
ಶಿವಮೊಗ್ಗ ತಾಲ್ಲೂಕಿನ ಪುರದಾಳು ಗ್ರಾಮ ಪಂಚಾಯಿತಿ ಕಟ್ಟಡದ ಮೇಲಿನ ಮಳೆ ಮಾಪನ ಯಂತ್ರಕ್ಕೆ ಮೇಲ್ಚಾವಣಿ ಅಳವಡಿಸಿರುವುದು.
ಶಿವಮೊಗ್ಗ: ‘ಮಳೆ ಮಾಪನ ಯಂತ್ರ ಕೆಟ್ಟರೆ ಅದರಿಂದ ವಿಮಾ ಕಂಪನಿಗೆ ಲಾಭ’... ಹೀಗೊಂದು ಹೊಸ ಚರ್ಚೆ ಜಿಲ್ಲೆಯ ರೈತಾಪಿ ವರ್ಗದ ನಡುವೆ ನಡೆಯುತ್ತಿದೆ. ಅದಕ್ಕೆ ಪೂರಕವಾಗಿ ಜಿಲ್ಲೆಯಲ್ಲಿ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೋಶ (ಕೆಎಸ್‌ಎನ್‌ಡಿಎಂಸಿ) ಅಳವಡಿಸಿರುವ 280 ಮಳೆ ಮಾಪನ ಯಂತ್ರಗಳಲ್ಲಿ ಅಧಿಕೃತವಾಗಿಯೇ 168 ಕೆಟ್ಟು ಹೋಗಿವೆ. ಅದರ ಫಲಿತಾಂಶ ಈ ಬಾರಿ ಜಿಲ್ಲೆಗೆ ಅಡಿಕೆ, ಮಾವು, ಕಾಳುಮೆಣಸು ಹಾಗೂ ಶುಂಠಿ ಬೆಳೆಗಳಿಗೆ ಬಿಡುಗಡೆಯಾಗಿರುವ ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ಪ್ರಕಟವಾಗಿದೆ.
ಜಿಲ್ಲೆಯ ರೈತರಿಗೆ 2024ನೇ ಸಾಲಿನಲ್ಲಿ ₹113 ಕೋಟಿ ವಿಮಾ ಪರಿಹಾರ ಮೊತ್ತ ಬಿಡುಗಡೆಯಾಗಿದೆ. ಆದರೆ, 2023ರಲ್ಲಿ ₹156 ಕೋಟಿ ಬಿಡುಗಡೆಯಾಗಿತ್ತು. ವಿಶೇಷವೆಂದರೆ ಆಗ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 10ರಷ್ಟು ಮಳೆಯ ಕೊರತೆ ಇತ್ತು. 2024ರಲ್ಲಿ ವಾಡಿಕೆಗಿಂತ ಶೇ 30ರಷ್ಟು ಮಳೆ ಹೆಚ್ಚು ದಾಖಲಾದರೂ ವಿಮಾ ಮೊತ್ತ ₹ 43 ಕೋಟಿಯಷ್ಟು ಕಡಿಮೆಯಾಗಿದೆ. ಇದಕ್ಕೆ ಕೆಟ್ಟು ನಿಂತಿರುವ ಮಳೆ ಮಾಪನ ಯಂತ್ರಗಳೇ ಕಾರಣ ಎಂಬುದು ರೈತಾಪಿ ವರ್ಗದ ಆರೋಪ.
ಐದು ಅಂಕಿಯಿಂದ ಮೂರು ಅಂಕಿಗೆ ಕುಸಿತ: 2023ರಲ್ಲಿ ಸಾಗರ ತಾಲ್ಲೂಕಿನಲ್ಲಿ 1,038 ಮಿ.ಮೀ ಮಳೆ ಬಿದ್ದಿದೆ (ಅದೂ ವಾಡಿಕೆಗಿಂತ ಶೇ 10ರಷ್ಟು ಕಡಿಮೆ). ಅಲ್ಲಿನ ಭೀಮನಕೋಣೆ, ಯಡಜಿಗಳೆಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಪ್ರತೀ ಹೆಕ್ಟೇರ್‌ಗೆ ಕ್ರಮವಾಗಿ ತಲಾ ₹ 80,000 ಹಾಗೂ ₹ 74,000 ವಿಮಾ ಪರಿಹಾರ ಮೊತ್ತ ಪಡೆದಿದ್ದರು. ಆದರೆ 2024ರಲ್ಲಿ ಸಾಗರ ತಾಲ್ಲೂಕಿನಲ್ಲಿ 3,864 ಮಿ.ಮೀ ಮಳೆ ಸುರಿದಿದೆ (ಅದೂ ವಾಡಿಕೆಗಿಂತ ಶೇ 55ರಷ್ಟು ಹೆಚ್ಚು). ಆದರೆ ಅದೇ ಭೀಮನಕೋಣೆ ರೈತರು ಹೆಕ್ಟೇರ್‌ಗೆ ₹ 600 ಹಾಗೂ ಯಡಜಿಗಳೆಮನೆ ರೈತರು ₹ 975 ಪರಿಹಾರ ಮೊತ್ತ ಪಡೆದಿದ್ದಾರೆ. ಹೊಸನಗರ ತಾಲ್ಲೂಕಿನ ನಿಟ್ಟೂರಿನ ಈ ಎಲ್ಲ ಅಂದಾದುಂದಿಗೆ ‘ಖಳ’ ಯಾರು ಅಂದರೆ ರೈತರು ಜಿಲ್ಲೆಯಲ್ಲಿ ಕೆಟ್ಟು ನಿಂತಿರುವ ಮಳೆ ಮಾಪನ ಯಂತ್ರಗಳತ್ತ ಬೆಟ್ಟು ಮಾಡುತ್ತಾರೆ. ಸಾಗರ ತಾಲ್ಲೂಕಿನಲ್ಲಿಯೇ 35 ಮಳೆ ಮಾಪನ ಯಂತ್ರಗಳ ಪೈಕಿ 25 ಕೆಲಸ ಮಾಡುತ್ತಿಲ್ಲ ಎಂಬುದರ ನಿದರ್ಶನ ನೀಡುತ್ತಾರೆ.
2016ರಲ್ಲಿ ಕೇಂದ್ರ ಸರ್ಕಾರ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಜಾರಿಗೊಳಿಸಿದೆ. ಯೋಜನೆಯಡಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗಿದೆ. ಬಿದ್ದ ಮಳೆ ಹಾಗೂ ಬೇಸಿಗೆಯಲ್ಲಿ ಬಿಸಿಲಿನ ಪ್ರಮಾಣದ ದತ್ತಾಂಶ ಆಧರಿಸಿ ವಿಮಾ ಮೊತ್ತ ನಿಗದಿ ಮಾಡಲು ಪ್ರತೀ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆ ಮಾಪನ ಯಂತ್ರಗಳನ್ನು ಅಳವಡಿಸಲಾಗಿದೆ. ಅವುಗಳ ನಿರ್ವಹಣೆಯ ಹೊಣೆಯನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೋಶ ವಹಿಸಿಕೊಂಡಿದೆ.
‘ಮಳೆ ಮಾಪನ ಯಂತ್ರಗಳು ಕೆಟ್ಟು ಹೋಗಿ ಮೂರು ವರ್ಷಗಳಾದರೂ ಅವುಗಳನ್ನು ದುರಸ್ತಿ ಮಾಡುವ ಕಾರ್ಯವಾಗಿಲ್ಲ. ಕೆಎಸ್‌ಎನ್‌ಡಿಎಂಸಿ ಕೇಂದ್ರೀಕೃತ ವ್ಯವಸ್ಥೆ ಹೊಂದಿದ್ದು, ಅದರ ತಂತ್ರಜ್ಞರು ಇಲ್ಲವೇ ಅಧಿಕಾರಿಗಳು ಯಾರೂ ಜಿಲ್ಲಾ ಮಟ್ಟದಲ್ಲಿ ಸಿಗುವುದಿಲ್ಲ. ಎಲ್ಲರೂ ಬೆಂಗಳೂರಿನಲ್ಲಿ ಇರುತ್ತಾರೆ. ಹೀಗಾಗಿ ಮಳೆ ಮಾಪನ ಯಂತ್ರಗಳು ನಿರ್ವಹಣೆ ಇಲ್ಲದೇ ಅನಾಥವಾಗಿ ಬಿದ್ದಿವೆ’ ಎಂದು ದಿಶಾ ಸಮಿತಿ ಸದಸ್ಯ, ಸಾಗರದ ಮಲ್ಲಿಕಾರ್ಜುನ ಹಕ್ರೆ ಹೇಳುತ್ತಾರೆ.
ಮಳೆಮಾಪನ ಯಂತ್ರಗಳು ಕೆಟ್ಟು ಹೋಗಿರುವುದು ಒಂದು ಕಡೆಯಾದರೆ ಕೆಲವು ಗ್ರಾಮ ಪಂಚಾಯಿತಿ ಹಾಗೂ ಶಾಲಾ ಕಟ್ಟಡಗಳ ಮೇಲೆ ಅಳವಡಿಸಿರುವ ಯಂತ್ರಗಳ ರಕ್ಷಣೆಗೆ ಮೇಲ್ಚಾವಣಿ ಅಳವಡಿಸಿದ ವೈರುಧ್ಯವೂ ನಡೆದಿದೆ. ಮಳೆಯು ಯಂತ್ರದ ಪಕ್ಕ ಬೀಳದೇ ಅದು ಮಾಪನವೇ ಆಗುತ್ತಿಲ್ಲ. ಇಲ್ಲಿಯೂ ವಿಮಾ ಮೊತ್ತ ನಿಗದಿಗೆ ಅಗತ್ಯ ದತ್ತಾಂಶ ಸಿಗುತ್ತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.