ADVERTISEMENT

ಮುಂಗಾರು ಹಂಗಾಮಿನ ಬಿತ್ತನೆ ಜೋರು

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 3:32 IST
Last Updated 19 ಜೂನ್ 2021, 3:32 IST
ಭದ್ರಾವತಿ ತಾಲ್ಲೂಕಿನ ಹಿರಿಯೂರು ಬಳಿ ಮೆಕ್ಕೆಜೋಳ ಬಿತ್ತನೆಗೆ ಸಿದ್ಧತೆ ನಡೆಸುತ್ತಿರುವುದು
ಭದ್ರಾವತಿ ತಾಲ್ಲೂಕಿನ ಹಿರಿಯೂರು ಬಳಿ ಮೆಕ್ಕೆಜೋಳ ಬಿತ್ತನೆಗೆ ಸಿದ್ಧತೆ ನಡೆಸುತ್ತಿರುವುದು   

ಭದ್ರಾವತಿ: ತಾಲ್ಲೂಕಿಗೆ ಜಲಾಶಯದ ನೀರು ಇರುವುದರಿಂದ ವರ್ಷಕ್ಕೆ ಎರಡು ಬಾರಿ ಭತ್ತ ಬೆಳೆಗೆ ಯಾವುದೇ ಅಡ್ಡಿ ಇಲ್ಲ. ಆದರೆ, ಮಳೆ ಆಧಾರಿತ ಜಮೀನು ಇರುವ ಹಿರಿಯೂರು, ಆನವೇರಿ, ಕೂಡ್ಲಿಗೆರೆ, ಹೊಳೆಹೊನ್ನೂರು ಭಾಗದಲ್ಲಿ ತೊಗರಿ, ರಾಗಿ, ಮೆಕ್ಕೆಜೋಳ ಬಿತ್ತನೆ ಕಾರ್ಯ ಈಗ ನಡೆದಿದೆ.

ಇದಕ್ಕಾಗಿ ರೈತ ಸಂಪರ್ಕ ಕೇಂದ್ರದಿಂದ ಬೀಜ ವಿತರಿಸುವ ಕೆಲಸ ನಡೆದಿದ್ದು, ಈ ಬೆಳೆಯನ್ನು ಅಂದಾಜು ನೂರು ಹೆಕ್ಟೇರ್ ಪ್ರದೇಶದಲ್ಲಿ ಕಾಣಬಹುದು ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿ ಶಶಿಧರ.

‘ಭತ್ತ ಬೀಜವನ್ನು ಇನ್ನು ಎರಡು ಮೂರು ದಿನಗಳಲ್ಲಿ ಸಂಬಂಧಿಸಿದ ಸೊಸೈಟಿಗಳಿಗೆ, ರೈತಸಂಪರ್ಕ ಕೇಂದ್ರಗಳಿಗೆ ತಲುಪಿಸುವ ಕೆಲಸ ನಡೆಯಲಿದ್ದು, ಅಲ್ಲಿಂದ ಎರಡು ಮೂರು ದಿನಗಳಲ್ಲಿ ಅವುಗಳನ್ನು ಕೃಷಿಕರಿಗೆ ವಿತರಿಸುವ ಕೆಲಸ ನಡೆಯಲಿದೆ’ ಎಂದು ಕೃಷಿ ಇಲಾಖೆ ರಾಕೇಶ್ ಮಾಹಿತಿ ನೀಡಿದರು.

ADVERTISEMENT

‘ಮುಂಗಾರು ಮಳೆಯಲ್ಲಿ ಬಿತ್ತನೆ ಕಾರ್ಯ ನಡೆದರೆ ಆನಂತರ ಸಹಜವಾಗಿ ಸಿಗುವಜಲಾಶಯ ನೀರು ಭತ್ತ ಬೆಳೆಗೆ ಹೆಚ್ಚಿನ ಸಹಕಾರಿ ಆಗಲಿದೆ. ಇದರ ನಡುವೆ ಒಣಭೂಮಿ ಜಾಗದಲ್ಲಿನ ಬಿತ್ತನೆಗೆ ಈಗ ಸಕಾಲವಾಗಿದ್ದು, ಇದರ ಚಟುವಟಿಕೆ ರಭಸದಿಂದ ನಡೆದಿದೆ’ ಎನ್ನುತ್ತಾರೆ ಕೃಷಿಕರು.

ಗೊಬ್ಬರ ಸಮಸ್ಯೆ ಇಲ್ಲ: ತಾಲ್ಲೂಕಿನಲ್ಲಿ ಗೊಬ್ಬರದ ಸಮಸ್ಯೆ ಇಲ್ಲ. ಈಗಾಗಲೇ ಸಬ್ಸಿಡಿ ದರದಲ್ಲಿ ವಿತರಣೆ ಮಾಡಬಹುದಾದ ರಸಗೊಬ್ಬರ ದಾಸ್ತಾನು ಸಾಕಷ್ಟಿದೆ ಎನ್ನುತ್ತವೆ ಕೃಷಿ ಇಲಾಖೆ ಮೂಲಗಳು.

ರೈತರು ಡಿಎಪಿ ರಸಗೊಬ್ಬರದ ಮೇಲೆಹೆಚ್ಚು ಅವಲಂಬಿತರಾಗದೆ 12:32:16, 10:26:26, 20:20:0 ಕಾಂಪ್ಲೆಕ್ಸ್ ರಸಗೊಬ್ಬರವನ್ನು ಶಿಫಾರಸು ಮಾಡಿದ ಪ್ರಮಾಣದಲ್ಲಿ ಬಳಕೆ ಮಾಡುವಂತೆ ಕೃಷಿ ಇಲಾಖೆ ಮನವಿ ಮಾಡಿದೆ.

ಬೆಳೆ ಮೇಲಿನ ಅಳತೆ ಪ್ರಮಾಣದವಿವರವನ್ನು ಪಡೆಯಲು ಸಮೀಪದ ರೈತ ಸಂಪರ್ಕ ಕೇಂದ್ರ, ಇಲ್ಲವೇ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.