ADVERTISEMENT

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಹೆಸರಿನಲ್ಲಿ ನಿವೇಶನ ಕೋರಿಕೆ

ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ

​ಪ್ರಜಾವಾಣಿ ವಾರ್ತೆ
Published 27 ಜುಲೈ 2022, 3:06 IST
Last Updated 27 ಜುಲೈ 2022, 3:06 IST

ಶಿವಮೊಗ್ಗ: ನಗರದ ಆಲ್ಕೊಳದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಹೆಸರಿಗೆ ಎರಡು ಎಕರೆ ಜಮೀನನ್ನು ಮಂಜೂರು ಮಾಡುವಂತೆ ಕೋರಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್ ಬರೆದ ಮನವಿ ಪತ್ರದ ಪ್ರತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಜಕೀಯ ಕ್ಷೇತ್ರದ ಅಧ್ಯಯನ, ಸಂಶೋಧನೆ ಮತ್ತು ತರಬೇತಿ ಕೇಂದ್ರ ಸ್ಥಾಪನೆಗೆ ಶಿವಮೊಗ್ಗದ ಆಲ್ಕೊಳದ ಹತ್ತಿರ ಕರ್ನಾಟಕ ನೀರಾವರಿ ನಿಗಮವು ಮಂಜೂರು ಮಾಡಿರುವ 2 ಎಕರೆ ಜಾಗವನ್ನು ಪಕ್ಷದ ಜಿಲ್ಲಾ ಕಚೇರಿಯ ಕಟ್ಟಡ ನಿರ್ಮಾಣಕ್ಕೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಹೆಸರಿಗೆ ನೋಂದಣಿ ಮಾಡಬೇಕು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ.

ನಗರದ ಸಾಗರ ರಸ್ತೆಗೆ ಅಭಿಮುಖವಾಗಿರುವ ಆಲ್ಕೊಳದ ಸರ್ವೆ ನಂಬರ್‌ 36 ಮತ್ತು 37ರಲ್ಲಿ ರಾಜ್ಯ ಸರ್ಕಾರ ಎರಡು ಎಕರೆ ಜಾಗವನ್ನು ಅಧ್ಯಯನ, ಸಂಶೋಧನೆ ಮತ್ತು ಪ್ರಶಿಕ್ಷಣ ಕೇಂದ್ರಕ್ಕೆ ಮಂಜೂರು ಮಾಡಿದೆ. ಆದರೆ, ಈ ಜಾಗವನ್ನು ರಾಷ್ಟ್ರೀಯ ಅಧ್ಯಕ್ಷರು, ಭಾರತೀಯ ಜನತಾ ಪಕ್ಷ ಈ ಹೆಸರಿಗೆ ಮಂಜೂರು ಮಾಡಬೇಕು ಎಂದು ಮೇ ತಿಂಗಳಲ್ಲಿ ಪತ್ರ ಬರೆಯಲಾಗಿದೆ.

ADVERTISEMENT

ಈ ಮನವಿಯ‌ ಮೇರೆಗೆ, ನಿಗಮದ 98ನೇ ಸಭೆಯಲ್ಲಿ 30 ವರ್ಷದ ಗುತ್ತಿಗೆಗೆ ಲೋಕೋಪಯೋಗಿ ಇಲಾಖೆ ನಿಗದಿಪಡಿಸುವ ದರದಂತೆ ಅನುಮೋದನೆ ನೀಡಲಾಗಿದೆ.

ನಿಯಮದಡಿ ಜಾಗ ಕೇಳಿದ್ದೇವೆ: ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿರುವ ಟಿ.ಡಿ. ಮೇಘರಾಜ್, ‘ಜಿಲ್ಲೆಯಲ್ಲಿ ಪಕ್ಷದ ಚಟುವಟಿಕೆಗಾಗಿ ಕಚೇರಿ ನಿರ್ಮಾಣಕ್ಕೆ ಜಾಗ ಕೇಳಿರುವುದು ನಿಜ’ ಎಂದು ಸ್ಪಷ್ಟಪಡಿಸಿದ್ದಾರೆ.

ಟ್ರಸ್ಟ್ ಮೂಲಕ ಜಾಗ ಕೇಳುವ ಪರಿಪಾಠ ಬಿಜೆಪಿಯಲ್ಲಿ ಇಲ್ಲ. ಕಾನೂನು ಬದ್ಧವಾಗಿರಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಹೆಸರಿನಲ್ಲಿ ಪಕ್ಷದ ಕಾರ್ಯಾಲಯಕ್ಕೆ ಜಾಗ ಕೇಳುವ ನಿಯಮವನ್ನು ಪಕ್ಷ ಅಳವಡಿಸಿಕೊಂಡಿದೆ. ಅದರಂತೆ, ಕಾನೂನು ಬದ್ಧವಾಗಿ ದರ ನಿಗದಿ ಮಾಡಿ ಇಲಾಖೆಯಿಂದ ನಿವೇಶನದ ಮಂಜೂರಾತಿ ಕೋರಲಾಗಿದೆ ಎಂದಿದ್ದಾರೆ.

ಇದೇ ರೀತಿ ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷ ಹೊಸದಾಗಿ ಕಚೇರಿಗಾಗಿ ಜಾಗ ಪಡೆದು ಕಚೇರಿ ಆರಂಭಿಸಿದೆ. ಬೆಳಗಾವಿಯಲ್ಲಿ ಮಹಾನಗರ ಪಾಲಿಕೆಯಿಂದ ಕಾಂಗ್ರೆಸ್ ಪಕ್ಷವೂ ನಿವೇಶನ ಪಡೆದಿದೆ. ಇದರಲ್ಲಿ ರಾಜಕೀಯ ಏನಿಲ್ಲ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.