ADVERTISEMENT

ಶಿವಮೊಗ್ಗ | ಸ್ಮಾರ್ಟ್ ಸಿಟಿ ಕಾಮಗಾರಿ ತೃಪ್ತಿ ತಂದಿದೆ: ಕೆ.ಎಸ್‌ ಈಶ್ವರಪ್ಪ

ದೂರುಗಳಿದ್ದರೆ ಸಾರ್ವಜನಿಕ ಸಂಪರ್ಕಾಧಿಕಾರಿಗೆ ಕರೆ ಮಾಡಿ: ಈಶ್ವರಪ್ಪ ಮನವಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 5:16 IST
Last Updated 22 ನವೆಂಬರ್ 2022, 5:16 IST
ಕೆ.ಎಸ್‌.ಈಶ್ವರಪ್ಪ
ಕೆ.ಎಸ್‌.ಈಶ್ವರಪ್ಪ   

ಶಿವಮೊಗ್ಗ: ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರದಲ್ಲಿ ₹414.42 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಂಡಿರುವ 51 ಕಾಮಗಾರಿಗಳು ಪೂರ್ಣಗೊಂಡಿವೆ. ಕಾಮಗಾರಿಯ ಗುಣಮಟ್ಟ ನನಗೆ ತೃಪ್ತಿ ತಂದಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾಮಗಾರಿಗಳ ಬಗ್ಗೆ ಸಾರ್ವಜನಿಕರಿಗೆ ಏನಾದರೂ ಆಕ್ಷೇಪ, ಗೊಂದಲಗಳು ಇದ್ದರೆ ಸ್ಮಾರ್ಟ್ ಸಿಟಿ ಯೋಜನೆ ಸಾರ್ವಜನಿಕ ಸಂಪರ್ಕಾಧಿಕಾರಿ ಬ್ರಿಜಿಟ್ ವರ್ಗೀಸ್ (ಮೊಬೈಲ್ ಸಂಖ್ಯೆ: 9480022672) ಅವರಿಗೆ ಕರೆ ಮಾಡಿ ದೂರು ಸಲ್ಲಿಸುವಂತೆ ತಿಳಿಸಿದರು.

‘ದೂರು ನೀಡಿದವರು ಏನಾದರೂ ಸಮಸ್ಯೆಗಳ ಬಗ್ಗೆ ಗಮನ ಸೆಳೆದಲ್ಲಿ ಅವರು ತಕ್ಷಣ ಸ್ಪಂದಿಸಿ ಪರಿಹರಿಸಲಿದ್ದಾರೆ ಎಂದು ಹೇಳಿದ ಈಶ್ವರಪ್ಪ, ತಿಂಗಳು ಬಿಟ್ಟು ಸ್ಮಾರ್ಟ್‌ ಸಿಟಿ ಕಾಮಗಾರಿಗಳ ಸ್ಥಳ ಪರಿಶೀಲನೆ ಮತ್ತೊಮ್ಮೆ ಮಾಡುವೆ’ ಎಂದರು.

ADVERTISEMENT

ನಗರದ ಆರು ವಾರ್ಡ್‌ಗಳ ವ್ಯಾಪ್ತಿಯಲ್ಲಿ ಪೂರ್ಣ ಹಾಗೂ 9 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಭಾಗಶಃ ಅಭಿವೃದ್ಧಿ ಕೈಗೊಳ್ಳಲು ಕೇಂದ್ರ ಹಾಗೂ ರಾಜ್ಯದಿಂದ ₹1 ಸಾವಿರ ಕೋಟಿ ಬಂದಿದೆ. ರಸ್ತೆ, ಕನ್ಸರ್ವೆನ್ಸಿ, ಪಾರ್ಕ್‌ಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಕಾಮಗಾರಿಗಳಲ್ಲಿ ಏನಾದರೂ ಲೋಪಗಳು ಕಂಡುಬಂದರೆ ಮಾಧ್ಯಮದವರು ನನ್ನ ಗಮನಕ್ಕೆ ತರಬಹುದು ಎಂದು ಈಶ್ವರಪ್ಪ ತಿಳಿಸಿದರು.

ಪ್ರಹ್ಲಾದ ಶೆಟ್ಟಿ ರಸ್ತೆಯಲ್ಲಿ ಮಳೆಯಿಂದ ರಸ್ತೆ ಹಾನಿಗೀಡಾಗಿತ್ತು. ಅದನ್ನು ಸರಿಪಡಿಸಲಾಗಿದೆ. ಕಳಪೆ ಕಾಮಗಾರಿ ಆಗಿದ್ದರೆ ವೃಥಾ ಪತ್ರಿಕಾ ಹೇಳಿಕೆ ನೀಡುವ ಬದಲು ಗಮನಕ್ಕೆ ತನ್ನಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.

ಸ್ಮಾರ್ಟ್‌ಸಿಟಿ ಅಡಿ ನಗರದಲ್ಲಿ ಇನ್ನೂ 21 ಕಾಮಗಾರಿ ಪ್ರಗತಿಯಲ್ಲಿವೆ. ಎಂಟು ರಸ್ತೆಗಳ ಅಭಿವೃದ್ಧಿ ಕೈಗೆತ್ತಿಕೊಂಡಿದ್ದು, ಅದರಲ್ಲಿ ಐದು ಪೂರ್ಣಗೊಂಡಿವೆ. ಹಸಿರೀಕರಣ ಅಡಿಯಲ್ಲಿ 14 ಪಾರ್ಕ್‌ಗಳಲ್ಲಿ 12 ಪೂರ್ಣಗೊಳಿಸಲಾಗಿದೆ. ಐಸಿಟಿ 6 ಕಾಮಗಾರಿಗಳಲ್ಲಿ 4 ಪೂರ್ಣಗೊಂಡಿವೆ. ಇತರೆ 35 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, 24 ಪೂರ್ಣವಾಗಿವೆ. ಮೂರು ಪಾರಂಪರಿಕ ಕಟ್ಟಡಗಳಲ್ಲಿ ಎರಡು ಕಾಮಗಾರಿ ಪೂರ್ಣವಾಗಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಎಸ್. ಶಿವಕುಮಾರ್, ಉಪಮೇಯರ್ ಲಕ್ಷ್ಮಿ ಶಂಕರನಾಯ್ಕ, ಪಾಲಿಕೆ
ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ, ಸದಸ್ಯೆ ಸುನೀತಾ ಅಣ್ಣಪ್ಪ, ಸ್ಮಾರ್ಟ್‌ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಟಾರೆ ಇದ್ದರು.

ಎಲ್ಲರೂ ಕಳ್ಳರು ಎಂದು ಭಾವಿಸಲಿದ್ದಾರೆ

‘ಚಿಲುಮೆ ಸಂಸ್ಥೆ ಮತದಾರರ ಪಟ್ಟಿಯಿಂದ ಮತದಾರರ ಹೆಸರು ತೆಗೆದುಹಾಕಿರುವುದು. ಸೇರಿಸುವುದನ್ನು ಮಾಡಿರುವುದರಿಂದ ಪ್ರಜಾಪ್ರಭುತ್ವಕ್ಕೆ ಏನೇನು ಬೆಲೆ ತರೊಲ್ಲ. ಬದಲಿಗೆ ಈ ವಿಚಾರದಲ್ಲಿ ಎಲ್ಲರೂ ಕಳ್ಳರು ಎಂದು ರಾಜ್ಯದ ಜನತೆ ಭಾವಿಸಲಿದ್ದಾರೆ’ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಆತಂಕ ವ್ಯಕ್ತಪಡಿಸಿದರು.

ಮತದಾರನಿಗೆ ಒಂದು ಮತದ ಹಕ್ಕು ಕೊಡಿಸಲು ಎಷ್ಟು ಜನ ಪ್ರಾಣ ತ್ಯಾಗ ಮಾಡಿದ್ದಾರೆ ಎಂಬುದನ್ನು ಅರಿಯಬೇಕು. ಅವರ ಬಲಿದಾನ ಮಾಡಿ ಹೀಗೆ ಮೋಸ ಮಾಡಿದರೆ ಮತಕ್ಕೆ ಬೆಲೆ ಇಲ್ಲವಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಸಿಬಳಿದಂತಾಗುತ್ತದೆ. ಆಡಳಿತ–ವಿರೋಧ ಪಕ್ಷದ ನಾಯಕರು ಆರೋಪ ಪ್ರತ್ಯಾರೋಪ ಬಿಟ್ಟು ಪಕ್ಷಾತೀತವಾಗಿ ಎಲ್ಲ ನಾಯಕರು ಒಟ್ಟಿಗೆ ಕುಳಿತು ಇದನ್ನು ಸರಿಪಡಿಸಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.