಸುತ್ತಿವೆ. ಬಸ್‌ವೊಂದಕ್ಕೆ ವರ್ಷಕ್ಕೆ ₹2 ಲಕ್ಷ ತೆರಿಗೆ ಕಟ್ಟುತ್ತೇವೆ. ಜೊತೆಗೆ ಮೂರು ತಿಂಗಳಿಗೊಮ್ಮೆ ಪ್ರತ್ಯೇಕ ತೆರಿಗೆ. ನಮಗೆ ಟಿಕೆಟ್‌ ಹಣ ಮರಳಿಸುವುದು ಬೇಡ. ತೆರಿಗೆ ಮಾಫಿ ಮಾಡಿದ್ದರೂ ನಾವು ಹೆಣ್ಣುಮಕ್ಕಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡುತ್ತಿದ್ದೆವು ಎಂದು ಹೇಳುವ ಮೀರ್‌ ಅಲ್ತಾಫ್ ಹುಸೇನ್‌, ಮಲೆನಾಡ ಜನರ ಆಶೀರ್ವಾದ, ದೇವರ ದಯೆಯಿಂದ ಸಂಸ್ಥೆ ಇನ್ನೂ ನಡೆದುಕೊಂಡು ಹೋಗುತ್ತಿದೆ ಎಂದು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.