ಶಿವಮೊಗ್ಗ: ಶ್ರಾವಣದ ಸೊಬಗಿನ ನಡುವೆ ಮಂಗಳವಾರ ಸಮೀಪದ ಸಕ್ರೆಬೈಲು ಬಿಡಾರದಲ್ಲಿ ಆನೆಗಳ ಹಬ್ಬದ ಸಂಭ್ರಮ ಕಳೆಗಟ್ಟಿತ್ತು.
ಗಾಜನೂರಿನ ತುಂಗಾ ಜಲಾಶಯದ ಹಿನ್ನೀರಿಗೆ ತಾಗಿಕೊಂಡ ಸಕ್ರೆಬೈಲಿನಲ್ಲಿ ವಿಶ್ವ ಆನೆ ದಿನದ ಖುಷಿ ಗರಿಗೆದರಿತ್ತು. ಇದಕ್ಕೆ ವಿವಿಧೆಡೆಯಿಂದ ಬಂದ ಪ್ರವಾಸಿಗರು, ವನ್ಯಜೀವಿ ಪ್ರಿಯರು, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪಕ್ಕದ ಸಕ್ರೆಬೈಲು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಅರ್ಧ ದಿನ ಆನೆಗಳ ಆಟಾಟೋಪಕ್ಕೆ ಸಾಕ್ಷಿಯಾದರು.
ಮಳೆ, ಮೋಡದ ತಾಕಲಾಟದ ನಡುವೆ ಮುಂಜಾನೆಯೇ ತುಂಗೆಯ ಹಿನ್ನೀರಲ್ಲಿ ಮಿಂದೆದ್ದ ಬಿಡಾರದ ಗಜಪಡೆ ಥಂಡಿಯ ವಾತಾವರಣ ಅನುಭವಿಸಿತು. ‘ವಿಶ್ವ ಆನೆ ದಿನ’ದ ಹಿನ್ನೆಲೆಯಲ್ಲಿ ಸಕ್ರೆಬೈಲು ಬಿಡಾರವನ್ನು ತಳಿರು–ತೋರಣಗಳಿಂದ ಸಿಂಗರಿಸಲಾಗಿತ್ತು.
ಆನೆಗಳ ನೀರಾಟ ಮುಗಿಯುತ್ತಿದ್ದಂತೆಯೇ ಮಾವುತರು ಆನೆಗಳನ್ನು ಬಣ್ಣದ ಅಲಂಕಾರ ಮಾಡಿದರು. ಪಾದಗಳಿಗೆ ಉಗುರು ಬಣ್ಣದ ಮೆರುಗು, ಸೊಂಡಿಲಿಗೆ ಮುಖ ಕವಚ, ಬಣ್ಣದ ಷರಾಯಿ ತೊಟ್ಟು ಸಿಂಗಾರಗೊಂಡಿದ್ದ ಆನೆಗಳು ಗಾಂಭೀರ್ಯದಿಂದ ಸಾಲಾಗಿ ನಿಂತು ಪೂಜೆಗೆ ಅಣಿಯಾದವು.
ನಂತರ ಆನೆಗಳಿಗೆ ವಿದ್ಯುಕ್ತ ಪೂಜೆ ನೆರವೇರಿಸಲಾಯಿತು. ಶಿವಮೊಗ್ಗ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಟಿ.ಹನುಮಂತಪ್ಪ, ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ, ಎಸಿಎಫ್ ವಿಜಯಕುಮಾರ್, ಆನೆಗಳಿಗೆ ಬಾಳೆ ಹಣ್ಣು–ಕಬ್ಬು ತಿನ್ನಿಸಿ ಗೌರವ ಸಲ್ಲಿಸಿದರು.
ಬಾಳೆ, ಪಪ್ಪಾಯ ಜೊತೆಗೆ ಸೌತೆಕಾಯಿ, ಗಜ್ಜರಿ, ಬೆಲ್ಲದ ವಿಶೇಷದೊಂದಿಗೆ ಭೂರಿ ಭೋಜನವನ್ನು ಆನೆಗಳು ಸವಿದವು. ಕ್ಯಾಂಪ್‌ಗೆ ಬಂದಿದ್ದ ಪ್ರವಾಸಿಗರು ಆನೆಗಳಿಗೆ ಹಣ್ಣು–ಗಜ್ಜರಿ ತಿನ್ನಿಸಿ ಸೆಲ್ಫಿಗೆ ಪೋಸು ನೀಡಿದರು. ಕಾವಾಡಿಗರು ಆನೆಗಳ ಮೈ ತೊಳೆಯುವಾಗ ತಾವೂ ಕೈಜೋಡಿಸಿ ಮೊಬೈಲ್ ಕ್ಯಾಮೆರಾದಲ್ಲಿ ಸ್ಮರಣೀಯ ಗಳಿಗೆ ಆಗಿ ದಾಖಲಿಸಿಕೊಂಡರು.
ಆನೆಗಳ ಸೊಂಡಿಲ ಮಾದರಿಯನ್ನು ಮುಖಕ್ಕೆ ಧರಿಸಿಕೊಂಡು ಬಂದಿದ್ದ ಸಕ್ರೆಬೈಲು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕಿಯರೊಂದಿಗೆ ಸೇರಿ ಹಾಡಿ–ಕುಣಿದು ಆನೆಗಳ ದಿನವನ್ನು ವಿಶೇಷವಾಗಿಸಿಕೊಂಡರು.
ತುಂಗೆ ಚಾಮುಂಡಿಯ ಮಿಂಚು...
ಸಕ್ರೆಬೈಲು ಬಿಡಾರದಲ್ಲಿದ್ದ ಎರಡು ಪುಟ್ಟ ಹೆಣ್ಣು ಆನೆ ಮರಿಗಳಿಗೆ ನಾಮಕರಣ ಮಾಡುವ ಮೂಲಕ ಆನೆ ದಿನವನ್ನು ಅರ್ಥಪೂರ್ಣವಾಗಿಸಲಾಯಿತು. ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಬಂದು ನೇತ್ರಾವತಿ ಆನೆ ಮರಿಗೆ ಜನ್ಮ ನೀಡಿತ್ತು. ಹೀಗಾಗಿ ಅದರ ಮರಿಗೆ ‘ಚಾಮುಂಡಿ’ ಎಂದು ಹೆಸರಿಡಲಾಯಿತು. ಸಕ್ರೆಬೈಲು ಆನೆ ಬಿಡಾರದ ಪಕ್ಕದಲ್ಲಿಯೇ ತುಂಗಾ ನದಿ ಹರಿಯುವ ಕಾರಣ ಅದರ ಗೌರವಾರ್ಥ ಭಾನುಮತಿಯ ಮರಿಗೆ ‘ತುಂಗಾ’ ಎಂದು ಹೆಸರಿಡಲಾಯಿತು ಎಂದು ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ ತಿಳಿಸಿದರು.
‘ಸಂಘರ್ಷದ ಬದಲಿಗೆ ಸಹಬಾಳ್ವೆಯ ಸಂದೇಶ’
‘ಆನೆ ಸಂರಕ್ಷಣೆ ಮಾನವ– ಆನೆ ಸಂಘರ್ಷ ನಿರ್ವಹಣೆ ಮತ್ತು ಸಹಬಾಳ್ವೆಯ ಮಹತ್ವ ಸಾರುವ ಸಂದೇಶದೊಂದಿಗೆ ಈ ವರ್ಷ ‘ವಿಶ್ವ ಆನೆಗಳ ದಿನ’ ಆಚರಿಸಲಾಗುತ್ತಿದೆ’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಟಿ.ಹನುಮಂತಪ್ಪ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಬಿಡಾರದಲ್ಲಿ 25 ಆನೆಗಳಿವೆ. ಅದರಲ್ಲಿ 22 ಆನೆಗಳನ್ನು ಪಳಗಿಸಲಾಗಿದೆ. ಅದರಲ್ಲಿ 16 ಗಂಡು ಐದು ಹೆಣ್ಣು ಮತ್ತು 1 ಮಕನ ಆನೆ ಸೇರಿವೆ. ಆನೆ ಸೆರೆ ಕಾರ್ಯಾಚರಣೆ ಉಪಟಳ ನೀಡುವ ಆನೆ ಹಿಮ್ಮೆಟ್ಟಿಸಲು ಹಾಗೂ ದಸರಾ ಉತ್ಸವದಲ್ಲಿ ಈ ಆನೆಗಳನ್ನು ಬಳಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ್ ಮಾತನಾಡಿ ‘ಹೆಣ್ಣು ಆನೆಗಳು ತಮ್ಮ ಗುಂಪುಗಳನ್ನು ಮುನ್ನಡೆಸಿ ಮಾರ್ಗದರ್ಶನ ಮಾಡುತ್ತವೆ. ಹಿಂಡಿನಲ್ಲಿದ್ದಾಗ ಅವು ಹಂಚಿಕೊಳ್ಳುವ ನೆನಪುಗಳ ಹಿನ್ನೆಲೆಯಲ್ಲಿ ‘ಮಾತೃ ಪ್ರಧಾನರು ಮತ್ತು ನೆನಪುಗಳು’ ಎಂಬ ಧ್ಯೇಯವಾಕ್ಯದೊಂದಿಗೆ ಈ ಬಾರಿಯ ವಿಶ್ವ ಆನೆಗಳ ದಿನ ಆಚರಿಸಲಾಗುತ್ತಿದೆ. ಹಿಂಡನ್ನು ಮುನ್ನಡೆಸುವ ಹೆಣ್ಣು ಆನೆಯು ತನ್ನ ವಿಶೇಷ ನೆನಪಿನ ಶಕ್ತಿಯಿಂದ ಗುಂಪಿನ ಎಲ್ಲರಿಗೂ ನೀರು ಆಹಾರ ದೊರೆಯಲು ಸಹಕರಿಸುತ್ತದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾನವ–ಆನೆ ಸಂಘರ್ಷದಿಂದ ಬಾಧಿತ ಕಾಡಂಚಿನ ಸಮುದಾಯಗಳು ಮತ್ತು ವಿದ್ಯಾರ್ಥಿಗಳಲ್ಲಿ ಆನೆಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪುರದಾಳು ಹೆದ್ದಾರಿಪುರ ಬೆಳ್ಳೂರು ಶಾಲೆಗಳಲ್ಲಿ ಚಿತ್ರಕಲೆ ಪ್ರಬಂಧ ಮತ್ತು ಪೋಸ್ಟರ್ ರಚನೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಎಸಿಎಫ್ ವಿಜಯಕುಮಾರ್ ಆರ್‌ಎಫ್‌ಒ ಜೆ.ಆರ್.ವಿನಯ್ ಹಾಜರಿದ್ದರು.
ಆನೆ ದಿನ ಸ್ಮರಣೆ; ಅಂಚೆ ಲಕೋಟೆ ಬಿಡುಗಡೆ
ಕಾರ್ಯಕ್ರಮದಲ್ಲಿ ವಿಶ್ವ ಆನೆ ದಿನಾಚರಣೆ ಸ್ಮರಣೆಗಾಗಿ ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳಿಸಲಾಯಿತು. ಅಂಚೆ ಇಲಾಖೆ ಅಧೀಕ್ಷಕ ಜಯರಾಂ ಶೆಟ್ಟಿ ಮಾತನಾಡಿ ‘ವಿಶ್ವ ಆನೆ ದಿನಾಚರಣೆ ಸ್ಮರಣಾತ್ಮಕವಾಗಿ ಈ ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳಿಸಲಾಗಿದೆ’ ಎಂದರು. ‘2000 ಲಕೋಟೆ ಮಾತ್ರ ಮುದ್ರಿಸಿದ್ದು ಅದರ ಮೌಲ್ಯ ₹ 30 ಆಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡಲಾಗುತ್ತದೆ. ಈ ಲಕೋಟೆಯ ಲಭ್ಯತೆ ಸೀಮಿತವಾಗಿರುವ ಕಾರಣಕ್ಕೆ ಮುಂದೆ ಇದರ ಮೌಲ್ಯ ವೃದ್ಧಿಯಾಗುತ್ತದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.