
ಶಿವಮೊಗ್ಗ: ಸ್ವಸಹಾಯ ಗುಂಪುಗಳ ಮಹಿಳೆಯರು, ಕುಶಲ ಕರ್ಮಿಗಳಿಗೆ ಸರ್ಕಾರದಿಂದ ಹೆಚ್ಚು ನೆರವು, ಸಾರ್ವಜನಿಕರಿಂದ ಬೆಂಬಲ ದೊರೆಯಲು ಅವರು ಸಿದ್ಧಪಡಿಸಿದ ಉತ್ಪನ್ನಗಳ ವಿಶೇಷತೆ ಬಗ್ಗೆ ಮಾಧ್ಯಮಗಳು ಹೆಚ್ಚು ಬೆಳಕು ಚೆಲ್ಲಬೇಕು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸಲಹೆ ನೀಡಿದರು.
ಗಣರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಜಿಲ್ಲಾ ಉದ್ಯಾನ ಕಲಾ ಸಂಘದ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ ಪಾರ್ಕ್) ಶನಿವಾರ ಆರಂಭವಾಗಿರುವ ನಾಲ್ಕು ದಿನಗಳ ಮಲೆನಾಡು ಕರಕುಶಲ ಉತ್ಸವ, ಸಿರಿಧಾನ್ಯ ಮೇಳ ಹಾಗೂ ಫಲ ಪುಷ್ಪ ಪ್ರದರ್ಶನಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಚಾಲನೆ ಕೊಟ್ಟಿರುವ ‘ಕ್ರಾಫ್ಟ್ ಆಫ್ ಮಲ್ನಾಡ್’ ವೆಬ್‌ಸೈಟ್ ಬಗ್ಗೆ ಇನ್ನೂ ಹೆಚ್ಚಿನ ಪ್ರಚಾರ ಆಗಬೇಕು. ಅದಕ್ಕೆ ಪೂರಕವಾಗಿ ಸಣ್ಣ ವಿಡಿಯೊ ತುಣುಕು, ಕ್ಯುಆರ್ ಕೋಡ್‌ನ್ನು ಸರ್ಕಾರಿ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಬೇಕು. ಮಲೆನಾಡಿನ ಕರಕುಶಲ ಕಲೆಯನ್ನು ನಾಡಿಗೆ ಪರಿಚಯಿಸಲು ರಾಜ್ಯಮಟ್ಟದಲ್ಲಿ ಕ್ರಾಫ್ಟ್ ಆಫ್ ಮಲ್ನಾಡ್ ಪ್ರದರ್ಶನ ಏರ್ಪಡಿಸೋಣ ಎಂದರು.
ಈ ವೇಳೆ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಕೆ.ಚೇತನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಭೂಪಾಲ್, ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹಾದೇವಪ್ಪ, ಹಾಪ್ ಕಾಮ್ಸ್ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ್, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿ ಆಡಳಿತ ಮಂಡಳಿ ಸದಸ್ಯ ದೇವಿಕುಮಾರ್, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯಿತಿ ಸಿಇಒ ಎನ್. ಹೇಮಂತ್, ಎಸ್ಪಿ ಬಿ.ನಿಖಿಲ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎ.ಬಿ.ಸಂಜಯ್, ಜಿ.ಪಂ ಯೋಜನಾ ನಿರ್ದೇಶಕಿ ನಂದಿನಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣ್ ಕುಮಾರ್, ಉದ್ಯಾನ ಕಲಾ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಸಿದ್ದಪ್ಪ ಹರಳೆಣ್ಣೆಯವರ್, ಖಜಾಂಚಿ ಜಿ.ಎಂ.ರಘು ಹಾಜರಿದ್ದರು.
ಪರಂಪರಾಗತವಾಗಿ ಬಂದ ಹಳೆಯ ಕಲೆಗಳು ನಮ್ಮ ಸಂಸ್ಕೃತಿಯ ಭಾಗ. ಅವುಗಳನ್ನು ಮುಂದಿನ ಪೀಳಿಗೆಗೆ ತಲುಪಿಸಲು ಶಾಲಾ ಹಂತದಲ್ಲೇ ಪಠ್ಯದ ಮೂಲಕ ಮಕ್ಕಳಿಗೆ ಕಲಿಸುವ ಚಿಂತನೆಯಿದೆಮಧು ಬಂಗಾರಪ್ಪ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ
ಕ್ರಾಫ್ಟ್ ಆಫ್ ಮಲ್ನಾಡ್ ವೆಬ್‌ಸೈಟ್‌ಗೆ ಚಾಲನೆ
ಸರ್ಕಾರದಿಂದ ಏನು ಅಪೇಕ್ಷೆ ಮಾಡುತ್ತೇವೆ ಎಂದು ಕುಶಲ ಕರ್ಮಿಗಳು ಸ್ವಸಹಾಯ ಸಂಘಗಳ ಸದಸ್ಯರು ಮಾಧ್ಯಮಗಳ ಮೂಲಕ ಹೇಳಿಕೊಂಡರೆ ಅದು ಸರ್ಕಾರಕ್ಕೆ ತಲುಪುತ್ತದೆ. ಅವುಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ಕಾವೇರಿ ಎಂಪೋರಿಯಂ ರೀತಿ ಕ್ರಾಫ್ಟ್ ಆಫ್ ಮಲೆನಾಡು ಕಾರ್ಯನಿರ್ವಹಿಸಲಿದೆ. ಅದಕ್ಕೆ ಡಿಜಿಟಲ್ ವೇದಿಕೆಯ ಮೂಲಕ ಜಾಗತಿಕ ಮಾರುಕಟ್ಟೆಯ ಕಲ್ಪಿಸಲಾಗುವುದು ಎಂದರು. ಜಿಲ್ಲಾ ಪಂಚಾಯಿತಿ ಸಿಇಒ ಎನ್.ಹೇಮಂತ್ ಅವರ ದೂರದೃಷ್ಟಿ ಹಾಗೂ ಕಾಳಜಿಯ ಪರಿಣಾಮ ಇಷ್ಟೊಂದು ಸುಂದರವಾದ ಮೇಳ ಆಯೋಜನೆಗೊಂಡಿದೆ. ಜಿಲ್ಲೆಯ ಹೆಣ್ಣುಮಕ್ಕಳು ಸಿದ್ಧಪಡಿಸಿದ ಉತ್ಪನ್ನಗಳಿಗೆ ಇಲ್ಲಿಯೇ ಮಾರುಕಟ್ಟೆ ದೊರೆಯುವಂತೆ ಮಾಡಿರುವ ಅವರ ಕಾರ್ಯ ಮೆಚ್ಚುಗೆಗೆ ಅರ್ಹ ಎಂದು ಶ್ಲಾಘಿಸಿದರು. ಈ ಹಿಂದೆಲ್ಲ ನೆಪ ಮಾತ್ರಕ್ಕೆ ಎಂಬಂತೆ ನಡೆಯುತ್ತಿದ್ದ ಮೇಳಕ್ಕೆ ಈಗ ಉತ್ತಮ ವೇದಿಕೆ ಕಲ್ಪಿಸಿರುವ ಸಿಇಒ ಕಳೆದ ವರ್ಷಕ್ಕಿಂತ ಈ ಬಾರಿ ಇನ್ನೂ ಚೆನ್ನಾಗಿ ಸಂಘಟಿಸಿದ್ದಾರೆ. ಮಲೆನಾಡಿನ ಹಸೆ–ಚಿತ್ತಾರ ಕೈಮಗ್ಗದ ಉತ್ಪನ್ನ ಹಾಗೂ ತಿನಿಸುಗಳಿಗೆ ಜಾಗತಿಕ ಮನ್ನಣೆ ದೊರಕಿಸಲು ವೆಬ್‌ಸೈಟ್ ವೇದಿಕೆ ಆಗಲಿದೆ ಎಂದು ಮಧು ಆಶಿಸಿದರು. ಇದೇ ವೇಳೆ ಸಚಿವರು ‘ಕ್ರಾಫ್ಟ್ ಆಫ್ ಮಲ್ನಾಡ್’ ವೆಬ್‌ಸೈಟ್‌ಗೆ ಚಾಲನೆ ನೀಡಿದರು.
ಬಲ್ಕೀಶ್ ಅಕ್ಕನಿಗೆ ಓಲೆಯ ಕೊಡುಗೆ..
ಕರಕುಶಲ ವಸ್ತುಗಳ ವೀಕ್ಷಣೆ ವೇಳೆ ನೆಚ್ಚಿನ ಅಕ್ಕ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಅವರಿಗೆ ಓಲೆ ಕೊಡಿಸಿದ ಮಧು ಬಂಗಾರಪ್ಪ ‘ಕೈಮಗ್ಗದ ಸೀರೆ ಹಾಗೂ ಟವೆಲ್ ಚೆನ್ನಾಗಿವೆ. ಖರೀದಿಸಲು ಪತ್ನಿ ಅನಿತಾ ಅವರನ್ನು ಇಲ್ಲಿಗೆ ಕಳುಹಿಸುವೆ. ಒಂದಷ್ಟು ಒಳ್ಳೆಯ ಸೀರೆಗಳನ್ನು ತೆಗೆದಿಡಿ’ ಎಂದು ದಾವಣಗೆರೆಯ ಕೈಮಗ್ಗದ ಬಟ್ಟೆಗಳ ಮಾರಾಟ ಮಳಿಗೆಯವರಿಗೆ ಹೇಳಿದರು. ಕಾರ್ಯಕ್ರಮಗಳಲ್ಲಿ ಸನ್ಮಾನದ ವೇಳೆ ಶಾಲು ಬದಲಿಗೆ ಇಲ್ಲಿರುವ ಆಕರ್ಷಕ ಟವೆಲ್‌ಗಳನ್ನು ಹೆಗಲಿಗೆ ಹಾಕಿದರೆ ಅವು ಕಪಾಟು ಸೇರದೆ ಬಳಕೆ ಆಗುತ್ತವೆ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.