
ಸೊರಬ: ‘ಹಿಂದೂ ಸಮಾಜದಲ್ಲಿ ಜಾತಿ, ಜಾತಿಗಳ ನಡುವೇ ಯಾವುದೇ ಭೇದ ಭಾವವಿಲ್ಲ. ನಾವೆಲ್ಲ ಒಂದೇ ಎಂಬ ಸಾಮರಸ್ಯ ಭಾವದ ಸಮಾಜ ನಿರ್ಮಾಣ ಮಾಡುವ ಕೆಲಸವನ್ನು ಕಳೆದ 100 ವರ್ಷಗಳಿಂದ ಆರ್.ಎಸ್.ಎಸ್ ಮಾಡುತ್ತಾ ಬಂದಿದೆ. ನಮ್ಮ ಪೂರ್ವಜರು ಈ ದೇಶದ ಸಂಸ್ಕೃತಿಯ ಉಳಿವಿಗಾಗಿ ಮಾಡಿದ ತ್ಯಾಗ ಬಲಿದಾನಗಳನ್ನು ನೆನಪು ಮಾಡಿಕೊಳ್ಳಬೇಕು’ ಎಂದು ದೇವಾಲಯ ಸಂವರ್ಧನಾ ಸಮಿತಿಯ ರಾಜ್ಯ ಸಂಯೋಜಕ ಮನೋಹರ ಮಠದ್ ತಿಳಿಸಿದರು.
ಪಟ್ಟಣದ ಚಾಮರಾಜಪೇಟೇಯ ಕಾನುಕೇರಿ ಮಠದಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿಯಿಂದ ನಡೆದ ಹಿಂದೂ ಸಮಾಜೊತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರ್.ಎಸ್.ಎಸ್. ಈ ದೇಶವನ್ನು ಹಿಂದೂ ರಾಷ್ಟ್ರವಾಗಿ ಮಾಡಲು ಹೊರಟಿಲ್ಲ. ಮೊದಲಿನಿಂದಲೂ ಈ ದೇಶ ಹಿಂದೂ ರಾಷ್ಟ್ರವಾಗಿತ್ತು. ಹಿಂದೂ ರಾಷ್ಟ್ರವಾಗಿಯೇ ಇರುತ್ತದೆ. ಈ ದೇಶ ಅನೇಕ ರಾಷ್ಟ್ರಗಳಿಂದ ಕೂಡಿದ್ದಲ್ಲ. ಬದಲಿಗೆ ಅನೇಕ ಜನ ಸಮುದಾಯಗಳಿಂದ ಕೂಡಿದೆ. ವೈವಿಧ್ಯಮಯವಾಗಿದ್ದರೂ ನಮ್ಮ ಸಂಸ್ಕೃತಿ, ನಾಗರಿಕತೆ ಒಂದೇ ಆಗಿದೆ’ ಎಂದರು.
‘ಪ್ರಾಚೀನ ಕಾಲದಿಂದಲೂ ಋಷಿಗಳು, ಮುನಿಗಳು, ಸಾಧು-ಸಂತರು, ದಾರ್ಶನಿಕರು ಜಗತ್ತೇ ಚನ್ನಾಗಿರಬೇಕೆಂದು ಬಯಸಿ ವಸುಧೈವ ಕುಟುಂಬಕಂ ಎಂಬ ಮಾರ್ಗ ತಿಳಿಸಿದರು. ಪ್ರಪಂಚದ ಯಾವುದೇ ಸಂಸ್ಕೃತಿಯ ಮೇಲೆ ದಾಳಿ ಮಾಡದ ಏಕೈಕ ರಾಷ್ಟ್ರ ಭಾರತವಾಗಿದ್ದು, ಜಗತ್ತಿನ ಕಲ್ಯಾಣವನ್ನು ಬಯಸುವ ಹಿಂದೂ ಯಾವಾಗಲೂ ಭಯೋತ್ಪಾದಕನಾಗಲು ಸಾಧವಿಲ್ಲ’ ಎಂದು ಹೇಳಿದರು.
ಜಡೆ ಹಿರೇಮಠದ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ಜಯಪ್ಪಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಟ್ಟಣದ ಹಿರೇಶಕುನ ಮಾರಿಕಾಂಬಾ ದೇವಸ್ಥಾನದ ಮುಂಭಾಗದಿಂದ ಮುಖ್ಯರಸ್ತೆಯ ಮೂಲಕ ಕಾನುಕೇರಿ ಮಠದವರೆಗೆ ಶೋಭಾಯತ್ರೆ ನಡೆಯಿತು.
ಪ್ರಮುಖರಾದ ಎಚ್.ಈ. ಜ್ಞಾನೇಶ್, ಪಾಣಿರಾಜಪ್ಪ, ಮಧುರಾಯ್ ಶೇಟ್, ನಿರಂಜನ, ಚಂದನ್ ಮತ್ತಿತರರಿದ್ದರು. ಮಹೇಶ ಗೋಖಲೆ ಸ್ವಾಗತಿಸಿದರು. ರೇಣುಕಮ್ಮ ಗೌಳಿ ವಂದಿಸಿದರು. ಕಾರ್ಯಕ್ರಮವನ್ನು ಮಹೇಶ ಖಾರ್ವಿ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.