ADVERTISEMENT

ಗುರು ಪರಂಪರೆ ಯಾವುದೇ ಜಾತಿ- ಧರ್ಮಕ್ಕೆ ಸೀಮಿತವಲ್ಲ: ಸಿದ್ಧವೃಷಬೇಂದ್ರ ಸ್ವಾಮೀಜಿ

ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಿದ್ಧವೃಷಬೇಂದ್ರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 7:39 IST
Last Updated 4 ನವೆಂಬರ್ 2025, 7:39 IST
ಸೊರಬ ತಾಲ್ಲೂಕಿನ ಜಡೆ ಮಹಾಸಂಸ್ಥಾನಮಠದಲ್ಲಿ ಕುಮಾರಪ್ರಭು ಸ್ವಾಮೀಜಿ, ಹುಬ್ಬಳಿ ಬಸಪ್ಪಶೆಟ್ಟರ ಪುಣ್ಯಸ್ಮರಣೋತ್ಸವ ಹಾಗೂ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.
ಸೊರಬ ತಾಲ್ಲೂಕಿನ ಜಡೆ ಮಹಾಸಂಸ್ಥಾನಮಠದಲ್ಲಿ ಕುಮಾರಪ್ರಭು ಸ್ವಾಮೀಜಿ, ಹುಬ್ಬಳಿ ಬಸಪ್ಪಶೆಟ್ಟರ ಪುಣ್ಯಸ್ಮರಣೋತ್ಸವ ಹಾಗೂ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.   

ಸೊರಬ: ‘ಗುರು ಪರಂಪರೆ ಯಾವುದೇ ಜಾತಿ, ಧರ್ಮ ಹಾಗೂ ವರ್ಗಕ್ಕೆ ಸೀಮಿತವಾಗಿರದೆ ಪ್ರತಿಯೊಬ್ಬರನ್ನೂ ಒಗ್ಗೂಡಿಸಿ ಉತ್ತಮ ಬೋಧನೆ ನೀಡುವ ಮೂಲಕ‌ ತಮ್ಮೆ ಶ್ರೇಷ್ಠತೆಯನ್ನು ಮೆರೆಯಬೇಕು’ ಎಂದು ಜಡೆ ಮಹಾಸಂಸ್ಥಾನ ಮಠದ ಕುಮಾರ ಕೆಂಪಿನ ಸಿದ್ಧವೃಷಬೇಂದ್ರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಜಡೆ ಮುರುಘಾ ಮಹಾಸಂಸ್ಥಾನ ಮಠದ ಆವರಣದಲ್ಲಿ ಯುವ ವೇದಿಕೆ ಸಂಸ್ಥಾನಮಠ, ಸಾರ್ವಜನಿಕ ಸದ್ಭಕ್ತ‌ ಮಂಡಳಿ, ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ, ಅಖಿಲ ಭಾರತ ಶರಣ ಸಾಹಿತ್ಯ ಪತಿಷತ್ ಹಾಗೂ ಜಡೆ ಗ್ರಾಮಸ್ಥರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕುಮಾರಪ್ರಭು ಸ್ವಾಮೀಜಿ, ಹುಬ್ಬಳಿ ಬಸಪ್ಪಶೆಟ್ಟರ ಪುಣ್ಯಸ್ಮರಣೋತ್ಸವ ಹಾಗೂ 70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಸಮಾಜಕ್ಕಾಗಿ, ಭಕ್ತರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಠದ ಗುರುಗಳನ್ನು ನೆನೆದರೆ ಮುಕ್ತಿ ಪ್ರಾಪ್ತಿಯಾಗಲಿದೆ. ಅದರಂತೆ ಪುಣ್ಯ ಸ್ಮರಣೋತ್ಸವ ಆಚರಣೆ ನಡೆಸಿ ಧನ್ಯತೆ ಮೆರೆಯಬೇಕಿದೆ. ಮಠದಲ್ಲಿನ ಪುರಾಣ ಪ್ರವಚನಗಳು ಭಕ್ತಿಯನ್ನು ಹೆಚ್ಚಿಸುವ ಮೂಲಕ ಸಮಾಜವನ್ನು ಬದಲಾವಣೆಯ ಕಡೆಗೆ ಸಾಗಿಸುತ್ತವೆ. ಅದರಂತೆ ಮಠಗಳು ಯಾವುದೇ ಜಾತಿಗೆ ಸೀಮಿತವಾಗಿರದೆ ಜ್ಯಾತ್ಯತೀತತೆಯ ಮಠಗಳಾಗಿ ಪರಿವರ್ತನೆ ಆಗಬೇಕು. ಲಿಂಗಪೂಜಾ ನಿಷ್ಠರಾದ ಕುಮಾರಪ್ರಭು ಸ್ವಾಮೀಜಿ, ಲಿಂಗೈಕ್ಯರಾಗಿದ್ದರು ಕೂಡ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮಹಾಸಂಸ್ಥಾನ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು, ಶ್ರೀಗಳು‌ ಹಾಕಿಕೊಟ್ಟ‌ ಭದ್ರ ಬುನಾದಿಯೇ ಕಾರಣ’ ಎಂದರು.

ADVERTISEMENT

‘ಭಾರತ ಶ್ರೇಷ್ಠ ಸ್ಥಾನಮಾನ ಹೊಂದಿದ ದೇಶ. ಅದೆಷ್ಟೋ ಗುರು ಪರಂಪರೆಯನ್ನು ನೀಡಿದ ದೇಶ. ಸದೃಢ ದೇಶ ಕಟ್ಟಲು ಅನೇಕ ಮಠ– ಮಾನ್ಯಗಳು ಅವುಗಳದ್ದೇ ಆದ‌ ಅಪಾರ ಕೊಡುಗೆಗಳನ್ನು ನೀಡಿವೆ. ಅಂತಹ ಮಹಾತ್ಮರನ್ನು ನೆನೆದು ಪೂಜಿಸಿದರೆ ಕಷ್ಟ ಕಾರ್ಪಣ್ಯಗಳು ದೂರವಾಗಲಿವೆ. ಹೊನ್ನು, ಹೆಣ್ಣು ಹಾಗೂ ಮಣ್ಣಿನ‌ ಮೇಲಿನ ದುರಾಸೆ ತೊರೆದು ಉತ್ತಮ ನಾಡು ಕಟ್ಟುವಲ್ಲಿ ಶ್ರಮಿಸಬೇಕಿದೆ.‌ ಆಗ‌ ಮಾತ್ರ ಸಮಾಜದಲ್ಲಿ ಜನಮಾನಸದಲ್ಲಿ ಉಳಿಯಲು ಸಾಧ್ಯ’ ಎಂದು ಹೇಳಿದರು.

ಕುಮಾರಪ್ರಭು ಸ್ವಾಮೀಜಿ ಹಾಗೂ ಹುಬ್ಬಳ್ಳಿ ಬಸವಪ್ಪನವರ ಹಾಗೂ ಭುವನೇಶ್ವರಿಯ ಭಾವಚಿತ್ರಗಳ ರಾಜಬೀದಿ ಉತ್ಸವ ಸಕಲ ವಾದ್ಯ ವೈಭವ ಮತ್ತು ಜಾನಪದ ಕಲಾಮೇಳಗಳೊಂದಿಗೆ ನಡೆಯಿತು. ಸಂಜೆ ಸಿದ್ಧವೃಷಬೇಂದ್ರ ಸ್ವಾಮೀಜಿ ಹಾಗೂ ಕುಮಾರಪ್ರಭು ಸ್ವಾಮೀಜಿ ಅವರು ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಜಂಗಮ‌ಪಾದಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗಿಸಲಾಯಿತು.

ಮದಾಪುರ ಮಲ್ಲಿಕಾರ್ಜುನ‌ ಮಠದ ಮೌನ ಮಲ್ಲನಾಥ ಸ್ವಾಮೀಜಿ, ಜಡೆ ಮಹಾಸಂಸ್ಥಾನ‌ ಮಠದ ಮಹಾಂತ ಸ್ವಾಮೀಜಿ, ದುಂಡಸಿ ವಿತಕ್ತ ಮಠದ ಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಬಲೂರು‌ ಮಠದ ಗಂಗಾಧರ ದೇವರು, ಶಿಕ್ಷಕ ಅಶೋಕ್, ಜಯಶೀಲ ಗೌಡ, ಪ್ರಕಾಶ್ ಶೆಟ್ಟಿ, ಬಸವರಾಜ್, ಮಂಜುನಾಥ, ರೇವಣಪ್ಪ, ಶಿವಮೂರ್ತಿ ಬಂಕಸಾಣ ಇತತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.