ADVERTISEMENT

ರಾಜ್ಯಪಾಲರ ವಿರುದ್ಧ ಪ್ರತಿಭಟನೆ: ವಾಪಸ್‌ ಕರೆಯಲು ರಾಷ್ಟ್ರಪತಿಗೆ ಕಾಂಗ್ರೆಸ್ ಮನವಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 3:06 IST
Last Updated 24 ಜನವರಿ 2026, 3:06 IST
...
...   

ಶಿವಮೊಗ್ಗ: ಸಂವಿಧಾನದ ಆಶಯಗಳನ್ನು ಉಲ್ಲಂಘಿಸಿ ರಾಜ್ಯ ಸರ್ಕಾರಕ್ಕೆ ಅವಮಾನ ಎಸಗಿದ್ದಾರೆ ಎಂದು ಆರೋಪಿಸಿ, ಕರ್ನಾಟಕದ ರಾಜ್ಯಪಾಲರನ್ನು ವಾಪಸ್ ಕರೆಯಿಸಿಕೊಳ್ಳಬೇಕು ಎಂದು ಆಗ್ರಹಿಸಿ ಶಿವಮೊಗ್ಗ ನಗರ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಮಹಾನಗರ ಪಾಲಿಕೆ ಆವರಣ ದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.‌

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್. ರಮೇಶ್ ಮಾತನಾಡಿ, ‘ರಾಜ್ಯಪಾಲರು ಬಿಜೆಪಿ ಏಜೆಂಟ್‌ರಂತೆ ವರ್ತಿಸುತ್ತಿದ್ದು, ಆರ್‌ಎಸ್‌ಎಸ್‌ನ ಕೈಗೊಂಬೆಯಾಗಿದ್ದಾರೆ’ ಎಂದು ಆರೋಪಿಸಿದರು.

ವಿಧಾನ ಮಂಡಲ ಅಧಿವೇಶನದ ಜಂಟಿ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುವುದು ರಾಜ್ಯಪಾಲರ ಸಂವಿಧಾನಾತ್ಮಕ ಕರ್ತವ್ಯ. ಅದನ್ನು ಉಲ್ಲಂಘಿಸಿ ಭಾಷಣ ಮಾಡದೆ ಹೊರನಡೆಯುವುದು ಕನ್ನಡಿಗರು ಹಾಗೂ ಸಂವಿಧಾನಕ್ಕೆ ಮಾಡಿದ ದ್ರೋಹವಾಗಿದೆ’ ಎಂದು ಹೇಳಿದರು.

ADVERTISEMENT

‘ರಾಜ್ಯಪಾಲರು ಪಕ್ಷಾತೀತವಾಗಿ ಕಾರ್ಯನಿರ್ವಹಿಸಬೇಕು. ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆಯಲು ಸ್ಪಷ್ಟ ಕಾರಣಗಳಿದ್ದು, ಕೇಂದ್ರ ಸರ್ಕಾರದ ಒತ್ತಡಕ್ಕೆ ಒಳಗಾಗಿ ನಡೆದುಕೊಳ್ಳುತ್ತಿರುವುದು ಸಂವಿಧಾನ ವಿರೋಧಿ’ ಎಂದು ಅವರು ಟೀಕಿಸಿದರು.

ಪ್ರತಿಭಟನೆಯಲ್ಲಿ ಮಧುಸೂದನ್, ಇಸ್ಮಾಯಿಲ್ ಖಾನ್, ವಿಶ್ವನಾಥ್ ನಾಥ್ ಕಾಶಿ, ರಮೇಶ್ ಹೆಗ್ಡೆ, ಎಚ್.ಸಿ. ಯೋಗೀಶ್, ಶಿವಕುಮಾರ್, ಹರ್ಷಿತ್ ಗೌಡ, ಚರಣ್ ಜೆ. ಶೆಟ್ಟಿ, ಗಿರೀಶ್, ಮಹಮ್ಮದ್ ಗೌಸ್, ಪ್ರವೀಣ್, ಶಶಿಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಕಾಂಗ್ರೆಸ್ ಮುಖಂಡರು ಮಹಾನಗರ ಪಾಲಿಕೆ ಸಿಬ್ಬಂದಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.