ADVERTISEMENT

ಶಿವಮೊಗ್ಗ| ಶಿವರಾತ್ರಿ: ಶಿವನ ಭಕ್ತಿಯಲ್ಲಿ ಮಿಂದೆದ್ದ ಭಕ್ತರು

ಬೆಳಿಗ್ಗೆಯಿಂದಲೇ ದೇವಾಲಯಗಳಲ್ಲಿ ವಿಶೇಷ ಪೂಜೆ; ಮಹಾದೇವನ ದರ್ಶನಕ್ಕೆ ಭಕ್ತಸಾಗರ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2023, 5:15 IST
Last Updated 19 ಫೆಬ್ರುವರಿ 2023, 5:15 IST
ಚಿತ್ರ 1. ಶಿವಮೊಗ್ಗದ ವಿನೋಬ ನಗರ, ಶಿವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ನೆರವೇರಿತು ಚಿತ್ರ 2. ಕೋಟೆ ರಸ್ತೆ, ಪಾರ್ವತಿ ಭೀಮೇಶ್ವರ ದೇವಸ್ಥಾನದಲ್ಲಿ ಅಲಂಕಾರ ಮಾಡಿರುವುದು ಚಿತ್ರ 3. ವಿನೋಬ ನಗರ ಶಿವಾಲಯದಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಚಿತ್ರ 1. ಶಿವಮೊಗ್ಗದ ವಿನೋಬ ನಗರ, ಶಿವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ನೆರವೇರಿತು ಚಿತ್ರ 2. ಕೋಟೆ ರಸ್ತೆ, ಪಾರ್ವತಿ ಭೀಮೇಶ್ವರ ದೇವಸ್ಥಾನದಲ್ಲಿ ಅಲಂಕಾರ ಮಾಡಿರುವುದು ಚಿತ್ರ 3. ವಿನೋಬ ನಗರ ಶಿವಾಲಯದಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.   

ಶಿವಮೊಗ್ಗ: ಶಿವರಾತ್ರಿ ಹಬ್ಬವನ್ನು ಶನಿವಾರ ನಗರದಲ್ಲಿ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು. ಭಕ್ತರು ಬೆಳಿಗ್ಗೆಯಿಂದ ರಾತ್ರಿಯವರೆಗೆ ಸಹಸ್ರ ಸಂಖ್ಯೆಯಲ್ಲಿ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದರು.

ಇಲ್ಲಿನ ವಿನೋಬನಗರದ ಶಿವನ ದೇವಾಲಯದಲ್ಲಿ ವಿಶೇಷವಾಗಿ ಪೂಜೆ ನೆರವೇರಿತು. ಭಕ್ತರು ದೇವಸ್ಥಾನಕ್ಕೆ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಮಹಿಳೆಯರು ಅತ್ಯಂತ ಸಡಗರದಿಂದ ಮತ್ತು ಶ್ರದ್ಧಾಭಕ್ತಿಯಿಂದ ಶಿವನ ಆರಾಧಿಸುವ ದೃಶ್ಯ ಸಾಮಾನ್ಯವಾಗಿತ್ತು. ಮುಂಜಾನೆ 4.30ಕ್ಕೆ ವಿಗ್ರಹಕ್ಕೆ ಅಭಿಷೇಕ ಮಾಡಿ, ಬೆಳಿಗ್ಗೆ 8.30ರ ಸುಮಾರಿಗೆ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

ಭಕ್ತರಿಗೆ ಪಾನಕ, ಕೋಸಂಬರಿ, ಪ್ರಸಾದ ವಿನಿಯೋಗ ನಡೆಯಿತು. ರುದ್ರಾಭಿಷೇಕ ಮಾಡಿಸುವ ಭಕ್ತರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಂಸದ ಬಿ.ವೈ ರಾಘವೇಂದ್ರ, ಶಾಸಕ ಕೆ.ಎಸ್.ಈಶ್ವರಪ್ಪ, ವಿಧಾನಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ರುದ್ರೇಗೌಡ ಸೇರಿದಂತೆ ಅನೇಕ ಗಣ್ಯರು ದೇವರ ದರ್ಶನ ಪಡೆದರು. ಗರ್ಭಿಣಿ ಮಹಿಳೆಯರು ಹಾಗೂ ವಯಸ್ಸಾದವರಿಗೆ ನೇರ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿತ್ತು. 10 ಸಾವಿರಕ್ಕೂ ಹೆಚ್ಚು ಭಕ್ತರು ದೇವರ ದರ್ಶನ ಪಡೆದರು ಎಂದು ಅರ್ಚಕರು ತಿಳಿಸಿದರು.

ADVERTISEMENT

ಶಿವರಾತ್ರಿ ಅಂಗವಾಗಿ ವಿನೋಬನಗರ ಶಿವಾಲಯದ ಎದುರು ಬಾಲಗಂಗಾಧರ ತಿಲಕ್ ಯುವಕರ ಸೇನೆಯಿಂದ ಭಕ್ತರಿಗೆ ಮಜ್ಜಿಗೆ, ಕಡಲೆಕಾಳು ವಿತರಿಸಲಾಯಿತು. ಸೇನೆಯ ಅಧ್ಯಕ್ಷ ಸಂದೀಪ್ ಸುಂದರರಾಜ್, ಮುಖಂಡರಾದ ಎಚ್‌.ಪಿ. ಗಿರೀಶ್ ಗುರುಪ್ರಸಾದ್, ಶ್ರೀಕಾಂತ್, ಜಶ್ವಂತ್, ನಿಖಿಲ್ ಇದ್ದರು.

ಇಲ್ಲಿನ ಅಬ್ಬಲಗೆರೆ ಸಮೀಪದ ಈಶ್ವರವನದಲ್ಲಿ ವಿಶೇಷ ಶಿವರಾತ್ರಿ ಆಚರಿಸಲಾಯಿತು. ಪ್ರಕೃತಿ ಉಳಿಸುವ ಮತ್ತು ಬೆಳೆಸುವ ಮೂಲಕ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ಮುಂಜಾನೆಯಿಂದ ಪೂಜಾ ಕಾರ್ಯಕ್ರಮಗಳು ನೆರವೇರಿದವು. ನಟ ‘ಮಾಸ್ಟರ್’ ಆನಂದ್ ಅವರು ಪೂಜೆಯಲ್ಲಿ ಭಾಗವಹಿಸಿದ್ದರು.

ವನದ ಮುಖ್ಯಸ್ಥ ಎಂ.ವಿ.ನಾಗೇಶ್ ಅವರ ನೇತೃತ್ವದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ರುದ್ರಾಭಿಷೇಕ, ಭಜನೆ, ಪ್ರವಚನ, ಶಿವಸ್ತುತಿ ನೆರವೇರಿದವು. ಸಂಜೆ 6ಕ್ಕೆ ಶಾರದ ದೇವಿ ಅಂಧರ ವಿಕಾಸ ಕೇಂದ್ರದಿಂದ ಭಜನಾ ಕಾರ್ಯಕ್ರಮ ಜರುಗಿತು.

ಇಲ್ಲಿನ ತೀರ್ಥಹಳ್ಳಿ ರಸ್ತೆ, ಅರಕೆರೆ ಶ್ರೀರಾಮೇಶ್ವರ ದೇವಾಲಯದಲ್ಲಿ ಶಿವಲಿಂಗ ಹಾಗೂ ದೇವರ ಮೂರ್ತಿಗೆ ಅಭಿಷೇಕ ಮಾಡಲಾಯಿತು. ಹಬ್ಬದ ನಿಮಿತ್ತ ಮೂರ್ತಿಗೆ ಮಾಡಿದ ವಿಶೇಷ ಅಲಂಕಾರ ಗಮನ ಸೆಳೆಯಿತು. ತುಂಗಾ ನದಿಯಲ್ಲಿ ಭಕ್ತರು ಸ್ನಾನ ಮಾಡಿ ಸಹಸ್ರ ಲಿಂಗಗಳಿಗೆ ಪೂಜೆ ಸಲ್ಲಿಸಿದರು.

ಮುಂಜಾನೆ 4 ಗಂಟೆಯಿಂದಲೇ ದೇವಸ್ಥಾನಕ್ಕೆ ಕುಟುಂಬದೊಂದಿಗೆ ತೆರಳಿ, ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು.

ಓಂ ನಮಃ ಶಿವಾಯ ಎಂದು ಸ್ಮರಿಸುತ್ತ, ಭಜನೆ, ಭಕ್ತಿಗೀತೆಗಳು ಎಲ್ಲೆಡೆ ಕೇಳಿ ಬರುತ್ತಿತ್ತು. ಸಂಜೆ ಭಕ್ತರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿವಮೊಗ್ಗ–ತೀರ್ಥಹಳ್ಳಿ ಸಂಚಾರಕ್ಕೆ ಬದಲಿ ರಸ್ತೆ ವ್ಯವಸ್ಥೆ ಮಾಡಲಾಗಿತ್ತು. ವೈದ್ಯ ಡಾ. ಧನಂಜಯ್ ಸರ್ಜಿ ಅವರು ಸರ್ಜಿ ಫೌಂಡೇಶನ್‌ನಿಂದ ಭಕ್ತರಿಗೆ ರುದ್ರಾಕ್ಷಿ ಮಣಿ ವಿತರಿಸಿದರು.

ಬಿ.ಎಚ್. ರಸ್ತೆಯ ಮೈಲಾರೇಶ್ವರ, ಕೋಟೆ ರಸ್ತೆಯ ಭೀಮೇಶ್ವರ, ಮಲವಗೊಪ್ಪದ ಚನ್ನಬಸವೇಶ್ವರ, ಶರಾವತಿ ನಗರದ ಕಾಲಭೈರವೇಶ್ವರ, ಹೊಳೆಹೊನ್ನೂರು ರಸ್ತೆಯ ಅರಕೇಶ್ವರಸ್ವಾಮಿ, ಗಾಂಧಿಬಜಾರ್‌ನ ಬಸವೇಶ್ವರಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧ ಶಿವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.

ಭವಾನಿ ಶಂಕರ ದೇವಾಲಯದಲ್ಲಿ ವಿವಿಧ ಪೂಜೆ ನಡೆದವು. ಬಸವನಗುಡಿ ಶ್ರೀಶೈಲಮಲ್ಲಿಕಾರ್ಜುನಸ್ವಾಮಿ ಮತ್ತು ಬಸವೇಶ್ವರಸ್ವಾಮಿಗೆ ರುದ್ರಾಭಿಷೇಕ ನೆರವೇರಿತು. ಜಾಗರಣೆ ಅಂಗವಾಗಿ ದೇವಾಲಯಗಳಲ್ಲಿ ಭಕ್ತಿಗೀತೆ, ಸಂಗೀತ, ಹರಿಕಥೆ, ಭಜನೆ, ಗಾಯನ ಕಾರ್ಯಕ್ರಮ ನಡೆಯಿತು.

ವಿನೋಬನಗರ ಶಿವಾಲಯದಲ್ಲಿ 5ಸಾವಿರದಿಂದ 6 ಸಾವಿರ ಭಕ್ತರು ದರ್ಶನ ಪಡೆದಿದ್ದಾರೆ. ಸೇವಾ ಸಮಿತಿ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್ 1 ಲಕ್ಷ ರುದ್ರಾಕ್ಷಿ ಮಣಿ ನೀಡಿದ್ದಾರೆ.

–ಮಹೇಶ್ ಮೂರ್ತಿ, ವಿನೋಬನಗರ ವೀರಶೈವ ಸೇವಾ ಸಮಿತಿ ಸಹ ಕಾರ್ಯದರ್ಶಿ

ಶಿವರಾತ್ರಿ ಹಬ್ಬ ಹೊಸ ಹುರುಪು ನೀಡಿದೆ. ಆತ್ಮೀಯತೆಯಿಂದ ಎಲ್ಲರೂ ಕೂಡಿ, ತಮ್ಮ ನೋವನ್ನು ಶಿವನ ಪಾದಕ್ಕೆ ಅರ್ಪಿಸಿ ಶಿವರಾತ್ರಿ ಆಚರಿಸುತ್ತಿದ್ದಾರೆ.

–ಯುವರಾಜ್ ಎನ್., ಶಿವಮೊಗ್ಗ

ತುಂಬಾ ಸಂತೋಷವಾಗಿದೆ. ಮಹಿಳೆಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ರೀತಿಯ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಶಿವರಾತ್ರಿ ಹಬ್ಬದ ಮೆರುಗನ್ನು ಹೆಚ್ಚಿಸಬೇಕು.

–ಸರೋಜಮ್ಮ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.