
ಸೊರಬ: ಹಿಂದುಳಿದ ವರ್ಗದ ಪ್ರತಿಯೊಬ್ಬರು ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸಿ ಸಮಾಜದ ಸೇವೆಗೆ ಮುಂದಾಗಬೇಕಿದೆ ಎಂದು ರೋಟರಿ ಕ್ಲವ್ ಸಂಸ್ಥಾಪಕ ಅಧ್ಯಕ್ಷ ಎಚ್.ಈ. ಜ್ಞಾನೇಶ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೋಟರಿ ಕ್ಲಬ್ ಹಾಗೂ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ತುಮಕೂರು ವಿ.ವಿ ಪರೀಕ್ಷಾಂಗ ವಿಭಾಗಕ್ಕೆ ಕುಲಸಚಿವರಾಗಿ ನೇಮಕಗೊಂಡಿರುವ ಮೋಹನ್ ಚಂದ್ರಗುತ್ತಿ ಅವರಿಗೆ ಸನ್ಮಾನಿಸಿ ಮಾತನಾಡಿದರು.
ಕಳೆದ ದಶಕಗಳ ಹಿಂದೆ ಅವಕಾಶಗಳಿಂದ ವಂಚಿತವಾಗಿದ್ದ ಹಿಂದುಳಿದ ಸಮುದಾಯಕ್ಕೆ ಈಚೆಗೆ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಹಿಂದುಳಿದ ವರ್ಗದವರು ಗುಣಮಟ್ಟಣದ ಶಿಕ್ಷಣ ಪಡೆದು ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಸ್ಥಾನಮಾನಗಳನ್ನು ಪಡೆದಿರುವುದು ಸಂತಸದ ವಿಷಯ. ತಳ ಸಮುದಾಯದಲ್ಲಿ ಹುಟ್ಟಿ ಬೆಳೆದ ತಾಲೂಕಿನ ಹೆಚ್ಚೆ ಗ್ರಾಮದ ಮೋಹನ್ ಚಂದ್ರಗುತ್ತಿ ಅವರು ತನ್ನ ಬಾಲ್ಯದಲ್ಲಿ ಅನುಭವಿಸಿದ ನೋವು, ನಲಿವು ಹಾಗೂ ದೀವರ ಸಂಸ್ಕೃತಿ ಬಗ್ಗೆ ಅವರ ಕೃತಿಯಲ್ಲಿ ದಾಖಲಿಸಿರುವುದು ನಮ್ಮ ಜನಾಂಗದ ಅಸ್ಮಿತೆಯಾಗಿದೆ ಎಂದರು.
ಶಾಲಾ ದಿನಗಳಲ್ಲಿ ಬಡತನದ ಅರಿವಿಲ್ಲದೆ ಸಮಯ ಕಳೆದೆ. ಪದವಿ ವ್ಯಾಸಂಗದಲ್ಲಿ ಬದುಕು ರೂಪಿಸಿಕೊಳ್ಳುವ ಹಂಬಲವಿತ್ತು. ಸಾಹಿತ್ಯದ ಬಗ್ಗೆ ಅಭಿರುಚಿ ಬೆಳೆಸಿಕೊಂಡ ನಂತರ ನನ್ನ ಬದುಕು ಬದಲಾವಣೆಗೊಂಡು ಇಂತಹ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ. ತೋಟಪ್ಪ, ಜಿಲ್ಲಾ ಪರಿಷತ್ ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ, ರೋಟರಿ ಕ್ಲಬ್ ಕಾರ್ಯದರ್ಶಿ ಕೃಷ್ಣಪ್ಪ ಓಟೂರು, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್ ಓಟೂರು, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಷಣ್ಮುಖಾಚಾರ್ ಮತ್ತಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.