ADVERTISEMENT

ಶಿವಮೊಗ್ಗ | ಕಲುಷಿತ ತುಂಗಭದ್ರೆಯನ್ನು ನಿರ್ಮಲಗೊಳಿಸೋಣ: ಸಂತೋಷ್ ಎಂ.ಎಸ್

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 3:57 IST
Last Updated 1 ಮಾರ್ಚ್ 2026, 3:57 IST
ಶಿವಮೊಗ್ಗದಲ್ಲಿ ನಡೆದ ‘ನಿರ್ಮಲ ತುಂಗಭದ್ರಾ’ ಕಾರ್ಯಾಗಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ.ಎಸ್. ಉದ್ಘಾಟಿಸಿದರು
ಶಿವಮೊಗ್ಗದಲ್ಲಿ ನಡೆದ ‘ನಿರ್ಮಲ ತುಂಗಭದ್ರಾ’ ಕಾರ್ಯಾಗಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ.ಎಸ್. ಉದ್ಘಾಟಿಸಿದರು   

ಶಿವಮೊಗ್ಗ: ‘ಕೆಲವರ ದುರಾಸೆ, ಅಜಾಗರೂಕತೆ ಹಾಗೂ ಬೇಜವಾಬ್ದಾರಿತನದಿಂದ ತುಂಗಭದ್ರಾ ನದಿ ಕಲುಷಿತಗೊಂಡಿದ್ದು, ನದಿ ನೀರು ಸಂಪೂರ್ಣವಾಗಿ ಬಳಕೆಗೆ ಅಯೋಗ್ಯವಾಗುವ ಸ್ಥಿತಿ ಬರುವ ಮುನ್ನವೇ ಜಾಗೃತರಾಗಿ ಅದನ್ನು ರಕ್ಷಿಸುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ.ಎಸ್. ಹೇಳಿದರು.

ನಗರದ ಓಪನ್ ಮೈಂಡ್ಸ್ ವರ್ಲ್ಡ್‌ನಲ್ಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ಪರ್ಯಾವರಣ ಟ್ರಸ್ಟ್, ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ‘ನಿರ್ಮಲ ತುಂಗಭದ್ರಾ’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದಕ್ಕಿಂತ, ನದಿ ಮಾಲಿನ್ಯದ ಮೂಲಗಳನ್ನು ಗುರುತಿಸಿ ಅವರ ಗಮನಕ್ಕೆ ತಂದು ಸಹಕಾರ ಪಡೆಯುವುದು ಅಗತ್ಯ. ಈ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ‘ನಿರ್ಮಲ ತುಂಗಭದ್ರಾ’ ಅಭಿಯಾನ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ’ ಎಂದು ಹೇಳಿದರು.

ADVERTISEMENT

‘ಪರಿಸರ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆಯ ಜವಾಬ್ದಾರಿ ಮಹತ್ವದದ್ದು; ಕಾನೂನುಬದ್ಧ ಕ್ರಮಗಳಿಗೆ ನ್ಯಾಯಾಲಯ ಸದಾ ಬೆಂಬಲ ನೀಡುತ್ತದೆ’ ಎಂದು ಸ್ಪಷ್ಟಪಡಿಸಿದರು.

ಸಾನ್ನಿಧ್ಯ ವಹಿಸಿದ್ದ ನರಗುಂದ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಜಲ ಸಂರಕ್ಷಣಾ ಕಾರ್ಯದಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡುವ ಅಗತ್ಯವಿದೆ. ಹಿಂದಿನ ಜಲಜಾಗೃತಿ– ಜನಜಾಗೃತಿ ಪಾದಯಾತ್ರೆ ನಿರೀಕ್ಷಿತ ಯಶಸ್ಸು ಕಂಡಿದ್ದು, ನದಿಯ ಎಲ್ಲ ಭಾಗಗಳಲ್ಲೂ ನಿರ್ಮಲತೆ ಸಾಧಿಸಲು ಇಂತಹ ಕಾರ್ಯಾಗಾರಗಳು ಅವಶ್ಯಕ ಎಂದು ಹೇಳಿದರು.

ಪರ್ಯಾವರಣ ಟ್ರಸ್ಟ್ ಅಧ್ಯಕ್ಷ ಬಿ.ಎಂ. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ನಿರ್ಮಲ ತುಂಗಭದ್ರಾ ಅಭಿಯಾನ ಸಂಚಾಲಕ ಎಂ. ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಪಾಟೀಲ್ ವೀರಾಪುರ, ಡಾ. ಶ್ರೀಪತಿ ಎಲ್.ಕೆ., ಗಿರೀಶ್ ಪಟೇಲ್, ಕಿರಣ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತುಂಗಭದ್ರಾ ನದಿ ತಟ ಪ್ರದೇಶಗಳಿಂದ ನೂರಾರು ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.