ADVERTISEMENT

ಸಾಗರ |ತಾಯಿ ಮಗು ಆಸ್ಪತ್ರೆಯ ಅಭಿವೃದ್ಧಿಗೆ ₹ 1.82 ಕೋಟಿ ಅನುದಾನ: ಬೇಳೂರು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 14:25 IST
Last Updated 4 ಸೆಪ್ಟೆಂಬರ್ 2024, 14:25 IST
ಸಾಗರದ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ ಶಾಸಕ ಗೋಪಾಲಕೃಷ್ಣ ಬೇಳೂರು ಅಲ್ಲಿನ ಕುಂದುಕೊರತೆಗಳನ್ನು ಪರಿಶೀಲಿಸಿದರು
ಸಾಗರದ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ ಶಾಸಕ ಗೋಪಾಲಕೃಷ್ಣ ಬೇಳೂರು ಅಲ್ಲಿನ ಕುಂದುಕೊರತೆಗಳನ್ನು ಪರಿಶೀಲಿಸಿದರು   

ಸಾಗರ: ಇಲ್ಲಿನ ತಾಯಿ ಮಗು ಆಸ್ಪತ್ರೆಯ ಮೂಲಸೌಕರ್ಯ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ₹ 1.82 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.

ಇಲ್ಲಿನ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ ಅಲ್ಲಿನ ಕುಂದುಕೊರತೆಗಳನ್ನು ಪರಿಶೀಲಿಸಿದ ನಂತರ ಅವರು ಮಾತನಾಡಿದರು.

ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಯಾವುದೇ ಅಡೆತಡೆ ಇಲ್ಲದಂತೆ ಗುಣಮಟ್ಟದ ಸೇವೆ ನೀಡುವತ್ತ ವೈದ್ಯ ಸಿಬ್ಬಂದಿ ಗಮನ ಹರಿಸಬೇಕು ಎಂದು ಸೂಚಿಸಿದರು.

ADVERTISEMENT

ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಪಕ್ಕದ ತಾಲ್ಲೂಕುಗಳಿಂದಲೂ ರೋಗಿಗಳು ಬರುತ್ತಾರೆ ಎಂದರೆ ಇಲ್ಲಿ ಉತ್ತಮ ಸೌಲಭ್ಯ ಹಾಗೂ ಸೇವೆ ಲಭ್ಯವಿದೆ ಎಂದರ್ಥ. ಈ ಹೆಸರನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ವೈದ್ಯರು ಹಾಗೂ ಸಿಬ್ಬಂದಿ ಮೇಲಿದೆ ಎಂದು ಕಿವಿಮಾತು ಹೇಳಿದರು.

ಇಲ್ಲಿನ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಕೆಎಂಎಫ್ ಸಂಸ್ಥೆಯ ದೊಡ್ಡ ಮಳಿಗೆಯನ್ನು ತೆರೆಯಲಾಗುವುದು. ಆಸ್ಪತ್ರೆಗೆ ದಾಖಲಾಗುವ ರೋಗಿಗಳನ್ನು ನೋಡಿಕೊಳ್ಳಲು ಬರುವ ಅವರ ಸಂಬಂಧಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಸರ್ಕಾರಿ ಆಸ್ಪತ್ರೆಯ ಕಟ್ಟಡದ ಕೆಲವೆಡೆ ಮಳೆಗಾಲದಲ್ಲಿ ಸೋರಿಕೆ ಕಂಡು ಬಂದಿತ್ತು. ಈಗ ಅದನ್ನು ಸರಿಪಡಿಸಲಾಗಿದೆ. ಡಯಾಲಿಸಿಸ್ ವಿಭಾಗದಲ್ಲಿ ಹಿಂದಿನಂತೆ ಯಾವುದೇ ದೂರುಗಳಿಲ್ಲದೆ ಉತ್ತಮ ಸೇವೆ ಲಭ್ಯವಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪರಪ್ಪ, ನಗರಸಭೆ ಸದಸ್ಯರಾದ ಮಧುಮಾಲತಿ, ಗಣಪತಿ ಮಂಡಗಳಲೆ, ಸೈಯದ್ ಜಾಕೀರ್, ಚಂದ್ರಪ್ಪ, ರವಿ ವಿಜಯನಗರ, ಪ್ರಮುಖರಾದ ಸೋಮಶೇಖರ್ ಲ್ಯಾವಿಗೆರೆ, ಚೇತನ್ ರಾಜ್ ಕಣ್ಣೂರು, ಕಲಸೆ ಚಂದ್ರಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.