
ಶಿವಮೊಗ್ಗ: ಯುವ ಜನರು ಮಾದಕ ವ್ಯಸನಕ್ಕೆ ಹೆಚ್ಚು ಬಲಿಯಾಗುತ್ತಿರುವುದು ಹಾಗೂ ಅದೇ ಕಾರಣಕ್ಕೆ ಅಪರಾಧ ಪ್ರಕರಣ ಅಧಿಕವಾಗುತ್ತಿರುವ ಕಾರಣ ಜಿಲ್ಲೆಯಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತು ಸೇವನೆ ಹಾಗೂ ಮಾರಾಟದ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.
ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಒಂದೂವರೆ ತಿಂಗಳಲ್ಲಿ 15 ಕೆ.ಜಿ 81 ಗ್ರಾಂ. ಗಾಂಜಾ ಹಾಗೂ 125 ಗ್ರಾಂ. ಎಂಡಿಎಂಎ ಮಾತ್ರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಶೂನ್ಯ ಅಸಹಿಷ್ಣುತೆ;
‘ಯುವ ಜನರು ರಚನಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕೇ ಹೊರತು ವ್ಯಸನಿಗಳಾಗಬಾರದು. ಹೀಗಾಗಿ ಗಾಂಜಾ ಸೇರಿದಂತೆ ಮಾದಕ ವಸ್ತು ಸೇವನೆ, ಮಾರಾಟವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಆ ವಿಚಾರದಲ್ಲಿ ಶೂನ್ಯ ಅಸಹಿಷ್ಣುತೆ ಹೊಂದಿದ್ದೇವೆ’ ಎಂದು ಎಸ್‌ಪಿ ಬಿ. ನಿಖಿಲ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಇಲಾಖೆಯ ಕಠಿಣ ನಿಲುವಿನ ಫಲವಾಗಿ ಒಂದೂವರೆ ತಿಂಗಳಲ್ಲಿ ಗಾಂಜಾ ಸೇವನೆ ಮಾಡಿದ್ದ 70 ಜನ ಹಾಗೂ ಗಾಂಜಾ ಮಾರಾಟ ಮಾಡುತ್ತಿದ್ದ 9 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಿಚಾರಣೆ ವೇಳೆ ದೊರೆತ ಮಾಹಿತಿ ಮೇರೆಗೆ 10 ಜನರ ವಿರುದ್ಧ ಗಾಂಜಾ ಸೇವನೆ ಹಾಗೂ 16 ಜನರ ವಿರುದ್ಧ ಗಾಂಜಾ ಮಾರಾಟ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಗಾಂಜಾ ಸೇವನೆ ಮಾಡುವವರನ್ನು ಪ್ರತಿ ದಿನ ಪತ್ತೆ ಮಾಡಿ ಕರೆತಂದು ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದರು.
‘ಗಾಂಜಾ, ಡ್ರಗ್ಸ್ ಸೇವಿಸುವವರು ಮಾತ್ರವಲ್ಲ, ಅದನ್ನು ಮಾರಾಟ ಮಾಡುವ ಪೆಡ್ಲರ್‌ಗಳು, ಪೂರೈಕೆದಾರರು ಹಾಗೂ ಮಲೆನಾಡಿನಲ್ಲಿ ಗಾಂಜಾ ಬೆಳೆಯುವವರ ಪತ್ತೆಗೂ ಮುಂದಾಗಿದ್ದೇವೆ. ಸಮಸ್ಯೆಯನ್ನು ಬೇರು ಮಟ್ಟದಿಂದಲೇ ಕಿತ್ತು ಹಾಕುವ ಕಾರ್ಯ ಸದ್ದಿಲ್ಲದೇ ನಡೆದಿದೆ’ ಎಂದು ಹೇಳಿದರು.
‘ಈ ಹಿಂದೆ ಗಾಂಜಾ ಮಾರಾಟ ಪ್ರಕರಣಗಳಲ್ಲಿ ಸಿಲುಕಿ ಜೈಲು ವಾಸ ಅನುಭವಿಸಿದವರು, ಶಿಕ್ಷೆಗೊಳಗಾದವರು ಬಿಡುಗಡೆಯ ನಂತರ ನಡೆಸುತ್ತಿರುವ ಚಟುವಟಿಕೆಗಳ ಬಗ್ಗೆಯೂ ನಿರಂತರ ನಿಗಾ ಇಡಲಾಗುತ್ತಿದೆ. ಜೊತೆಗೆ ಶಿವಮೊಗ್ಗ ನಗರ ಹಾಗೂ ಪಟ್ಟಣ ಪ್ರದೇಶಗಳ ಹೊರವಲಯದಲ್ಲಿ ಅನುಮಾನಾಸ್ಪದವಾಗಿ ಓಡಾಡುವವರ ಮೇಲೆ ನಿಗಾ ಇಡಲಾಗುತ್ತಿದೆ’ ಎಂದು ಪೊಲೀಸರೊಬ್ಬರು ತಿಳಿಸಿದರು.
ಶಾಲಾ–ಕಾಲೇಜುಗಳಲ್ಲಿ ಜಾಗೃತಿ:
ಗಾಂಜಾ ಸೇವನೆಯಿಂದ ಆಗುವ ಅಪಾಯ, ಡಗ್ಸ್ ಚಟಕ್ಕೆ ಬಿದ್ದರೆ ಆಗುವ ತೊಂದರೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯ ಕಾಲೇಜುಗಳಲ್ಲಿ ಪೊಲೀಸ್ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಕಾಲೇಜು ಪರಿಸರದಲ್ಲಿ ಗಾಂಜಾ ವ್ಯಸನಿಗಳು, ಪೆಡ್ಲರ್‌ಗಳು ಕಾಣಸಿಕ್ಕರೆ ಆ ಬಗ್ಗೆ ಮಾಹಿತಿ ನೀಡುವಂತೆಯೂ ಕೋರಲಾಗುತ್ತಿದೆ. ಸ್ವತಃ ಎಸ್‌ಪಿ ಬಿ. ನಿಖಿಲ್ ಅವರೇ ಈ ಜಾಗೃತಿ ಕಾರ್ಯಕ್ರಮದ ನೇತೃತ್ವ ವಹಿಸಿ, ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುತ್ತಿದ್ದಾರೆ.
ಮಾಹಿತಿ ಕೊಡಲು ‘ಪಬ್ಲಿಕ್ ಐ’ ಸಂಪರ್ಕಿಸಿ
‘ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಮಾರಾಟ ಮಾಡುವವರು ಹಾಗೂ ಸೇವನೆ ಮಾಡುವವರ ಬಗ್ಗೆ ಸಾರ್ವಜನಿಕರು ಪೊಲೀಸ್ ಇಲಾಖೆಯ ಪಬ್ಲಿಕ್ ಐ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಮಾಹಿತಿ ಕಳುಹಿಸಬಹುದು. ಇಲ್ಲವೇ ನೇರವಾಗಿ ನನ್ನನ್ನೇ (94808–03301) ಸಂಪರ್ಕಿಸಬಹುದು. ಮಾಹಿತಿ ಕೊಡುವವರ ಹೆಸರು ಗೌಪ್ಯವಾಗಿ ಇಡಲಿದ್ದೇವೆ’ ಎಂದು ಬಿ. ನಿಖಿಲ್ ತಿಳಿಸಿದ್ದಾರೆ.
ಒಂದೂವರೆ ತಿಂಗಳಲ್ಲಿ 105 ಜನರ ವಿರುದ್ಧ ಪ್ರಕರಣ
ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ 2024ರಲ್ಲಿ 104 ಪೆಡ್ಲರ್‌ಗಳು ಸೇರಿ 505 ಜನರ ಮೇಲೆ ಪ್ರಕರಣ ದಾಖಲಿಸಿ ಒಟ್ಟು 54 ಕೆ.ಜಿ 476 ಗ್ರಾಂ ಗಾಂಜಾ ವಶಪಡಿಸಿಕೊಂಡಿದೆ. 2025ರಲ್ಲಿ 101 ಪೆಡ್ಲರ್‌ಗಳು ಸೇರಿ 660 ಜನರ ಮೇಲೆ ಪ್ರಕರಣ ದಾಖಲಿಸಿ 5282 ಕೆ.ಜಿ ಗಾಂಜಾ ಮತ್ತು 26 ಗ್ರಾಂ ಎಂಡಿಎಂಎ ಮಾತ್ರೆ ವಶಪಡಿಸಿಕೊಂಡಿದೆ. 2026ರಲ್ಲಿ ಎಸ್ಪಿ ಬಿ.ನಿಖಿಲ್ ಅಧಿಕಾರ ಸ್ವೀಕರಿಸಿದ ನಂತರ ಫೆ.26ರವರೆಗೆ 25 ಪೆಡ್ಲರ್‌ಗಳು ಸೇರಿ 105 ಜನರ ಬಂಧಿಸಿ 15.81 ಕೆ.ಜಿ ಗಾಂಜಾ ಹಾಗೂ 125 ಗ್ರಾಂ ಎಂಡಿಎಂಎ ಮಾತ್ರೆ ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲೆಯಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತು ಸೇವನೆ ಮಾರಾಟದ ವಿಚಾರದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ. ಯುವಜನರ ಸ್ವಾಸ್ಥ್ಯ ಕೆಡಿಸುವ ಯಾವುದೇ ವಿಚಾರದಲ್ಲಿ ಇಲಾಖೆ ‘ಶೂನ್ಯ ಸಹಿಷ್ಣುತೆ’ ಹೊಂದಿದೆ.ಬಿ.ನಿಖಿಲ್, ಶಿವಮೊಗ್ಗ ಎಸ್‌ಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.