
ಶಿವಮೊಗ್ಗ: ಇಲ್ಲಿನ ಕೋಟೆ ಶ್ರೀ ಮಾರಿಕಾಂಬ ದೇವಿ ದೇವಸ್ಥಾನದಲ್ಲಿ ಫೆ.24ರಿಂದ 28ರವರೆಗೆ ವೈಭವದ ಜಾತ್ರೆ ನಡೆಯಲಿದೆ ಎಂದು ಮಾರಿಕಾಂಬಾ ಉತ್ಸವ ಸಮಿತಿ ಅಧ್ಯಕ್ಷ ಎಸ್.ಕೆ. ಮರಿಯಪ್ಪ ತಿಳಿಸಿದರು.
ಭಕ್ತರು ದೇವಿಯನ್ನು ‘ಬಯಲು ಮಾರಿ’, ‘ಬಿಸಿಲು ಮಾರಿ’, ’ಕೆಂಚ ಮಾರಿ’ ಎಂದು ಭಕ್ತಿಭಾವದಿಂದ ಕರೆಯುತ್ತಾರೆ. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ವಿವಿಧ ಸಮಾಜಗಳವರು ಸಮಾನವಾಗಿ ಭಾಗವಹಿಸುವುದು ವಿಶೇಷ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫೆ. 24ರಂದು ಸಾಂಪ್ರದಾಯಿಕವಾಗಿ ಬ್ರಾಹ್ಮಣ ಸಮಾಜದ ನಾಡಿಗರ ಕುಟುಂಬವನ್ನು ಪೂಜೆಗೆ ಆಹ್ವಾನಿಸುವ ಮೂಲಕ ಜಾತ್ರಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ಮಹಿಳೆಯರು ಗಾಂಧಿಬಜಾರ್‌ನ ತವರು ಮನೆಯಲ್ಲಿ ಇರುವ ದೇವಿಗೆ ಉಡಿ ತುಂಬಿ ಪೂಜೆ ಸಲ್ಲಿಸಲಿದ್ದಾರೆ. ವಿಶ್ವಕರ್ಮ ಸಮಾಜದವರು ವಿಸರ್ಜನಾ ಮೂರ್ತಿಗೆ ಮಾಂಗಲ್ಯಧಾರಣೆ ಮಾಡಿ ಸಾರ್ವಜನಿಕ ಪೂಜೆಗೆ ಚಾಲನೆ ನೀಡಲಿದ್ದಾರೆ. ಲಕ್ಷಾಂತರ ಮಹಿಳೆಯರು ಮಡ್ಲಕ್ಕಿ ನೀಡಿ ಉಡಿ ತುಂಬುವ ಮೂಲಕ ಭಕ್ತಿಭಾವ ಮೆರೆಯಲಿದ್ದಾರೆ ಎಂದರು.
ದೇವಿಯನ್ನು ರಥದಲ್ಲಿ ಕೂರಿಸಿ ಉಪ್ಪಾರ ಸಮಾಜದವರು ಗದ್ದುಗೆಗೆ ಕರೆತರುವಾಗ, ಮಧ್ಯದಲ್ಲಿ ಗಂಗಾಪರಮೇಶ್ವರಿ ದೇವಸ್ಥಾನದ ಬಳಿಯಲ್ಲಿ ಗಂಗಾಮತಸ್ಥ ಸಮಾಜದವರು ಗಂಗೆಪೂಜೆ ನೆರವೇರಿಸಲಿದ್ದಾರೆ. ಬುಧವಾರ ಬೆಳಗಿನ ಜಾವ ಹರಿಜನ ಸಮಾಜದವರು ಬೇವಿನುಡಿಗೆ ಸಮರ್ಪಿಸಿ ಪೂಜೆ ಸಲ್ಲಿಸಲಿದ್ದು, ಬಳಿಕ ಕುರುಬ ಸಮಾಜದ ಚೌಡಿಕೆ ಕುಟುಂಬದವರು ನೈವೇದ್ಯ ಅರ್ಪಿಸಲಿದ್ದಾರೆ. ವಾಲ್ಮೀಕಿ, ಉಪ್ಪಾರ ಹಾಗೂ ಮಡಿವಾಳ ಸಮಾಜದವರು ನಾಲ್ಕು ದಿನಗಳ ಕಾಲ ಗದ್ದುಗೆಯಲ್ಲಿ ಪೂಜೆ ನೆರವೇರಿಸಲಿದ್ದಾರೆ ಎಂದರು.
ಫೆ. 28ರಂದು ರಾತ್ರಿ 7 ಗಂಟೆಗೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಭವ್ಯ ಉತ್ಸವ ನಡೆಯಲಿದೆ. ಲಕ್ಷಾಂತರ ಭಕ್ತರು ಅಮ್ಮನವರನ್ನು ‘ವನಪ್ರವೇಶ’ಕ್ಕೆ ಕಳುಹಿಸುವ ಮೂಲಕ ಜಾತ್ರೆಗೆ ತೆರೆ ಎಳೆಯಲಿದ್ದಾರೆ. ಮಡಿವಾಳ ಸಮಾಜದವರು ಮಧ್ಯರಾತ್ರಿ ವನದಲ್ಲಿ ಶಾಸ್ತ್ರಾನುಸಾರ ಪೂಜೆ ನೆರವೇರಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಂಜುನಾಥ್, ಎನ್.ಉಮಾಪತಿ, ಹನುಮಂತಪ್ಪ, ರಾಮಯ್ಯ, ಲೋಕೇಶ್, ಚಂದ್ರಶೇಖರ್, ಪ್ರಕಾಶ್, ಸುನೀಲ್ ಉಪಸ್ಥಿತರಿದ್ದರು.
ದೇವಿಗೆ ಚಿನ್ನದ ಮುಖವಾಡ ಸಮರ್ಪಣೆ..
ಜಾತ್ರೆ ಅಂಗವಾಗಿ ಮಾರಿಕಾಂಬ ದೇವಿ 1 ಕೆ.ಜಿ 600 ಗ್ರಾಂ ಚಿನ್ನದ ಮುಖವಾಡ ಸಮರ್ಪಣೆ ಗಾಂಧಿಬಜಾರಿನಲ್ಲಿ 20 ಅಡಿ ಎತ್ತರದ ಮಹಾಕಾಳಿ ಅಲಂಕಾರ ನಗರದ ಪ್ರಮುಖ ರಸ್ತೆಗಳಲ್ಲಿ ದೀಪಾಲಂಕಾರ ವ್ಯವಸ್ಥೆ ಮಾಡಲಾಗುತ್ತಿದೆ. ಮಾ.6ರಿಂದ ನೆಹರೂ ಕ್ರೀಡಾಂಗಣದಲ್ಲಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿದೆ ಎಂದು ಎಸ್.ಕೆ.ಮರಿಯಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.