ADVERTISEMENT

ಸೊರಬ: ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಲ್ಲಿ ವಿಳಂಬಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 6:48 IST
Last Updated 18 ಅಕ್ಟೋಬರ್ 2025, 6:48 IST
ಸೊರಬ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಮಲೆನಾಡು ರೈತರ ಹಿತರಕ್ಷಣಾ ಹೋರಾಟ ಸಮಿತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು
ಸೊರಬ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಮಲೆನಾಡು ರೈತರ ಹಿತರಕ್ಷಣಾ ಹೋರಾಟ ಸಮಿತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು   

ಸೊರಬ: ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಲ್ಲಿನ ವಿಳಂಬ ಧೋರಣೆ ಖಂಡಿಸಿ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಮಲೆನಾಡು ರೈತರ ಹಿತರಕ್ಷಣಾ ಹೋರಾಟ ಸಮಿತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ರೈತರಿಗೆ ಹಕ್ಕು ಪತ್ರ ನೀಡುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಆದೇಶವಿದ್ದರೂ ಅನುಷ್ಠಾನಗೊಂಡಿಲ್ಲ. 1978ರ ಏ.27ಕ್ಕಿಂತ ಹಿಂದೆ ಅರಣ್ಯ ಭೂಮಿ ಸಾಗುವಳಿ ಮಾಡಿದ ರೈತರಿಗೆ ಹಕ್ಕು ಪತ್ರ ನೀಡುವಂತೆ ಆದೇಶ ಮಾಡಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಕಾಯ್ದೆಯ ಅನ್ವಯ 1996ರಲ್ಲಿ 43 ಸಾವಿರ ಎಕರೆ ಭೂಮಿಯನ್ನು ಬಿಡುಗಡೆ ಮಾಡಿದೆ. ಆದರೆ, ತಾಲೂಕಿನಲ್ಲಿ 900 ರೈತರು ಅರ್ಜಿಗಳನ್ನು ಸಲ್ಲಿಸಿದ್ದರೂ, ರೈತರನ್ನು ಕಚೇರಿಗೆ ಅಲೆದಾಡಿಸಲಾಗುತ್ತಿದೆ ಎಂದು ಸಮಿತಿಯ ಸಂಚಾಲಕ ತೀ.ನ. ಶ್ರೀನಿವಾಸ್ ಆರೋಪಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ರೈತರು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲನೆ ಮಾಡುವಂತೆ ತಾಲೂಕು ಕಚೇರಿಗೆ ಕಳುಹಿಸಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಕಾಲಹರಣ ಮಾಡಿರುವ ಬಗ್ಗೆ ಉಪವಿಭಾಗಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ರೈತರಿಗೆ ಹಕ್ಕು ಪತ್ರ ನೀಡುವ ಕುರಿತು ಜಿಲ್ಲಾಧಿಕಾರಿ, ಸಿಸಿಎಫ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಕಂದಾಯ ಸಚಿವರೊಂದಿಗೆ ಸಭೆಗಳನ್ನು ನಡೆಸಿ, ರೈತರಿಗೆ ಹಕ್ಕು ಪತ್ರ ನೀಡುವಂತೆ ಆದೇಶಿಸಿದ್ದಾರೆ. ಆದರೂ ತಹಶೀಲ್ದಾರರು ಉದಾಸೀನತೆ ತೋರುತ್ತಿದ್ದಾರೆ. ಇದರಿಂದ ಅರಣ್ಯ ಭೂಮಿಯ ಹಕ್ಕು ಮರೀಚಿಕೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

ತಹಶೀಲ್ದಾರ್ ಮಂಜುಳಾ ಬಿ. ಹೆಗಡಾಳ್ ಅವರಿಗೆ ಮನವಿ ಸಲ್ಲಿಸಲಾಯಿತು. ತಾಲ್ಲೂಕು ಸಂಚಾಲಕ ಪರಶುರಾಮಪ್ಪ ಶಿಡ್ಡಿಹಳ್ಳಿ, ನಾಗರಾಜ, ವೈ.ಕೆ. ಮಧುಕರ, ಕೆ. ನಾಗರಾಜ, ಶಿವಮೂರ್ತಿ, ಫಕೀರಮ್ಮ, ಗಂಗಮಾಳಮ್ಮ, ಬಸವಣ್ಯಪ್ಪ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.