ADVERTISEMENT

ತುಮರಿ | ಶಿಥಿಲಾವಸ್ಥೆಯತ್ತ ಸಿಗಂದೂರು ಲಾಂಚ್

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 6:44 IST
Last Updated 29 ಡಿಸೆಂಬರ್ 2025, 6:44 IST
ಜನಪರ ಸಂಚಾರ ಇಲ್ಲದೆ ಶಿಥಿಲಾವಸ್ಥೆಯತ್ತ ಸಾಗಿದ ಸಿಗಂದೂರು ಲಾಂಚ್ ಜಾವಾಣಿ ಚಿತ್ರ: ಸುಕುಮಾರ್ ಎಂ
ಜನಪರ ಸಂಚಾರ ಇಲ್ಲದೆ ಶಿಥಿಲಾವಸ್ಥೆಯತ್ತ ಸಾಗಿದ ಸಿಗಂದೂರು ಲಾಂಚ್ ಜಾವಾಣಿ ಚಿತ್ರ: ಸುಕುಮಾರ್ ಎಂ   

ತುಮರಿ: ಆರು ದಶಕಗಳ ಕನಸಾಗಿದ್ದ ‘ಸಿಗಂದೂರು ಚೌಡೇಶ್ವರಿ’ ಸೇತುವೆ ಲೋಕಾರ್ಪಣೆಗೂ ಮೊದಲು ಶರಾವತಿ ಹಿನ್ನೀರಿನ ದ್ವೀಪ ಭಾಗಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ಲಾಂಚ್‌ಗಳು ಈಗ ಶಿಥಿಲಾವಸ್ಥೆಯತ್ತ ತಲುಪುತ್ತಿವೆ.

ಸಾಗರ ತಾಲ್ಲೂಕಿನ ಅಂಬಾರಗೋಡ್ಲು, ಕಳಸವಳ್ಳಿ ಕಡವು ಮಾರ್ಗದಲ್ಲಿ ಒಟ್ಟು 4 ಲಾಂಚ್‌ಗಳ ಪೈಕಿ 1 ಲಾಂಚ್ ಸೇತುವೆ ನಿರ್ಮಾಣ ಕೆಂಪನಿಗೆ ಹಸ್ತಾಂತರ ಮಾಡಲಾಗಿದೆ. ಆದರೆ ಸೇತುವೆ ಲೋಕಾರ್ಪಣೆ ನಂತರ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಉಳಿದ ಮೂರು ಲಾಂಚ್ ಸೇವೆಯನ್ನು ಜುಲೈ 15ರಿಂದ ಸ್ಥಗಿತ ಗೊಳಿಸಿದೆ.

ರಾಜ್ಯ ಸರ್ಕಾರವು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಜನರಿಗೆ ಸೇವೆ ಒದಗಿಸಲು ನೀಡಿದ ಲಾಂಚ್ ಈಗ ತೆರೆ ಮರೆಗೆ ಸರಿದಿದೆ. ನಿತ್ಯ ಜನ ಜಂಗುಳಿಯಿಂದ ಕೊಡಿರುತ್ತಿದ್ದ ಅಂಬಾರಗೊಡ್ಲು, ಕಳಸವಳ್ಳಿ ಕಡವು ನಿಲ್ದಾಣಗಳು ಈಗ ಪಾಳು ಕೊಂಪೆಯಾಗಿವೆ. ಸೇತುವೆ ವೀಕ್ಷಣೆಗೆ ಬರುವ ಪ್ರವಾಸಿಗರು ಲಾಂಚ್ ಸ್ಥಿತಿಯನ್ನು ಕಂಡು ಮರುಕ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

5 ತಿಂಗಳಿಂದ ಒಂದೇ ಪ್ರದೇಶದಲ್ಲಿ ಲಾಂಚ್ ನಿಂತಿರುವುದನ್ನು ನೋಡಿದರೆ, ಎಷ್ಟರ ಮಟ್ಟಿಗೆ ಸುಸ್ಥಿಯಲ್ಲಿ ಇದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಈಗಾಗಲೇ ಲಾಂಚಿನ ಹಲವು ಭಾಗಗಳು ಕಂದು ಮಿಶ್ರಿತ ಬಣ್ಣಕ್ಕೆ ತಿರುಗಿದ್ದು, ತುಕ್ಕು ಹಿಡಿದಿದೆ. ಮುಂದಿನ 2 ತಿಂಗಳೊಳಗೆ ಲಾಂಚ್ ಜನರ ಬಳಕೆಗೆ ಬಾರದೆ ಇದ್ದರೆ ಸಂಪೂರ್ಣ ಹಾಳಾಗಲಿದೆ ಎಂದು ಹೆಸರು ಹೇಳಲು ಇಚ್ಚಿಸದ ಜಲ ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಲಾಂಚ್ ಸೇವೆಯನ್ನು ಪುನರಾರಂಭ ಮಾಡಬೇಕು ಎನ್ನುವುದು ಬಹುತೇಕ ಸ್ಥಳಿಯರ ಆಗ್ರಹವೂ ಆಗಿದೆ. ಸಮೀಪದಲ್ಲೇ ಇರುವ ಮುಪ್ಪಾನೆ ಪ್ರಕೃತಿ ಶಿಬಿರ ಬಳಸಿಕೊಂಡು ಶರಾವತಿ ಜಲಾನಯನ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕು, ಈ ಮೂಲಕ ಈ ಭಾಗದ ನಿರುದ್ಯೋಗಿ ಯುವಕರಿಗೆ ಸರ್ಕಾರ ನೆರವಾಗಬೇಕು ಎಂಬುದು ಈ ಭಾಗದ ಜನರ ಒತ್ತಾಸೆಯಾಗಿದೆ.

ಪ್ರವಾಸೋದ್ಯಮಕ್ಕೆ ಸಿಗದ ಉತ್ತೇಜನ:

ತಾಲ್ಲೂಕಿಗೆ ಬರುವ ಪ್ರವಾಸಿಗರ ಸಂಖ್ಯೆ ಏರಿಯಾಗಿದ್ದರೂ ಪ್ರವಾಸೋದ್ಯಮವನ್ನೇ ನಂಬಿದ್ಧವರ ಆರ್ಥಿಕ ವಹಿವಾಟು ಕುಸಿತವಾಗಿದೆ. ಕಾರಣ ಸಿಗಂದೂರು ಲಾಂಚ್ ಸೇವೆ ಸ್ಥಗಿತದಿಂದ ಟ್ಯಾಕ್ಸಿ, ಜೀಪ್ ಮಾಲೀಕರಿಗೆ ಮರ್ಮಾಘಾತ ನೀಡಿದೆ. 

ಜನರಿಲ್ಲದೇ ಬಿಕೋ ಎನ್ನುತ್ತಿರುವ ಅಂಬಾರಗೊಡ್ಲು ಕಡವು ನಿಲ್ದಾಣದ ಪ್ರದೇಶ

ಸೇತುವೆ ಉದ್ಘಾಟನೆ ಬಳಿಕ ಲಾಂಚ್ ಸ್ಥಗಿತ ಬೇರೇಡೆ ಸ್ಥಳಾಂತರ ಮಾಡದ ಜಲ ಸಾರಿಗೆ ಇಲಾಖೆ ಪ್ರವಾಸೋದ್ಯಮ ಬಳಕೆಗೂ ಸಿಗದ ಲಾಂಚ್

ಸೇತುವೆ ಲೋಕಾರ್ಪಣೆ ನಂತರ ಲಾಂಚ್ ಸೇವೆ ಸ್ಥಗಿತಗೊಳಿಸಿದ್ದೇವೆ. ಲಾಂಚ್ ಸುಸ್ಥಿಯಲ್ಲಿಡಲು ಪ್ರತಿ 2 ದಿನಕ್ಕೊಮ್ಮೆ ಪರಿಶೀಲನೆ ನೆಡೆಸಲಾಗುತ್ತಿದೆ. ಲಾಂಚ್ ಪ್ರವಾಸೋದ್ಯಮಕ್ಕೆ ಬಳಸುವ ಬಗ್ಗೆ ಈವರೆಗೂ ಇಲಾಖೆಯಿಂದ ಯಾವುದೇ ನಿರ್ದೇಶನ ಬಂದಿಲ್ಲ.
ದಾಮೋದರ ನಾಯಕ ಸಹಾಯಕ ಕಡವು ನಿರೀಕ್ಷಕ

ಕುಂದಾಪುರಕ್ಕೆ ಲಾಂಚ್ ಬೇಡಿಕೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ–ಕುಂದಾಪುರ ನಡುವೆ ಹರಿಯುತ್ತಿರುವ ಪಂಚಗಂಗಾವಳಿ ನದಿಯ ಗಂಗೊಳ್ಳಿಯಿಂದ ಕೋಡಿ ಹಾಗೂ ಕುಂದಾಪುರಕ್ಕೆ ಪ್ರಯಾಣಿಸಲು ಸಿಗಂದೂರು ಲಾಂಚ್ ನೀಡಬೇಕು ಎಂಬ ಕೂಗು ಸಹ ಕೇಳಿ ಬಂದಿತ್ತು. ಆದರೆ ಭಾರಿ ಗಾತ್ರ ತೂಕ ಹೊಂದಿರುವ ಲಾಂಚ್ ಸ್ಥಳಾಂತರ ಸಾಧ್ಯವಿಲ್ಲ ಎನ್ನುತ್ತಾರೆ ಕರ್ನಾಟಕ ಜಲ ಸಾರಿಗೆ ಮಂಡಳಿಯ ಹಿರಿಯ ಅಧಿಕಾರಿಗಳು.

ಸ್ಥಳಾಂತರವೇ ಕಠಿಣ ಹಸಿರು ಮಕ್ಕಿ ಕಡವು ಮಾರ್ಗದಲ್ಲಿ ಈಗಾಗಲೇ ಒಂದು ಲಾಂಚ್ ಸೇವೆ ನೀಡುತ್ತಿದೆ. ಹಸಿರು ಮಕ್ಕಿ ಸೇತುವೆ ಕಾಮಗಾರಿಯೂ ಸಂಚಾರಕ್ಕೆ ಮುಕ್ತವಾದರೇ ಇಲ್ಲಿನ ಲಾಂಚ್ ಸಹ ನಿರುಪಯುಕ್ತವಾಗಲಿದೆ. ಅಲ್ಲದೇ ಮುಪ್ಪಾನೆ ಕಡವು ಮಾರ್ಗದಲ್ಲಿ ಬೃಹತ್ ಲಾಂಚ್ ನಿರ್ವಹಣೆ ಸಾಧ್ಯವಿಲ್ಲದೇ ಇರುವುದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಲಾಂಚ್ ತುಕ್ಕು ಹಿಡಿಯುವುದು ನಿಶ್ಚಿತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.