ADVERTISEMENT

ಇನ್ನೂ ‘ಸ್ಮಾರ್ಟ್’ ಆಗದ ಶಿವಮೊಗ್ಗ ‘ಸಿಟಿ’

ಮಹಾನಗರ ಪಾಲಿಕೆಗೆ ಕಾಮಗಾರಿಗಳ ಹಸ್ತಾಂತರ; ಸಭೆ ಇಂದು

ನಾಗರಾಜ ಹುಲಿಮನೆ
Published 7 ಏಪ್ರಿಲ್ 2025, 7:37 IST
Last Updated 7 ಏಪ್ರಿಲ್ 2025, 7:37 IST
ಸ್ಮಾರ್ಟ್ ಸಿಟಿ ಯೋಜನೆಯಡಿ ಗಾಂಧಿ ಪಾರ್ಕ್ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ವನ್ಯಜೀವಿ ವ್ಯಾಖ್ಯಾನ ಕೇಂದ್ರ ಮತ್ತು ವಿಜ್ಞಾನ ಉದ್ಯಾನ ಅಭಿವೃದ್ಧಿ ಕಾಮಗಾರಿ ಅರ್ಧಕ್ಕೆ ನಿಂತಿರುವುದು
ಸ್ಮಾರ್ಟ್ ಸಿಟಿ ಯೋಜನೆಯಡಿ ಗಾಂಧಿ ಪಾರ್ಕ್ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ವನ್ಯಜೀವಿ ವ್ಯಾಖ್ಯಾನ ಕೇಂದ್ರ ಮತ್ತು ವಿಜ್ಞಾನ ಉದ್ಯಾನ ಅಭಿವೃದ್ಧಿ ಕಾಮಗಾರಿ ಅರ್ಧಕ್ಕೆ ನಿಂತಿರುವುದು   

ಶಿವಮೊಗ್ಗ: ನಗರದ ಸ್ಮಾರ್ಟ್‌ ಸಿಟಿ ಯೋಜನೆಯ ಗಡುವು ಮಾರ್ಚ್ 31ಕ್ಕೆ ಮುಕ್ತಾಯಗೊಂಡಿದ್ದು, ಮಹಾನಗರ ಪಾಲಿಕೆಗೆ ಇದನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಇಷ್ಟಾದರೂ, ಕೈಗೆತ್ತಿಕೊಂಡಿರುವ ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ. ಇದಕ್ಕೆ ಇನ್ನಷ್ಟು ಸಮಯ ಬೇಕಿದೆ!

2016ರಲ್ಲಿ ಅಂದಾಜು ₹930 ಕೋಟಿ ಮೊತ್ತದಲ್ಲಿ 76 ಯೋಜನೆಗಳಿಗೆ ಚಾಲನೆ ನೀಡಲಾಗಿತ್ತು. ‘ಈ ಅವಧಿಯಲ್ಲಿ ಎಲ್ಲಾ ಯೋಜನೆಗಳೂ ಪೂರ್ಣಗೊಂಡಿವೆ. ಅವುಗಳ ಸಮರ್ಪಕ ನಿರ್ವಹಣೆಯನ್ನೂ ಮಾಡಲಾಗುತ್ತಿದೆ’ ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ಹೇಳುತ್ತಿದ್ದಾರೆ. ವಾಸ್ತವದಲ್ಲಿ ಇನ್ನೂ ಮೂರ್ನಾಲ್ಕು ಯೋಜನೆಗಳ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿಯೇ ಇಲ್ಲ.

‘ಯೋಜಿತ ಕಾಮಗಾರಿಗಳೆಲ್ಲವೂ ಶೇ 98.60ರಷ್ಟು ಪ್ರಗತಿ ಸಾಧಿಸಿವೆ. ₹922.12 ಕೋಟಿ ವೆಚ್ಚದಲ್ಲಿ 75 ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದ ಒಂದು ಕಾಮಗಾರಿಯನ್ನು ಜೂನ್ ಅಂತ್ಯದಲ್ಲಿ ಮುಕ್ತಾಯಗೊಳಿಸಲಾಗುವುದು’ ಎಂದು ಸ್ಮಾರ್ಟ್ ಸಿಟಿಯಿಂದ ಮಹಾನಗರ ಪಾಲಿಕೆಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಇಲ್ಲಿನ ಗಾಂಧಿ ಪಾರ್ಕ್ ಆವರಣದಲ್ಲಿ ₹8.58 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ವನ್ಯಜೀವಿ ವ್ಯಾಖ್ಯಾನ ಕೇಂದ್ರ ಮತ್ತು ವಿಜ್ಞಾನ ಉದ್ಯಾನದ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿದೆ.

ADVERTISEMENT

ಸ್ಮಾರ್ಟ್ ಸಿಟಿ ಯೋಜನೆಯಡಿ ವಿದ್ಯುತ್ ಶಕ್ತಿ ಉತ್ಪಾದಿಸಲು ತುಂಗಾ ಎಡದಂಡೆ ಕಾಲುವೆಯ ಮೇಲ್ಭಾಗದಲ್ಲಿ ಕ್ಲೀನ್ ಆ್ಯಂಡ್‌ ಗ್ರೀನ್ ಎನರ್ಜಿ ಉತ್ಪಾದನೆಯ ಗುರಿ ಹೊಂದಲಾಗಿತ್ತು. ಇದಕ್ಕೆ ಗುತ್ತಿಗೆದಾರರು ಮುಂದೆ ಬಾರದ ಕಾರಣ ಯೋಜನೆ ಅರ್ಧದಲ್ಲಿಯೇ ನಿಂತಿದೆ. 

100 ಸ್ಮಾರ್ಟ್ ಬಸ್ ನಿಲ್ದಾಣಗಳ ನಿರ್ಮಾಣ, ಮಲ್ಟಿ-ಲೆವೆಲ್ ಕಾರ್ ಪಾರ್ಕಿಂಗ್, ಹಾಕರ್ಸ್ ಝೋನ್, ಖಾಸಗಿ ಬಸ್ ನಿಲ್ದಾಣ ಅಭಿವೃದ್ಧಿ – ಹೀಗೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಆದರೆ, ಸಮರ್ಪಕ ನಿರ್ವಹಣೆ ಕಾಣದೆ ಇವು ನನೆಗುದಿಗೆ ಬಿದ್ದಿವೆ.

ನಗರದ ರವೀಂದ್ರ ನಗರ, ಬಸವನಗುಡಿ, ಟ್ಯಾಂಕ್‌ ಮೊಹಲ್ಲ, ಶರಾವತಿ ನಗರ, ಹೊಸಮನೆ ಮತ್ತು ದುರ್ಗಿಗುಡಿ, ಮಲ್ಲೇಶ್ವರನಗರ, ಗಾಂಧಿನಗರ, ಅರಮನೆ ಪ್ರದೇಶ, ವಿದ್ಯಾನಗರ ಉತ್ತರ, ಗಾಂಧಿ ಬಜಾರ್, ಸೀಗೆಹಟ್ಟಿ, ಎನ್.ಟಿ ರಸ್ತೆ ತುಂಗಾನದಿ, ವಿದ್ಯಾನಗರದ 6 ಚದರ ಕಿ.ಮೀ ವ್ಯಾಪ್ತಿಯ 1,500 ಎಕರೆ ಪ್ರದೇಶದಲ್ಲಿ ಮೂಲಸೌಕರ್ಯ ಒದಗಿಸಲಾಗಿದೆ ಎನ್ನಲಾಗುತ್ತಿದೆ. ಆದರೆ, ಈ ವ್ಯಾಪ್ತಿಯಿಂದ ಈವರೆಗೆ 1000ಕ್ಕೂ ಹೆಚ್ಚು ದೂರುಗಳು ಸಲ್ಲಿಕೆಯಾಗಿವೆ. ಕಳಪೆ ಕಾಮಗಾರಿಯ ಆರೋಪಗಳೂ ಕೇಳಿ ಬಂದಿವೆ.

‘ನಗರದಲ್ಲಿನ ಪಾರ್ಕಿಂಗ್ ಸಮಸ್ಯೆ ಪರಿಹರಿಸಲು ಸ್ಮಾರ್ಟ್ ಸಿಟಿ ವತಿಯಿಂದ ಶಿವಪ್ಪ ನಾಯಕ ವೃತ್ತದಲ್ಲಿ ಬಹುಮಹಡಿ ಪಾರ್ಕಿಂಗ್ ಕಟ್ಟಡ ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ. ₹ 25 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 3 ಅಂತಸ್ತಿನ ಈ ಪಾರ್ಕಿಂಗ್‌ ಕಟ್ಟಡದ ನಿರ್ವಹಣೆಗೆ ಮೂರು ಬಾರಿ ಟೆಂಡರ್‌ ಪ್ರಕ್ರಿಯೆ ನಡೆದಿದೆ. ಆದರೆ, ಯಾರೂ ಗುತ್ತಿಗೆ ಪಡೆಯಲು ಮುಂದೆ ಬರುತ್ತಿಲ್ಲ’ ಎಂದು ಮಹಾನಗರ ಪಾಲಿಕೆ ಆಯುಕ್ತೆ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕರೂ ಆದ ಕವಿತಾ ಯೋಗಪ್ಪನವರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಶಿವಪ್ಪ ನಾಯಕ ಅರಮನೆಯನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಪೂರ್ಣಗೊಳಿಸಲು ₹15.8 ಕೋಟಿ ಮೀಸಲಿರಿಸಲಾಗಿತ್ತು. ಆದರೆ, ಕೆಲವೊಂದು ಮಾರ್ಪಾಡುಗಳಿಂದ ಈ ಮೊತ್ತ ಹೆಚ್ಚಾಗಿತ್ತು. ಹೆಚ್ಚುವರಿ ಮೊತ್ತ ಬಿಡುಗಡೆಗೆ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು (ಕೆಯುಐಡಿಎಫ್‌ಸಿ) ನಿಗಮ ಅನುಮತಿ ನೀಡಿದೆ. ಶೀಘ್ರದಲ್ಲಿ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಹೇಳಿದರು.

‘ನೂರಾರು ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ, ಇದರ ನಿರ್ವಹಣೆ ಯಾರ ಹೊಣೆ ಎಂಬುದು ಗೊತ್ತಿಲ್ಲ. ಕಾಮಗಾರಿ ನಡೆಸಿ ತಿಂಗಳೊಳಗೆ ಇವು ಹಾಳಾಗುತ್ತಿವೆ. ಇದರ ಬಗ್ಗೆ ಪ್ರಶ್ನಿಸಿದರೆ ಉತ್ತರವೇ ಸಿಗದಾಗಿದೆ. ಸ್ಮಾರ್ಟ್ ಸಿಟಿ ಎನ್ನುವುದು ಭವಿಷ್ಯದ ಚಿಂತನೆ ಆಗಬೇಕು. ಈ ಯೋಜನೆಗಳ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯ ನಿವಾಸಿ ಎಂ.ಹಾಲೇಶಪ್ಪ ಬೇಸರ ವ್ಯಕ್ತಪಡಿಸಿದರು. 

ಸ್ಮಾರ್ಟ್ ಸಿಟಿ ಯೋಜನೆಯಡಿ ಮಹಾನಗರ ಪಾಲಿಕೆ ಎದುರಿನ ರಸ್ತೆಯಲ್ಲಿ ನಿರ್ಮಿಸಿರುವ ಪಾದಚಾರಿ ಮಾರ್ಗದಲ್ಲಿ ಗುಂಡಿ ಅಗೆದಿರುವುದು
ಜಿಲ್ಲಾಧಿಕಾರಿ ಕಚೇರಿ ಎದುರು ನಿರ್ಮಿಸಿರುವ ಬಸ್ ನಿಲ್ದಾಣದಲ್ಲಿ ನಿರ್ವಹಣೆ ಕಾಣದೆ ಹಾಳಾಗಿರುವ ವಿದ್ಯುತ್ ಸ್ಮಾರ್ಟ್ ಮೀಟರ್
ಸ್ಮಾರ್ಟ್ ರಸ್ತೆಗೆ ₹470 ಕೋಟಿ ವೆಚ್ಚ
 ಜಲಮಂಡಳಿಯಿಂದ ಅಗೆತ  ಸ್ಮಾರ್ಟ್ ಸಿಟಿ ಯೋಜನೆಯಡಿ ₹ 470.46 ಕೋಟಿ ವೆಚ್ಚದಲ್ಲಿ 110 ಕಿ.ಮೀ ಉದ್ದದ 8 ಸ್ಮಾರ್ಟ್ ರಸ್ತೆಗಳಲ್ಲಿ ಅಂಡರ್ ಗ್ರೌಂಡ್ ಮಾರ್ಗ ಎಚ್‌ಟಿ ಎಲ್‌ಟಿ ವಿದ್ಯುತ್ ಸಂಪರ್ಕ ಕುಡಿವ ನೀರು ಸರಬರಾಜು ಪೈಪ್‌ ಲೈನ್ ಅಳವಡಿಸಲಾಗಿದೆ. 120 ಕಿ.ಮೀ. ಉದ್ದದ ಪ್ರತ್ಯೇಕ ಬೈಸಿಕಲ್ ಪಾಥ್ ಹಾಗೂ ಪಾದಚಾರಿ ಮಾರ್ಗವನ್ನೂ ವಿನ್ಯಾಸಗೊಳಿಸಲಾಗಿದೆ. ಆದರೆ ಬೈಸಿಕಲ್ ಪಾಥ್ ಜನ ಬಳಕೆಗೆ ಸಿಕ್ಕಿಲ್ಲ. ಜಲಮಂಡಳಿಯಿಂದ ರಸ್ತೆಗಳ ನಡುವೆ ಗುಂಡಿ ಅಗೆದು ಅರ್ಧದಲ್ಲಿಯೇ ಬಿಡಲಾಗುತ್ತಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಮಗಾರಿ ವಿಳಂಬ; ಸಭೆ
ಇಂದು ‘ಮಹಾನಗರ ಪಾಲಿಕೆಗೆ ಹಸ್ತಾಂತರ ಪ್ರಕ್ರಿಯೆ ನಡೆದಿದೆ. ಸ್ಮಾರ್ಟ್ ಸಿಟಿಯಿಂದ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಆದ್ದರಿಂದ ಕೇಂದ್ರದ ವಸತಿ ಸಚಿವಾಲಯದೊಂದಿಗೆ ಏಪ್ರಿಲ್ 7 ರಂದು ಸಭೆ ನಡೆಯಲಿದೆ. ಸಭೆಯಲ್ಲಿ ಇನ್ನೂ ಒಂದು ತಿಂಗಳು ಹಸ್ತಾಂತರ ಪ್ರಕ್ರಿಯೆಯನ್ನು ಮುಂದೂಡುವ ಬಗ್ಗೆ ಚರ್ಚೆ ನಡೆಯಲಿದೆ. ಕಾಮಗಾರಿ ಪೂರ್ಣಗೊಳಿಸಲು ಸಲಹೆ ಸೂಚನೆ ಪಡೆಯಲಾಗುವುದು’ ಎಂದು ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕಿ ಕವಿತಾ ಯೋಗಪ್ಪನವರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.