ಸೊರಬ: ಪಟ್ಟಣದ ದಸರಾ ಉತ್ಸವ ಸಮಿತಿ, ತಾಲ್ಲೂಕು ಆಡಳಿತ, ಪುರಸಭೆ ವತಿಯಿಂದ ಹಮ್ಮಿಕೊಂಡ ದಸರಾ ಉತ್ಸವ ಗುರುವಾರ ವಿಜೃಂಭಣೆಯಿಂದ ನೆರವೇರಿತು.
ಪಟ್ಟಣದ ರಂಗನಾಥ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಬಯಲು ಬಸವೇಶ್ವರ ದೇವಸ್ಥಾನದವರೆಗೆ ಸಾಗಿತು. ಬಯಲು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶಮೀ ವೃಕ್ಷಕ್ಕೆ ಬಾಣ ಹೊಡೆಯುವ ಮೂಲಕ ಸಚಿವ ಮಧು ಬಂಗಾರಪ್ಪ ಹಾಗೂ ತಹಶೀಲ್ದಾರ್ ಮಂಜುಳಾ ಬಿ. ಹೆಗಡಾಳ್ ಬನ್ನಿ ಮುಡಿದರು.
ಪಟ್ಟಣದ ದುರ್ಗಾಂಬ ದೇವಿ, ಮಾರಿಕಾಂಬ ದೇವಿ, ಪೇಟೆ ಬಸವೇಶ್ವರ ಸ್ವಾಮಿ, ನಾಗಚೌಡೇಶ್ವರಿ, ಯಲ್ಲಮ್ಮ ದೇವಿ, ರಾಧಾ ವಿಠ್ಠಲ ರಕುಮಾಯಿ, ನಾಗ ಚೌಡೇಶ್ವರಿ ದೇವರ ಪಲ್ಲಕ್ಕಿ ಉತ್ಸವಗಳು ಮುಖ್ಯ ಬೀದಿಯಲ್ಲಿ ನಡೆದವು. ಚಂಡೆ ವಾದನ, ಡೊಳ್ಳು, ಚಿಲಿಪಿಲಿ ಗೊಂಬೆ ಬಳಗ, ಹಲಗೆ ಮೇಳ, ವಿವಿಧ ಕಲಾ ತಂಡಗಳು ಉತ್ಸವಕ್ಕೆ ಮೆರುಗು ತಂದವು. ರಂಗನಾಥ ಸ್ವಾಮಿ ದೇವಸ್ಥಾನದಿಂದ ಬೆಳ್ಳಿ ರಥದಲ್ಲಿ ದುರ್ಗಾದೇವಿಯ ಭವ್ಯ ಮೆರವಣಿಗೆ ನಡೆಯಿತು. ವಿವಿಧ ಯಕ್ಷಗಾನ ವೇಷಧಾರಿಗಳು ಗಮನ ಸೆಳೆದರು. ಸಚಿವ ಮಧು ಬಂಗಾರಪ್ಪ ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕಿದರು.
ದಸರಾ ಉತ್ಸವ ಸಮಿತಿ ಅಧ್ಯಕ್ಷ ಜಿ. ಪ್ರಶಾಂತ್ ಮೇಸ್ತ್ರಿ, ಪ್ರಧಾನ ಕಾರ್ಯದರ್ಶಿ ಪರಶುರಾಮ ಸಣ್ಣಬೈಲ್, ಖಜಾಂಚಿ ಬಸವರಾಜಶೇಟ್ ಬಂದಗಿ, ಆರ್ಥಿಕ ಸಮಿತಿ ಅಧ್ಯಕ್ಷ ಎಚ್. ಗಣಪತಿ ಹುಲ್ತಿಕೊಪ್ಪ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ. ಶೇಖರ್, ಜಿ.ಪಂ. ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ, ಪುರಸಭೆ ಅಧ್ಯಕ್ಷ ಪ್ರಭು ಮೇಸ್ತ್ರಿ ಹಾಗೂ ಸದಸ್ಯರು, ಸಾರ್ವಜನಿಕರು ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.