ADVERTISEMENT

ಶಿವಮೊಗ್ಗ | ಸಂವಿಧಾನದ 9ನೇ ಪರಿಚ್ಛೇದಕ್ಕೆ ತಿದ್ದುಪಡಿ ತನ್ನಿ: ವಿ.ಎಸ್.ಉಗ್ರಪ್ಪ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 3:17 IST
Last Updated 17 ಫೆಬ್ರುವರಿ 2026, 3:17 IST
ವಿ.ಎಸ್.ಉಗ್ರಪ್ಪ
ವಿ.ಎಸ್.ಉಗ್ರಪ್ಪ   

ಶಿವಮೊಗ್ಗ : ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದವರಿಗೆ ಇರುವ ಮೀಸಲಾತಿ ಪ್ರಮಾಣ ಹೆಚ್ಚಳಗೊಳಿಸಲು ಅನುಕೂಲವಾಗುವಂತೆ ಸಂವಿಧಾನದ 9ನೇ ಪರಿಚ್ಛೇದಕ್ಕೆ ತಿದ್ದುಪಡಿ ತರಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಇರುವ ಮೀಸಲಾತಿ ಪ್ರಮಾಣವನ್ನು ಕಳೆದ ಬಿಜೆಪಿ ಸರ್ಕಾರದಲ್ಲಿಯೇ ಶೇ 56 ಕ್ಕೆ ಹೆಚ್ಚಿಸಲಾಗಿತ್ತು. ಈ ಬಾರಿಯ ಬೆಳಗಾವಿ ಅಧಿವೇಶನದಲ್ಲಿಯೂ ಕೂಡ ರಾಜ್ಯ ಸರ್ಕಾರ ಇದನ್ನು ಒಪ್ಪಿ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಆದರೆ ಈ ವಿಚಾರದಲ್ಲಿ ಸಂವಿಧಾನದ 9ನೇ ಪರಿಚ್ಛೇದಕ್ಕೆ ತಿದ್ದುಪಡಿ ಮಾಡದ ಹೊರತು ಅದು ಜಾರಿಯಾಗುವುದಿಲ್ಲ. ಇದರಿಂದ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದವರಿಗೆ ಅನ್ಯಾಯವಾದಂತಾಗುತ್ತದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು. ‌‌

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಿ ಸಂವಿಧಾನದ 9ನೇ ಪರಿಚ್ಛೇದಕ್ಕೆ ತಿದ್ದುಪಡಿ ತರಲು ಕೇಂದ್ರಕ್ಕೆ ಒತ್ತಾಯಿಸಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಹಿಂದುಳಿದವರ ಬಗ್ಗೆ ಕಾಳಜಿ ಇದ್ದರೆ ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಮೀಸಲಾತಿ ಎಂಬುದು ಭಿಕ್ಷೆಯಲ್ಲ. ಅದು ನಮ್ಮ ಹಕ್ಕು ಎಂದರು.

ADVERTISEMENT

ಯಾವುದೇ ಮೀಸಲಾತಿ ನೀಡುವಾಗ ಕುಲಶಾಸ್ತ್ರೀಯ ಅಧ್ಯಯನ ಕಡ್ಡಾಯವಾಗಿರುತ್ತದೆ. ಯಾರಿಗೆ ಬೇಕಾದರೂ ಮೀಸಲಾತಿ ನೀಡಲಿ ಬೇಡ ಅನ್ನುವುದಿಲ್ಲ. ಎಲ್ಲಾ ಸಮಾಜದವರು ಕೂಡ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದೆ ಉಳಿದಿರುತ್ತಾರೆ. ಕುಲಶಾಸ್ತ್ರದ ಅಧ್ಯಯನದಿಂದ ಯಾರಿಗೆ ಮೀಸಲಾತಿ ಎಷ್ಟು ಪ್ರಮಾಣದಲ್ಲಿ ಕೊಡಬೇಕು ಎಂಬುದು ಗೊತ್ತಾಗುತ್ತದೆ. ಆದರೆ ಮೀಸಲಾತಿ ಜಾರಿ ಮಾಡುವಾಗ, ಹೊಸದಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಿದಾಗ ಒಟ್ಟಾರೆ ಮೀಸಲಾತಿ ಪ್ರಮಾಣ ಕೂಡ ಹೆಚ್ಚಿಸಬೇಕಿರುವುದು ಅನಿವಾರ್ಯ ಎಂದರು.

ಮೀಸಲಾತಿ ಪ್ರಮಾಣ ಶೇ.50ರಷ್ಟು ಮೀರಬಾರದು ಎಂದು ಸುಪ್ರೀಂಕೋರ್ಟ್ ಹೇಳಿದ್ದರೂ, ಅದೇ ನ್ಯಾಯಾಲಯ ಯಾವ ಸಮುದಾಯಕ್ಕೆ ಅನ್ಯಾಯವಾಗಿರುತ್ತದೆಯೋ ಅವರಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದು ಹೇಳಿದೆ. ಕೆಲವು ರಾಜ್ಯಗಳು ಮೀಸಲಾತಿ ಪ್ರಮಾಣ ಶೇ.69ರಷ್ಟು ಹೆಚ್ಚಿಸಿವೆ. ಅದೇ ಮಾದರಿಯಲ್ಲಿ ಇಲ್ಲಿಯೂ ಹೆಚ್ಚಿಸಬೇಕು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಾಯಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣಪ್ಪ, ಎಸ್ಸಿ-ಎಸ್ಟಿ ವಿಭಾಗದ ಅಧ್ಯಕ್ಷ ಶ್ರೀಧರ್, ಪ್ರಮುಖರಾದ ರಂಗಪ್ಪ, ನೀಲಪ್ಪ, ಕೃಷ್ಣಪ್ಪ, ವೀರೇಶಪ್ಪ, ರಾಜಣ್ಣ, ನಾಗೇಂದ್ರ, ಪ್ರಶಾಂತ್ ಇದ್ದರು.

ಕುರುಬರೂ ಸೇರಿದಂತೆ ಯಾವುದೇ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ನನ್ನ ವಿರೋಧವಿಲ್ಲ. ಅವರಿಗೆ ಮೀಸಲಾತಿ ನೀಡಬಾರದು ಎಂದು ನಾನು ಹೇಳಿಯೂ ಇಲ್ಲ. ಈ ಬಗ್ಗೆ ಅಪಪ್ರಚಾರ ಸಲ್ಲದು
ವಿ.ಎಸ್.ಉಗ್ರಪ್ಪ ಮಾಜಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.