ADVERTISEMENT

ಕಂದಾಯ ನಿವೇಶನಗಳಿಗಿಲ್ಲ ನೋಂದಣಿ ಪೂರ್ವ ನಕ್ಷೆ

ಭೂಮಾಪಕರಿಗೆ ಭೂದಾಖಲೆಗಳ ಸಹಾಯಕ ನಿರ್ದೇಶಕರ ಆದೇಶ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 4:00 IST
Last Updated 3 ಸೆಪ್ಟೆಂಬರ್ 2021, 4:00 IST
ಸೊರಬ ಪುರಸಭೆ ವ್ಯಾಪ್ತಿಯ ಸರ್ವೆ ನಂ 113ರಲ್ಲಿ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸದಂತೆ ನಿರ್ಮಾಣ ಹಂತದ ಕಟ್ಟಡಕ್ಕೆ ಪುರಸಭೆ ಅಧಿಕಾರಿಗಳು ನಾಮಫಲಕ ಹಾಕಿರುವುದು
ಸೊರಬ ಪುರಸಭೆ ವ್ಯಾಪ್ತಿಯ ಸರ್ವೆ ನಂ 113ರಲ್ಲಿ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸದಂತೆ ನಿರ್ಮಾಣ ಹಂತದ ಕಟ್ಟಡಕ್ಕೆ ಪುರಸಭೆ ಅಧಿಕಾರಿಗಳು ನಾಮಫಲಕ ಹಾಕಿರುವುದು   

ಸೊರಬ: ಅಭಿವೃದ್ಧಿ ಗೊಳ್ಳುತ್ತಿರುವ ಪುರಸಭೆ ವ್ಯಾಪ್ತಿಯ ಬಡವಾಣೆಗಳಲ್ಲಿ ಭೂ ಪರಿವರ್ತನೆ ಮಾಡಿಸಿದ ಕಂದಾಯ ನಿವೇಶನಗಳಿಗಷ್ಟೇ ನೋಂದಣಿ ಪೂರ್ವ ನಕ್ಷೆ (11 ಈ ನಕ್ಷೆ–ಕ್ರಯ, ವಿಭಾಗ, ದಾನ ನೀಡುವ ಮೊದಲು ಸಿದ್ಧಪಡಿಸುವ ನಕ್ಷೆ) ನೀಡುವಂತೆ ಭೂಮಾಪಕರಿಗೆ ಭೂದಾಖಲೆಗಳ ಸಹಾಯಕ ನಿರ್ದೇಶಕರು ಆದೇಶ ಹೊರಡಿಸಿರುವುದು ವಿವಾದ ಹುಟ್ಟುಹಾಕಿದೆ.

ತಾಲ್ಲೂಕಿನ ಹಳೆಸೊರಬ, ಕೊಡಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಗ್ರಾಮಗಳನ್ನು ಒಳಪಡಿಸಿಕೊಂಡು ಜನಸಂಖ್ಯೆ ಆಧಾರದ ಮೇಲೆ ಸೊರಬ ಪಟ್ಟಣ ಪಂಚಾಯಿತಿಗೆ ಪುರಸಭೆ ಸ್ಥಾನ ನೀಡಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಬಡಾವಣೆಗಳಲ್ಲಿ ಕಡ್ಡಾಯವಾಗಿ ಭೂಪರಿವರ್ತನೆ ಮಾಡಿಸಿದ ನಿವೇಶನಗಳಿಗೆ ಮಾತ್ರ ನೋಂದಣಿ ಪೂರ್ವ ನಕ್ಷೆ ನೀಡುವಂತೆ ಆದೇಶ ಹೊರಡಿಸಿರುವುದು ಬಡ, ಮಧ್ಯಮ ವರ್ಗದ ಜನರಿಗೆ ಸಂಕಷ್ಟ ತಂದಿದೆ.

ಶಾಸಕ ಕುಮಾರ್ ಬಂಗಾರಪ್ಪ ಪಟ್ಟಣದ ಸರ್ವೆ ನಂಬರ್‌ 113ರಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡ ಮನೆಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪುರಸಭೆ ಅಧಿಕಾರಿಗಳು ಮನೆಗಳನ್ನು ತೆರವುಗೊಳಿಸಿ, ಖಾಲಿ ಇರುವ ನಿವೇಶನಗಳಿಗೆ ಪುರಸಭೆ ಆಸ್ತಿಯ ಕಬಳಿಸುವಂತಿಲ್ಲ ಎಂಬ ನಾಮಫಲಕ ಅಳವಡಿಸಿದ್ದಾರೆ. ಇಲ್ಲಿ ನಿವೇಶನ ಹೊಂದಿರುವ ಕೆಲವು ಪ್ರಭಾವಿಗಳು ಅಧಿಕ ಬೆಲೆಗೆ ಮಾರಾಟ ಮಾಡಲು ಅನುಕೂಲವಾಗುವಂತೆ ಇಂತಹ ಆದೇಶ ಹೊರಡಿಸಿದ್ದಾರೆ ಎಂದು ಕಂದಾಯ ನಿವೇಶನಗಳನ್ನು ಖರೀದಿಸಿ ಮನೆಕಟ್ಟಿಕೊಂಡ ಸಾರ್ವಜನಿಕರು ದೂರಿದ್ದಾರೆ.

ADVERTISEMENT

ಜನಸಂಖ್ಯೆಗೆ ಅನುಗುಣವಾಗಿ ರಸ್ತೆ, ಚರಂಡಿ ಹಾಗೂ ವಾಹನ ದಟ್ಟಣೆಯಾಗದಂತೆ ಸಾರ್ವಜನಿಕ ಉಪಯೋಗಕ್ಕೆ ಸ್ಥಳಬಿಟ್ಟು ಭೂಪರಿವರ್ತನೆ ಮಾಡಿಸುವುದು ಕಡ್ಡಾಯ ಎನ್ನುವುದು ಸರ್ಕಾರದ ಅಧಿಸೂಚನೆಯಲ್ಲಿದೆ. ತಾಲ್ಲೂಕು ಸೇರಿದಂತೆ ಪಟ್ಟಣದ ವ್ಯಾಪ್ತಿಯಲ್ಲಿ
ಕನಿಷ್ಠ ಅಳತೆಯ ನಿವೇಶನ ಹೊಂದಿದವರು ನೋಂದಣಿ ಪೂರ್ವ ನಕ್ಷೆ ಪಡೆದು ತಮಗೆ ಅಗತ್ಯವಿದ್ದಾಗ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದ ಶಾಸಕರು ಕಡ್ಡಾಯವಾಗಿ ಭೂಪರಿವರ್ತನೆ ಮಾಡಿಸದ ತುಂಡು ಜಮೀನುಗಳಿಗೆ ಸರ್ವೆ ನಕ್ಷೆ ನೀಡದಂತೆ ಸೂಚಿದ್ದಾರೆ. ಅವರ ಸೂಚನೆಯಂತೆ ಆದೇಶ ಹೊರಡಿಸಲಾಗಿದೆ. ಹೊಸ ನಿಯಮದಿಂದ ಚಿಕ್ಕ ತುಂಡು ಕಂದಾಯ ಭೂಮಿಗಳನ್ನು ಸುಲಭವಾಗಿ ಇತರರಿಗೆ ಪರಭಾರೆ ಮಾಡಲು ಅವಕಾಶ ಇಲ್ಲವಾಗಿದೆ.

ಭೂಮಾಪನ ಇಲಾಖೆ ಅಧಿಕಾರಿಗಳು ಕಾನೂನುಗಳನ್ನು ಗಾಳಿಗೆ ತೂರಿ ತಮ್ಮ ಬಳಿಗೆ ಬಂದ ಅರ್ಜಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸದೆ, ಸ್ಥಳ ಮಹಜರು ಮಾಡದೆ ನೋಂದಣಿ ಪೂರ್ವ ನಕ್ಷೆ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿವೆ. ಹಾಗಾಗಿಯೇ, ಆರೋಪ ಸಾಬೀತಾದರೆ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

***

ನಿಯಮ ಮೀರಿ ಹೆಚ್ಚುವರಿ ನಿವೇಶನ ಹೊಂದಿದವರಿಗೆ ಭೂಮಾಪನ ಇಲಾಖೆ ಹೊರಡಿಸಿರುವ ಆದೇಶ ಸರಿ ಇದೆ. ಅನೇಕ ಬಡವರು ಹಲವು ಕಡೆ ಕನಿಷ್ಠ ನಿವೇಶನದಲ್ಲಿ ಮನೆ ನಿರ್ಮಿಸಿ ಕೊಂಡಿದ್ದಾರೆ. ಅಂತಹವರಿಗೆ ಯಾವ ತೊಂದರೆ ಆಗದಂತೆ ಅಧಿಕಾರಿಗಳು ಕೆಲಸ ಮಾಡಲು ಮುಂದಾಗಲಿ.

ರಾಜಪ್ಪ ಮಾಸ್ತರ್, ಸಮಾಜ ಚಿಂತಕ

***

ಪುರಸಭೆ ವ್ಯಾಪ್ತಿಯ ಬಡವಾಣೆಗಳಿಗೆ ಭೂಪರಿವರ್ತನೆ ಒಳಪಡಿಸುವುದರಿಂದ ಸ್ಥಳೀಯ ಸಂಸ್ಥೆಗಳಿಗೆ ಆದಾಯ ಬರುತ್ತದೆ. ಆದರೆ, ತುಂಡು ಜಮೀನು ಹೊಂದಿದವರಿಗೆ ಸೂಕ್ತವಲ್ಲ. ಅದರ ಸಾಧಕ, ಬಾಧಕ ಅರಿತು ಅನುಷ್ಠಾನ ಮಾಡಲಿ.

ವೀರೇಶ್ ಮೇಸ್ತ್ರಿ, ಪುರಸಭೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.