
ಶಿವಮೊಗ್ಗ: ಹಿಂದೂ ಮತ್ತು ಸಂಸ್ಕೃತಿ ಎರಡೂ ಬೇರೆಯಲ್ಲ. ಸಂಸ್ಕೃತಿ ಎಂಬುದು ಒಂದು ಉತ್ತಮ ನಡವಳಿಕೆ. ಹೀಗಾಗಿ ಹಿಂದೂ ಜೊತೆ ಸಂಸ್ಕೃತಿಯೂ ಮಿಳಿತವಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಜಂಗಮ ಹಾಗೂ ಬೇಡ ಜಂಗಮ ಸಮಾಜದ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ, ಯುಗಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಡೀ ಮನುಕುಲಕ್ಕೆ ತತ್ವ ಸಿದ್ಧಾಂತವನ್ನು ನೀಡಿ, ವಚನಗಳ ಮುಖಾಂತರ ಸಂಸ್ಕಾರವನ್ನು ಕೊಡುವಂತಹ ಕೆಲಸ ರೇಣುಕಾಚಾರ್ಯರು ಮಾಡಿದ್ದಾರೆ. ಗುರುಗಳು ಬರೀ ಮಠಕ್ಕೆ ಸೀಮಿತವಾಗದೇ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಮಾನವೀಯತೆ ಇದ್ದರೆ ಈ ಜಗತ್ತು ಚೆನ್ನಾಗಿರುತ್ತದೆ ಹಾಗೂ ಸಮಾಜದಲ್ಲಿ ಶಾಂತಿ ಕಾಪಾಡಬಹುದು. ಮನುಷ್ಯನ ಮನಸ್ಸಿನಲ್ಲಿ ಪರಿಶುದ್ಧತೆ ಕಾಪಾಡಿದರೆ ಧರ್ಮದಲ್ಲಿ ವ್ಯತ್ಯಾಸವಿರದು ಎಂದು ಹೇಳಿದರು.
ಮಹಾನ್ ವ್ಯಕ್ತಿಗಳ ಜಯಂತಿ ಒಂದು ಸಮಾಜಕ್ಕೆ ಸೀಮಿತವಾಗಿರದೇ ಎಲ್ಲಾ ಸಮಾಜದವರು ಒಗ್ಗಟ್ಟಿನಿಂದ ಆಚರಣೆ ಮಾಡಿದರೆ ಅವರ ತತ್ವಗಳು, ಸಂದೇಶಗಳು ಪ್ರತಿಯೊಬ್ಬನ್ನು ಮುಟ್ಟುತ್ತವೆ. ಜನರು ಧರ್ಮಶ್ರದ್ಧೆ ಮತ್ತು ನಿಷ್ಠೆಯಿಂದ ಸಮಾಜದಲ್ಲಿ ಇರಬೇಕು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹೇಳಿದರು.
ರೇಣುಕಾಚಾರ್ಯರು ಮಾನವ ಧರ್ಮ ಶೇಷ್ಠವಾದದ್ದು ಎಂದು ಎಂಟನೇ ಶತಮಾನದಲ್ಲಿ ಮಠಗಳನ್ನು ಸ್ಥಾಪಿಸುವ ಮೂಲಕ ಸಮಾಜಕ್ಕೆ ಸಂದೇಶ ಸಾರಿದ್ದರು. ದೇವರನ್ನು ದೇವಾಲಯಗಳಲ್ಲಿ ಹುಡುಕುವುದಕ್ಕಿಂತ ನಿಮ್ಮ ಮನಸ್ಸಿನಲ್ಲಿ ಹುಡುಕಬೇಕು ಎಂದು ಹೇಳಿದ್ದರು. ಯಾವುದೇ ತಾರತಮ್ಯವಿಲ್ಲದೆ ಸಮಾಜದ ಎಲ್ಲರನ್ನು ಸಮನಾಗಿ ಕಾಣಬೇಕು ಎಂದು ಜ್ಞಾನದೀಪ ಶಾಲೆಯ ಕನ್ನಡ ಉಪನ್ಯಾಸಕ ತುರುವನೂರು ಎಂ.ವಿ. ಮಲ್ಲಿಕಾರ್ಜುನ ಅವರು ವಿಶೇಷ ಉಪನ್ಯಾಸ ನೀಡಿದರು.
ಬಿಳಕಿ ಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಜ್ಯೋತಿ ಪ್ರಕಾಶ್, ಜಂಗಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಯ್ಯ, ಬೇಡ ಜಂಗಮ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಬಿ. ಮಲ್ಲಿಕಾರ್ಜುನಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ ಉಪಸ್ಥಿತರಿದ್ದರು.
ಶಿವಮೊಗ್ಗ ತಲುಪಿದ ಧರ್ಮ ಜಾಗೃತಿ ರಥ
ರೇಣುಕಾಚಾರ್ಯ ಜಯಂತಿ ಅಂಗವಾಗಿ ಸೊರಬ ತಾಲ್ಲೂಕಿನ ಪುಟ್ಟನಹಳ್ಳಿ ವೀರಭದ್ರೇಶ್ವರ ದೇವಸ್ಥಾನದಿಂದ ಫೆ.24ರಂದು ಹೊರಟಿದ್ದ ಧರ್ಮಜಾಗೃತಿ ರಥಯಾತ್ರೆ ಕೆರೆಕೊಪ್ಪ ಬನವಾಸಿ ಶಿರಸಿ ಯಲ್ಲಾಪುರ ದಾಂಡೇಲಿ ಹಳಿಯಾಳ ಹುಬ್ಬಳ್ಳಿ ಅಣ್ಣಿಗೇರಿ ಗದಗ ಲಕ್ಷೇಶ್ವರ ಕಾರಡಗಿ ಸವಣೂರು ಬಂಕಾಪುರ ಹಾವೇರಿ ರಾಣೆಬೆನ್ನೂರು ಉಕ್ಕಡಗಾತ್ರಿ ಹೊನ್ನಾಳಿ ನ್ಯಾಮತಿ ಸವಳಂಗ ನುಗ್ಗೆಮಲ್ಲಾಪುರ ಆಯನೂರು ಮೂಲಕ ಶಿವಮೊಗ್ಗಕ್ಕೆ ಬಂದಿತು. ಶಿವಮೊಗ್ಗದಿಂದ ಹೊರಟು ಬಿಳಕಿ ಮಠ ಭಾನುವಾರ ಭದ್ರಾವತಿ ಮೂಲಕ ಸಾಗಿ ಬಾಳೆಹೊನ್ನೂರು ರಂಭಾಪುರಿ ಪೀಠ ತಲುಪಲಿದೆ. ಧರ್ಮ ಸಂಸ್ಕೃತಿ ಸಮಾಜಜಾಗೃತಿ ಮತ್ತು ವೀರಶೈವ ಪರಂಪರೆಯ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದೊಂದಿಗೆ ಈ ರಥಯಾತ್ರೆ ನಡೆಯುತ್ತಿದೆ ಎಂದು ಜಿಲ್ಲಾ ಜಂಗಮ ಸಮಾಜದ ಅಧ್ಯಕ್ಷ ಚಂದ್ರಯ್ಯ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.