ADVERTISEMENT

ಬಾರದ ಹಣ; ಹಸಿರೀಕರಣಕ್ಕೆ ಬರ

ಸಾಮಾಜಿಕ ಅರಣ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳಿಗೆ ಹಿನ್ನಡೆ

ಸುಮಾ ಬಿ.
Published 2 ಆಗಸ್ಟ್ 2021, 3:08 IST
Last Updated 2 ಆಗಸ್ಟ್ 2021, 3:08 IST
ಹಸಿರು ಸಸಿಗಳಿಂದ ಕಂಗೊಳಿಸಬೇಕಿದ್ದ ದಾವಣಗೆರೆಯ ಅರಣ್ಯ ಇಲಾಖೆಯ ಸಸ್ಯಪಾಲನಾ ಕ್ಷೇತ್ರದ ಸ್ಥಿತಿ – ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಹಸಿರು ಸಸಿಗಳಿಂದ ಕಂಗೊಳಿಸಬೇಕಿದ್ದ ದಾವಣಗೆರೆಯ ಅರಣ್ಯ ಇಲಾಖೆಯ ಸಸ್ಯಪಾಲನಾ ಕ್ಷೇತ್ರದ ಸ್ಥಿತಿ – ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಬಹುಪಾಲು ಒಣ ಭೂಮಿ ಪ್ರದೇಶವನ್ನೇ ಹೊಂದಿರುವ ಜಿಲ್ಲೆಯಲ್ಲಿ ಎರಡು ವರ್ಷಗಳಿಂದ ಸರಿಯಾಗಿ ಅನುದಾನ ಬಿಡುಗಡೆಯಾಗದ ಕಾರಣ ಹಸಿರೀಕರಣಕ್ಕೆ ಹಿನ್ನೆಡೆ ಉಂಟಾಗಿದೆ.

ಸಾಮಾಜಿಕ ಅರಣ್ಯ ಇಲಾಖೆಯಿಂದ ವಿವಿಧ ಯೋಜನೆಯಡಿ ಪ್ರತಿವರ್ಷ ನೆಡುತೋಪು
ನಿರ್ಮಾಣ, ಸಸಿಗಳ ವಿತರಣಾ ಕಾರ್ಯ, ಶಾಲೆ–ಕಾಲೇಜು ಆವರಣ, ಗೋಮಾಳ, ಸಮುದಾಯ ಸ್ಥಳಗಳಲ್ಲಿ ಸಸಿಗಳನ್ನು ನೆಡಲು ಒತ್ತು ನೀಡಲಾಗುತ್ತಿತ್ತು. ಆದರೆ, ಕೊರೊನಾ ಕರಿನೆರಳು ಜಿಲ್ಲೆಯ ಹಸಿರೀಕರಣದ ಕಾರ್ಯವನ್ನು ತಗ್ಗಿಸಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಒಂದಷ್ಟು ಸಸಿಗಳನ್ನು ವಿತರಿಸುವ, ನೆಡುವ ಕಾರ್ಯ ಆಗಿದ್ದರೂ ನಿರೀಕ್ಷಿತ ಗುರಿ ತಲುಪಿಲ್ಲ.

ಸರ್ಕಾರದಿಂದ ಬಿಡುಗಡೆಯಾಗುತ್ತಿದ್ದ ಅನುದಾನದಲ್ಲಿ ಶೇ 50ರಷ್ಟು ಕಡಿಮೆಯಾಗಿದ್ದು, ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಜಿಲ್ಲೆಯ ಸಸ್ಯಪಾಲನಾ ಕ್ಷೇತ್ರಗಳು ಪಾಳುಬಿದ್ದಿವೆ. ದಾವಣಗೆರೆ, ಹರಿಹರ, ಜಗಳೂರು, ಚನ್ನಗಿರಿ, ಹೊನ್ನಾಳಿ ಈ ಐದು ಉಪ ವಿಭಾಗಗಳನ್ನು ಹೊಂದಿರುವ ದಾವಣಗೆರೆ ವಿಭಾಗವು ಅರಣ್ಯೀಕರಣಕ್ಕೆ ಅನುದಾನದ ಕೊರತೆ ಎದುರಿಸುತ್ತಿದೆ.

ADVERTISEMENT

ನರೇಗಾ ಹಾಗೂ ಇಲಾಖೆಯ ಯೋಜನೆಗಳಾದ ಆರ್.ಎಸ್.ಪಿ.ಡಿ (ರೈತರಿಗೆ ಸಬ್ಸಿಡಿ ದರದಲ್ಲಿ ಸಸಿ ವಿತರಣೆ ಕಾರ್ಯಕ್ರಮ), ಆರ್‌.ಎಸ್‌.ಪಿ (ರಸ್ತೆ ಬದಿ ಸಸಿ ನೆಡುವಿಕೆ), ಎಸ್.ಎಫ್.ಪಿ (ಸಾಮಾಜಿಕ ಅರಣ್ಯ ಯೋಜನೆ), ಹಸಿರೀಕರಣ ಮತ್ತು ವನಮಹೋತ್ಸವ ಯೋಜನೆಗಳಡಿ ಪ್ರತಿವರ್ಷ ಜಿಲ್ಲೆಯಲ್ಲಿ 5.5 ಲಕ್ಷದಿಂದ 6 ಲಕ್ಷದವರೆಗೆ ಸಸಿಗಳನ್ನು ಪೋಷಿಸಿ ನಾಟಿ, ವಿತರಣೆ ಕಾರ್ಯ ಮಾಡಲಾಗುತ್ತಿತ್ತು. ಆದರೆ, ಅನುದಾನದ ಕೊರತೆಯಿಂದ 2020–21ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 1.84 ಲಕ್ಷ ಸಸಿಗಳನ್ನು ಮಾತ್ರ ಪೋಷಿಸಿ ವಿತರಿಸಲಾಗಿದೆ.

ಅಲ್ಲದೆ ವಿವಿಧ ಸಂಘ–ಸಂಸ್ಥೆಗಳಿಂದ ನಡೆಯುತ್ತಿದ್ದ ವನಮಹೋತ್ಸವದಂತಹ ಕಾರ್ಯಕ್ರಮಗಳಿಗೂ ಕೋವಿಡ್‌ ತಡೆಯೊಡ್ಡಿದ್ದು, ಹಸಿರೀಕರಣಕ್ಕೆ ಇನ್ನಷ್ಟು ಹಿನ್ನಡೆಯಾದಂತಾಗಿದೆ.

ಪ್ರತಿವರ್ಷ ಅರಣ್ಯ ಇಲಾಖೆಯ ವಿವಿಧ ಯೋಜನೆಗಳಡಿ ₹ 1 ಕೋಟಿ ಅನುದಾನ ಬರುತ್ತಿತ್ತು. ಈ ಅನುದಾನ ಶೇ 50ರಷ್ಟು ಕಡಿಮೆ ಆಗಿದೆ. ಸಾಮಾಜಿಕ ಅರಣ್ಯ ಇಲಾಖೆಯಡಿ ₹ 4 ಕೋಟಿವರೆಗೆ ಅನುದಾನ ಬರುತ್ತಿತ್ತು. ಈ ಅನುದಾನದಲ್ಲೂ ಶೇ 50ರಷ್ಟು ಕಡಿಮೆಯಾಗಿದೆ. ಹೀಗಾಗಿ ಜಿಲ್ಲೆಯನ್ನು ಹಸಿರೀಕರಣ ಮಾಡುವ ಉದ್ದೇಶಿತ ಗುರಿಯನ್ನು ತಲುಪಲಾಗಿಲ್ಲ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸುತ್ತವೆ.

‘ನರೇಗಾ ಯೋಜನೆಯಡಿ ಸಸಿಗಳನ್ನು ಬೆಳೆಸಲು ಯಾವುದೇ ತೊಂದರೆ ಇಲ್ಲ. ಆದರೆ, ನರೇಗಾ ಚಟುವಟಿಕೆಗೆ ಬಳಸುತ್ತಿದ್ದ ಉಪಕರಣಗಳ ಹಣ ನಾಲ್ಕು ವರ್ಷಗಳಿಂದ ಬಿಡುಗಡೆಯಾಗಿರಲಿಲ್ಲ. ಈ ಕಾರಣದಿಂದ ಕಳೆದ ವರ್ಷ ನರೇಗಾದಲ್ಲೂ ಗುರಿ ತಲುಪಲು ಸಾಧ್ಯವಾಗಿಲ್ಲ. ಕಳೆದ ಡಿಸೆಂಬರ್‌ನಲ್ಲಿ ನಾಲ್ಕು ವರ್ಷಗಳಿಂದ ಬಾಕಿ ಉಳಿದಿದ್ದ ಅನುದಾನದಲ್ಲಿ ಶೇ 75ರಷ್ಟು ಬಂದಿತ್ತು. ಅಷ್ಟು ಹೊತ್ತಿಗಾಗಲೇ ನರ್ಸರಿ ಬೆಳೆಸುವ ಸಮಯ ಮುಗಿದಿದ್ದರಿಂದ ಸಸಿಗಳನ್ನು ಬೆಳೆಸಲು ಆಗಲಿಲ್ಲ. ಪ್ರಸಕ್ತ ವರ್ಷ ನಿರೀಕ್ಷಿತ ಗುರಿ ತಲುಪಲು ಯೋಜನೆ ರೂಪಿಸಲಾಗಿದೆ’ ಎನ್ನುವರುಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ.ರಾಜಣ್ಣ.

***

ಪ್ರಸಕ್ತ ವರ್ಷ ನರೇಗಾ ಯೋಜನೆ ಸೇರಿ ಇಲಾಖೆಯ ವಿವಿಧ ಯೋಜನೆಗಳಡಿ 10 ಲಕ್ಷದಿಂದ 11 ಲಕ್ಷ ಸಸಿ ಬೆಳೆಸುವ ಯೋಜನೆ ರೂಪಿಸಲಾಗಿದೆ. ಅದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಗಸ್ಟ್‌ ಮೊದಲವಾರದಿಂದ ಈ ಕಾರ್ಯಕ್ಕೆ ಚಾಲನೆ ಸಿಗಲಿದೆ.

ಟಿ. ರಾಜಣ್ಣ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ ವಿಭಾಗ

***

ಆರೋಗ್ಯ, ಶಿಕ್ಷಣ ಪರಿಸರಕ್ಕೆ ಸರ್ಕಾರ ಹೆಚ್ಚು ಮಹತ್ವ ಕೊಡಬೇಕು. ಆದರೆ, ಯಾವುದಕ್ಕೆ ಆದ್ಯತೆ ಕೊಡಬೇಕು ಎಂಬುದೇ ಸರ್ಕಾರಕ್ಕೆ ಗೊತ್ತಿಲ್ಲ. ಸಾಮಾಜಿಕ ಅರಣ್ಯ ಬೆಳೆಸಲು ಎಷ್ಟು ಅನುದಾನ ನೀಡಿದರೂ ಕಡಿಮೆಯೇ. ಪರಿಸರ ಚೆನ್ನಾಗಿದ್ದರೆ ಮಾತ್ರ ಸಮುದಾಯ ಉಳಿಯಲು ಸಾಧ್ಯ. ಹಾಗೆಯೇ ಗಿಡ ಮರಗಳ ಮೇಲೆ ಜನರೂ ಪ್ರೀತಿ ಬೆಳೆಸಿಕೊಳ್ಳಬೇಕು. ಈ ಬಗ್ಗೆ ಜಾಗೃತಿ ಹೊಂದಬೇಕು.

ಶಿವನಕೆರೆ ಬಸವಲಿಂಗಪ್ಪ, ಕರುಣಾ ಜೀವಕಲ್ಯಾಣ ಟ್ರಸ್ಟ್‌, ಕಾರ್ಯದರ್ಶಿ

***

ಪ್ರಸಕ್ತ ಸಾಲಿನಲ್ಲಿ 1 ಲಕ್ಷ ಮಾನವ ದಿನಗಳ ಗುರಿ ಹೊಂದಿದ್ದೇವೆ. ತಾಲ್ಲೂಕಿಗೆ ಬರುವ 37 ಗ್ರಾಮ ಪಂಚಾಯಿತಿಗಳ ನಿರ್ವಹಣೆಗೆ ಕೇವಲ ಒಬ್ಬ ವಲಯ ಅರಣ್ಯಾಧಿಕಾರಿ, ಇಬ್ಬರು ಫಾರೆಸ್ಟ್ ಗಾರ್ಡ್, ಹೊರಗುತ್ತಿಗೆ ಸಿಬ್ಬಂದಿ ಮಾತ್ರ ಇದ್ದಾರೆ. ವಾಹನದ ಸೌಲಭ್ಯವಿಲ್ಲ.

ಆರ್.ತೋಷಣ್ ಕುಮಾರ, ವಲಯ ಅರಣ್ಯಾಧಿಕಾರಿ, ಹರಪನಹಳ್ಳಿ

***

ರೈತರಿಗೆ ಒಂದೂ ಸಸಿ ವಿತರಿಸಿಲ್ಲ

ಎನ್‌.ಕೆ.ಆಂಜನೇಯ

ಹೊನ್ನಾಳಿ: ತಾಲ್ಲೂಕಿನ ಸಾಮಾಜಿಕ ಅರಣ್ಯ, ವಲಯ ವ್ಯಾಪ್ತಿಯಲ್ಲಿ ಈ ಹಿಂದೆ ಪ್ರತಿ ವರ್ಷವೂ 200 ಹೆಕ್ಟೇರ್ ಪ್ರದೇಶದಲ್ಲಿ ಸಸಿಗಳನ್ನು ನಾಟಿ ಮಾಡಲಾಗುತ್ತಿತ್ತು. ಆದರೆ, 2019–20, 2020–21ರಲ್ಲಿ ಕೋವಿಡ್ ಕಾರಣದಿಂದ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ. ಇದರಿಂದ ಈ ಅವಧಿಯಲ್ಲಿ 25 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಮಾತ್ರ ನೆಡುತೋಪು ಮಾಡಲಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅರಣ್ಯಾಧಿಕಾರಿ ದೇವರಾಜ್, ‘2 ವರ್ಷಗಳ ಹಿಂದೆ ಪ್ರತಿ ವರ್ಷ 2 ಲಕ್ಷ ಸಸಿಗಳನ್ನು ಬೆಳೆಸಲಾಗುತ್ತಿತ್ತು. 2020ರಲ್ಲಿ 70 ಸಾವಿರ ಸಸಿಗಳು ಹಾಗೂ ಪ್ರಸಕ್ತ ವರ್ಷ 40 ಸಾವಿರ ಸಸಿಗಳನ್ನು ಮಾತ್ರ ಬೆಳೆಸಲಾಗಿದೆ. ಅರಣ್ಯ ಇಲಾಖಾ ಕಚೇರಿ ಆವರಣದಲ್ಲಿ ಸಸ್ಯಪಾಲನಾ ಕ್ಷೇತ್ರದಲ್ಲಿ ಸಸಿ ಬೆಳೆಸಲು ಈ ಬಾರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅನುದಾನ ಬರಬೇಕಷ್ಟೇ. ಎರಡು ವರ್ಷಗಳಲ್ಲಿ ಇಲ್ಲಿ ಯಾವುದೇ ಸಸಿಗಳನ್ನು ಬೆಳೆಸಲಾಗಿಲ್ಲ’ ಎಂದರು.

ಈ ಹಿಂದೆ ರೈತರಿಗೆ 1 ಲಕ್ಷ ಸಸಿಗಳನ್ನು ವಿತರಿಸಲಾಗುತ್ತಿತ್ತು. ಈ ಬಾರಿ ಒಂದೂ ಸಸಿಯನ್ನು ಕೊಟ್ಟಿಲ್ಲ. ಗೋಮಾಳ, ಶಾಲಾ ಮೈದಾನದಲ್ಲೂ ಸಸಿ ನೆಡುವ ಕಾರ್ಯಕ್ರಮಕ್ಕೆ ಹಿನ್ನೆಡೆಯಾಗಿದೆ ಎಂದು ಹೇಳಿದರು.

***

ಸಸಿ ನೆಡುವಿಕೆ– ವಿತರಣೆ; ಅರ್ಧದಷ್ಟು ಪ್ರಗತಿ

ಎಚ್‌.ವಿ.ನಟರಾಜು

ಚನ್ನಗಿರಿ: ತಾಲ್ಲೂಕಿನಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ 2020–21ನೇ ಸಾಲಿನಲ್ಲಿ ಈವರೆಗೆ 11,570 ಸಸಿಗಳನ್ನು ನೆಡಲಾಗಿದೆ. ಆದರೆ, ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇದು ಅರ್ಧದಷ್ಟು ಕಡಿಮೆಯಾಗಿದೆ.

ಈ ಹಿಂದೆ ವರ್ಷಕ್ಕೆ 25 ಸಾವಿರಕ್ಕೂ ಹೆಚ್ಚು ಸಸಿಗಳನ್ನು ಬೆಳೆಸಲಾಗುತ್ತಿತ್ತು. ಅನುದಾನದ ಕೊರತೆಯಿಂದ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿಲ್ಲ.

‘ನರೇಗಾ ಯೋಜನೆಯಡಿ ಪೆನ್ನಸಮುದ್ರ ಅರಣ್ಯ ಪ್ರದೇಶದಲ್ಲಿ ಇಂಗು ಗುಂಡಿ ನಿರ್ಮಾಣ ಮಾಡಲಾಗಿದೆ. ಕಂಸಾಗರ ಗ್ರಾಮದ ವ್ಯಾಪ್ತಿಯ ರಾಘವೇಂದ್ರ ಮಠದ ಗುಡ್ಡದಿಂದ ಕಣಿವೆ ಗುಡ್ಡದವರೆಗೆ ಬದು ಮತ್ತು ಕಂದಕವನ್ನು ನಿರ್ಮಾಣ ಮಾಡಲಾಗಿದೆ. ಎಲ್ಲಿಯೂ ಸಸಿಗಳು ನೀರು ಇಲ್ಲದೇ ಒಣಗಿಹೋಗಲು ಬಿಡುತ್ತಿಲ್ಲ. ಟ್ಯಾಂಕರ್ ಮೂಲಕ ಸಸಿಗಳಿಗೆ ನೀರುಣಿಸುವ ಕಾರ್ಯವನ್ನು ಇಲಾಖೆ ಮಾಡುತ್ತಿದೆ’ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಬಿ. ಆನಂದ್ ನಾಯ್ಕ ಮಾಹಿತಿ ನೀಡಿದರು.

***

ಸಾಮಾಜಿಕ ಅರಣ್ಯ ಉದ್ಯೋಗ ಖಾತ್ರಿಗೆ ಸೀಮಿತ

ವಿಶ್ವನಾಥ್‌ ಡಿ.

ಹರಪನಹಳ್ಳಿ: ಎರಡು ವರ್ಷಗಳಿಂದ ಸರ್ಕಾರದಿಂದ ಅನುದಾನವಿಲ್ಲದೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಸೀಮಿತವಾಗಿ ಸಾಮಾಜಿಕ ಅರಣ್ಯ ಇಲಾಖೆ ಕೆಲಸ ಮಾಡುತ್ತಿದೆ.

ರಸ್ತೆಗಳ ಬದಿ ನೆಡುತೋಪು, ಜಲ, ಮಣ್ಣು ಸಂರಕ್ಷಣೆಗೆ ಒತ್ತು ಕೊಟ್ಟು ಕೆಲಸ ಮಾಡುತ್ತಿದ್ದ ಸಾಮಾಜಿಕ ಅರಣ್ಯ ವಿಭಾಗಕ್ಕೆ ಯಾವುದೇ ಅನುದಾನವೂ ಇಲ್ಲ. ಸಿಬ್ಬಂದಿ ಮತ್ತು ಮೂಲಸೌಕರ್ಯಗಳ ಕೊರತೆಯಿಂದ ಅಭಿವೃದ್ಧಿ ಕೆಲಸಗಳಿಗೆ ಗರ ಬಡಿದಂತಾಗಿದೆ.

ಅರಣ್ಯ ಇಲಾಖೆಯಿಂದ ಬರಬೇಕಿದ್ದ ಸಾಮಾಜಿಕ ಅರಣ್ಯೀಕರಣ ಅಭಿವೃದ್ಧಿ ಅನುದಾನ ಬಾರದ ಪರಿಣಾಮ, ಉದ್ಯೋಗ ಖಾತ್ರಿ ಯೋಜನೆಯಡಿ ಅರಣ್ಯದಲ್ಲಿ ಇಂಗುಗುಂಡಿ ನಿರ್ಮಾಣ, ರಸ್ತೆ ಬದಿ ನೆಡುತೋಪು ಕಾಮಗಾರಿಗೆ ಮಾತ್ರ ಸೀಮಿತವಾದಂತಾಗಿದೆ.

‘2020ನೇ ಸಾಲಿನಲ್ಲಿ 70 ಸಾವಿರ ಮಾನವ ದಿನಗಳ ಗುರಿ ತಲುಪಿದ್ದಾರೆ. ಇಲಾಖೆಯ ಸಾಮಾಜಿಕ ವಿಭಾಗದಡಿ ಬರುವ ದ್ಯಾಪನಾಯಕನಹಳ್ಳಿ ವಿವಿಧ ಜಾತಿಯ ಸುಮಾರು 87 ಸಾವಿರ ಸಸಿಗಳನ್ನು ಪೋಷಿಸಿ, ರೈತರಿಗೆ ಉಚಿತವಾಗಿ ವಿತರಣೆ ಮಾಡಲಾಗಿದೆ. 2021ನೇ ಸಾಲಿನಲ್ಲಿ 46 ಸಾವಿರ ಮಾನವ ದಿನಗಳನ್ನು ಪೂರೈಸಿದ್ದೇವೆ’ ಎಂದು ವಲಯ ಅರಣ್ಯಾಧಿಕಾರಿ ಆರ್.ತೋಷಣ್ ಕುಮಾರ ತಿಳಿಸಿದರು.

ತಾಲ್ಲೂಕಿನ ವಿವಿಧ ಗ್ರಾಮಗಳ ರೈತರ ಹೊಲಗಳಲ್ಲಿ ಸಸಿಗಳನ್ನು ನೆಡಲಾಗಿದೆ. ಅರಣ್ಯದಲ್ಲಿ ಇಂಗು ಗುಂಡಿ ಕಾಮಗಾರಿ ಮಾಡಲಾಗಿದ್ದು, ಮಳೆ ನೀರಿನಿಂದ ಭರ್ತಿಯಾಗಿವೆ. ಇದಕ್ಕೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.