ADVERTISEMENT

ಭಾವೈಕ್ಯ ಸಮ್ಮೇಳನದಿಂದ ಸಾಮಾಜಿಕ ಸಾಮರಸ್ಯ

ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಬಿ.ಪಿ ವೀರಭದ್ರಪ್ಪ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 5:45 IST
Last Updated 6 ಡಿಸೆಂಬರ್ 2021, 5:45 IST
ಆನಂದಪುರ ಸಮೀಪದ ಮುರುಘಾಮಠದಲ್ಲಿ ನಡೆದ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಅಖಿಲಾ ಭಾರತ ವೀರಶೈವ ಮಹಾಸಭಾದ ಮಹಿಳಾ ಘಟಕದ ರಾಜ್ಯ ಘಟಕದ ಅಧ್ಯಕ್ಷೆ ಬಿ.ವೈ. ಅರುಣಾದೇವಿ ಅವರಿಗೆ ‘ಕೆಳದಿರಾಣಿ ಚನ್ನಮ್ಮ’ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
ಆನಂದಪುರ ಸಮೀಪದ ಮುರುಘಾಮಠದಲ್ಲಿ ನಡೆದ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಅಖಿಲಾ ಭಾರತ ವೀರಶೈವ ಮಹಾಸಭಾದ ಮಹಿಳಾ ಘಟಕದ ರಾಜ್ಯ ಘಟಕದ ಅಧ್ಯಕ್ಷೆ ಬಿ.ವೈ. ಅರುಣಾದೇವಿ ಅವರಿಗೆ ‘ಕೆಳದಿರಾಣಿ ಚನ್ನಮ್ಮ’ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.   

ಆನಂದಪುರ: ‘ನಮ್ಮಲ್ಲಿ ಜ್ಞಾನದ ಭಂಡಾರವನ್ನು ಹೆಚ್ಚಿಸಿಕೊಳ್ಳುವ ಮೂಲಕ ಸದೃಢ ಸಮಾಜವನ್ನು ಕಟ್ಟಬೇಕಾಗಿದೆ’ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಬಿ.ಪಿ. ವೀರಭದ್ರಪ್ಪ ಹೇಳಿದರು.

ಸಮೀಪದ ಮುರುಘಾಮಠದಲ್ಲಿ ನಡೆದ ಭಾವೈಕ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಮಾಜಿಕ ಅವನತಿಗೆ ಕಂದಾಚಾರ ಹಾಗೂ ಮೌಢ್ಯವೇ ಕಾರಣ. ಭಾವೈಕ್ಯ ಸಮ್ಮೇಳನವು ಸಹೋದರ ಮನೋಭಾವ ಮೂಡಿಸುವ ಮೂಲಕ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಇದೆ. ವಚನಗಳ ಪಾಲನೆಯಿಂದ ಮಾತ್ರ ಸಾಮಾಜಿಕ ಸಾಮರಸ್ಯ ಸಾಧ್ಯ’ ಎಂದು ಹೇಳಿದರು.

ADVERTISEMENT

‘ಯಾರೂ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಯೋಚಿಸು ವುದಿಲ್ಲ. ಬದಲಾಗಿ ಕೋಟ್ಯಧಿಪತಿ, ಮಿಲಿಯನೇರ್, ಬಿಲಿಯನೇರ್ ಆಗುವ ಬಗ್ಗೆ ಯೋಚಿಸುತ್ತಾರೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಬಸವಣ್ಣನವರ ಕಾಯಕ ತತ್ವವನ್ನು ಆಳವಡಿಸಿಕೊಂಡಿದ್ದಾರೆ. ಆದರೆ ಇದು ನಮ್ಮಲ್ಲಿ ಸಾಧ್ಯವಾಗದ ಕಾರಣ ಆರ್ಥಿಕ ಹಾಗೂ ಸಾಮಾಜಿಕ ಕಲಹಕ್ಕೆ ಕಾರಣವಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಉಪನ್ಯಾಸ ನೀಡಿದ ಇಂದುಮತಿ ಸಾಲಿಮಠ ಮಾತನಾಡಿ, ‘ಪ್ರಾಚೀನ ಕಾಲದಿಂದಲೂ ಮಠಗಳು ವಿಶ್ವಪರಂಪರೆಯನ್ನು ಸಾರುತ್ತಾ ಬಂದಿವೆ. ಜನರ ನಡುವೆ ಇರುವ ಕಂದಕಗಳನ್ನು ದೂರಮಾಡಲು ಭಾವೈಕ್ಯ ಸಮ್ಮೇಳನಗಳು ಅವಶ್ಯಕ. ಯುವಕರಲ್ಲಿ ದುಶ್ಟಟಗಳು ಹೆಚ್ಚಾಗುತ್ತಿದ್ದು, ಸಮಾಜದಲ್ಲಿ ಸಾಮಾರಸ್ಯ ಇಲ್ಲದಂತಾಗಿದೆ. ಪ್ರತಿಯೊಬ್ಬರಲ್ಲೂ ವಿಶ್ವ ಮಾನವ ಸಂದೇಶಗಳನ್ನು ಅನುಸರಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕಿದೆ’ ಎಂದರು.

ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿ ಮಾತನಾಡಿ, ‘ಭಾರತೀಯ ಪರಂಪರೆಯಲ್ಲಿ ದೀಪಕ್ಕೆ ಬಹಳ ಮಹತ್ವವಿದೆ. ದೀಪವನ್ನು ಮಠಗಳಲ್ಲಿ, ದೇವಸ್ಥಾನ, ಮನೆಗಳಲ್ಲಿ ಹಚ್ಚಿದರೆ ಸಾಲದು. ಮನಗಳಲ್ಲಿ ಹೃದಯದಲ್ಲಿ ಹಚ್ಚುವ ಮೂಲಕ ನಮ್ಮಲ್ಲಿರುವ ಅಜ್ಞಾನದ ಕತ್ತಲೆಯನ್ನು ಹೊಗಲಾಡಿಸಬೇಕಾಗಿದೆ’ ಎಂದು ಹೇಳಿದರು.

‘ಬೆಳಕು ಜ್ಞಾನದ ಸಂಕೇತ. ನಾವು ಅಜ್ಞಾನಿಗಳಾಗಿದ್ದು, ಅಂಧಕಾರದಲ್ಲಿದ್ದೇವೆ. ದೇವರು ಇದ್ದಾನೆ ಎಂದು ತಿಳಿದು ತಿರುಪತಿ, ಧರ್ಮಸ್ಥಳ, ಮಠಗಳಿಗೆ ಹೋಗುತ್ತಿದ್ದೇವೆ. ಆದರೆ, ನಾವು ನಮ್ಮ ಹೃದಯದಲ್ಲಿರುವ ಸತ್ಯ, ಶಾಂತಿ, ನೆಮ್ಮದಿ, ನಲಿವು ಕಳೆದುಕೊಳ್ಳುತ್ತಿದ್ದೇವೆ. ಹೃದಯದಲ್ಲಿ ಶಿವನನ್ನು ಕಾಣಬೇಕಾದರೆ ನಾವು ಪರಿಶುದ್ಧರಾಗಿರಬೇಕು’ ಎಂದು ನುಡಿದರು.

‘ರಾಜಗುರು ನಿರಂಜನ ಚರಮೂರ್ತಿ ಸ್ವಾಮಿಯವರ ಆರೋಗ್ಯ ಸಮೃದ್ಧಿಗೆ ಆಯುರ್ವೇದ, ಸಸ್ಯಾಹಾರ, ಹಣ್ಣು ಸೊಪ್ಪು, ಶುದ್ಧ ಜಲವೇ ಮದ್ದು’ ಎಂಬ ಕೃತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ ಬಿಡುಗಡೆಗೊಳಿಸಿದರು.

ಇದೇ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಮಹಿಳಾ ಘಟಕದ ರಾಜ್ಯ ಘಟಕದ ಅಧ್ಯಕ್ಷೆ ಬಿ.ವೈ.ಅರುಣಾದೇವಿ ಅವರಿಗೆ ಕೆಳದಿರಾಣಿ ಚನ್ನಮ್ಮ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.

ಹಾಲಪ್ಪಗೌಡ್ರು, ಡಾ.ಎಚ್.ಎಂ.ಶಿವಕುಮಾರ್ ಹುನಾಲು ಮಡಿಕೆ, ಡಾ.ನಾಗರಾಜ್, ಮಲ್ಲನಗೌಡ ಬಿ. ಪಾಟೀಲ್, ಗೌರಮ್ಮ ಹುಚ್ಚಪ್ಪ ಮಾಸ್ತರ್, ಡಾ. ಜೆ.ಜಿ.ಮಂಜುನಾಥ ಜಂಬಳ್ಳಿ ಅವರಿಗೆ ‘ಸಮಾಜ ಸೇವಾ’ ಪ್ರಶಸ್ತಿಯನ್ನು ನೀಡಲಾಯಿತು.

ಡಾ.ಪ್ರಕಾಶ್, ಸೋಮಶೇಖರಯ್ಯ, ತೀರ್ಥೇಶ್ ಬಟ್ಟೆಮಲ್ಲಪ್ಪ, ವಿ.ಪರಮೇಶ್ವರಯ್ಯ, ಎನ್.ಆರ್.ನಾಗರಾಜ್, ಜಿ.ಎಂ.ಈಶ ಅವರನ್ನು ಸನ್ಮಾನಿಸಲಾಯಿತು.

ಮುರುಘಾಮಠದ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ಕೊಣಂದೂರಿನ ಪಂಡಿತಾರಾಧ್ಯ ಶಿವಚಾರ್ಯ ಸ್ವಾಮೀಜಿ, ಚೌಕಿಮಠದ ನೀಲಕಂಠ ಸ್ವಾಮೀಜಿ, ದೀಪೋತ್ಸವ ಸಮಿತಿ ಅಧ್ಯಕ್ಷ ದಾನೇಶಪ್ಪಗೌಡ್ರು, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎನ್.ರುದ್ರಮೂರ್ತಿ ಸಜ್ಜನ್, ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಜಿಲ್ಲಾಧ್ಯಕ್ಷ ಸಿ.ಪಿ.ಈರೇಶ್ ಗೌಡ, ಎಲ್.ನಾಗರಾಜ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.