ADVERTISEMENT

ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರ ಸಹೋದರನಿಂದ ಹಲ್ಲೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 16:40 IST
Last Updated 16 ಅಕ್ಟೋಬರ್ 2020, 16:40 IST
ಹಲ್ಲೆ ನಡೆಸುತ್ತಿರುವ ದೃಶ್ಯ
ಹಲ್ಲೆ ನಡೆಸುತ್ತಿರುವ ದೃಶ್ಯ   

ಸಾಗರ: ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶೇಷಗಿರಿ ಭಟ್ ಅವರ ಸಹೋದರ ಸುಬ್ರಾಯ ಭಟ್ ಸ್ಥಳೀಯರೊಬ್ಬರ ಮೇಲೆ ಶುಕ್ರವಾರ ಹಲ್ಲೆ ನಡೆಸಿದ್ದಾರೆ.

ಕೆಲವು ತಿಂಗಳಿನಿಂದ ದೇವಸ್ಥಾನದ ಧರ್ಮದರ್ಶಿ ರಾಮಪ್ಪ ಹಾಗೂ ಅರ್ಚಕ ಶೇಷಗಿರಿ ಭಟ್ ಮಧ್ಯೆ ಆಂತರಿಕ ಕಲಹ ನಡೆಯುತ್ತಿದೆ. ಶುಕ್ರವಾರ ದೇವಸ್ಥಾನದ ಆವರಣದಲ್ಲಿ ಚಂಡಿಕಾ ಹೋಮ ನಡೆಸಲು ಆಡಳಿತ ಮಂಡಳಿ ಅವಕಾಶ ನೀಡಲಿಲ್ಲ ಎಂದು ಅರ್ಚಕರ ಕುಟುಂಬ ಮೌನ ವ್ರತ ಕೈಗೊಂಡಿತ್ತು.

ದೇವಸ್ಥಾನದ ಸಮೀಪ ಸಣ್ಣ ಹೋಟೆಲ್ ನಡೆಸುತ್ತಿರುವ ದ್ಯಾವಪ್ಪ ಗೌಡರು ಮಧ್ಯಾಹ್ನ 12.30ರ ವೇಳೆಗೆ ಪೂಜೆಗೆ ಬಂದಿದ್ದಾರೆ. ಆಗ ಶೇಷಗಿರಿ ಭಟ್ ಹಾಗೂ ದ್ಯಾವಪ್ಪ ಗೌಡರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದೇ ಹೊತ್ತಿಗೆ ಸುಬ್ರಾಯ ಭಟ್ ಅವರು ಮೈಮೇಲೆ ದೇವಿ ಬಂದಂತೆ ವರ್ತಿಸುತ್ತ ದ್ಯಾವಪ್ಪ ಗೌಡ, ದೇವಸ್ಥಾನದ ಸಿಬ್ಬಂದಿ ಮಹೇಶ್‌, ವಿಮಲಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ದೇವಸ್ಥಾನದ ಕಚೇರಿ ಕಿಟಕಿ ಗಾಜು ಒಡೆದಿದ್ದಾರೆ.

ADVERTISEMENT

ಈ ಎಲ್ಲಾ ಘಟನೆ ಪೊಲೀಸರ ಎದುರೇ ನಡೆದಿದ್ದು, ಪೊಲೀಸರು ಹಲ್ಲೆ ತಪ್ಪಿಸುವ ಬದಲು ಘಟನೆಯ ವೀಡಿಯೊ ಚಿತ್ರೀಕರಣ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅಂಗವಿಕಲರಾಗಿರುವ ದ್ಯಾವಪ್ಪ ಗೌಡ ಅವರು ಚಿಕಿತ್ಸೆಗಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯಿಂದ ಮಾನಸಿಕವಾಗಿ ಆಘಾತಕ್ಕೆ ಒಳಗಾಗಿ ಕುಸಿದುಬಿದ್ದ ದೇವಸ್ಥಾನದ ಸಿಬ್ಬಂದಿ ವಿಮಲಾ ಅವರಿಗೆ ತುಮರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಸಂಜೆಯವರೆಗೂ ಯಾವುದೇ ದೂರು ದಾಖಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.