ADVERTISEMENT

ಶಾಂತಿ ಕದಡಿದರೆ ನಿರ್ಧಾಕ್ಷಿಣ್ಯ ಕ್ರಮ: ಎಸ್‌ಪಿ ಶಾಂತರಾಜು

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 14:26 IST
Last Updated 3 ಆಗಸ್ಟ್ 2019, 14:26 IST
ಶಿವಮೊಗ್ಗ ನೂತನ ಎಸ್‌ಪಿ ಶಾಂತರಾಜು ಅವರಿಗೆ ನಿರ್ಗಮಿತ ಎಸ್‌ಪಿ ಡಾ.ಅಶ್ವಿನಿ ಅಭಿನಂದಿಸಿದರು.
ಶಿವಮೊಗ್ಗ ನೂತನ ಎಸ್‌ಪಿ ಶಾಂತರಾಜು ಅವರಿಗೆ ನಿರ್ಗಮಿತ ಎಸ್‌ಪಿ ಡಾ.ಅಶ್ವಿನಿ ಅಭಿನಂದಿಸಿದರು.   

ಶಿವಮೊಗ್ಗ: ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನೂತನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಎಚ್ಚರಿಸಿದರು.

ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ಶನಿವಾರ ನಿರ್ಗಮಿತ ಎಸ್‌ಪಿ ಡಾ.ಎಂ.ಅಶ್ವಿನಿ ಅವರಿಂದ ಅಧಿಕಾರ ಸ್ವೀಕರಿಸಿದ ನಂತರ ಅವರು ಮಾತನಾಡಿದರು.

ಗಾಂಜಾ, ಮಟ್ಕಾ, ಗೂಂಡಾಗಿರಿಗೆ ಅವಕಾಶ ನೀಡುವುದಿಲ್ಲ. ಶಾಂತಿ ಸುವ್ಯವಸ್ಥೆಗೆ ಭಂಗ ತಂದರೆ ಸುಮ್ಮನೆ ಬಿಡುವುದಿಲ್ಲ. ಅಪರಾಧ ಚಟುವಟಿಕೆಗಳಲ್ಲಿ ಯಾರೇ ಭಾಗಿಯಾದರೂ ಕ್ರಮ ಕೈಗೊಳ್ಳುವೆ. ಬರಲಿರುವ ಬಕ್ರಿದ್, ಗಣಪತಿ ಹಬ್ಬಗಳ ಸಮಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಆದ್ಯತೆ ನೀಡುವೆ ಎಂದರು.

ADVERTISEMENT

ಜಿಲ್ಲೆಯ ಎಲ್ಲ ಠಾಣೆಗಳನ್ನೂ ಜನಸ್ನೇಹಿಯಾಗಿಸಲು ಪ್ರಯುತ್ನಿಸಲಾಗುವುದು. ಸಾರ್ವಜನಿಕರು ನಿರ್ಭಯವಾಗಿ ಬಂದು ಸಮಸ್ಯೆ ಹೇಳಿಕೊಳ್ಳುವ ವಾತಾವರಣ ನಿರ್ಮಿಸಲಾಗುವುದು. ಸಂಚಾರ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ನಿರ್ಗಮಿತ ಎಸ್‌ಪಿ ಅಶ್ವಿನಿ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಹಲವು ಬದಲಾವಣೆ ತಂದಿದ್ದಾರೆ. ಅವರು ಜಾರಿಗೆ ತಂದ ಸುಧಾರಣೆಗಳನ್ನು ಮುಂದುವರಿಸಿಕೊಂಡು ಹೋಗುವೆ ಎಂದರು.

ಡಾ.ಎಂ.ಅಶ್ವಿನಿ, ಎಎಸ್‌ಪಿ ಶೇಖರ್ ಇದ್ದರು.

ನೆರೆಯ ತಾಲ್ಲೂಕಿನ ಶಾಂತರಾಜು:ಶಾಂತರಾಜು ಅವರದು ಮೂಲತಃ ಹೊನ್ನಾಳಿ ತಾಲ್ಲೂಕು ಹತ್ತೂರು. ಓದಿದ್ದು ಮಂಗಳೂರಿನ ಮೀನುಗಾರಿಕಾ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್‌ಸಿ ಪದವಿ ಪಡೆದಿದ್ದಾರೆ. ಕೆಪಿಎಸ್‌ಸಿ ಪರೀಕ್ಷೆ ಬರೆದು ಕೆಎಸ್‌ಪಿಎಸ್‌ಗೆ ಆಯ್ಕೆಯಾದವರು. 8 ವರ್ಷಗಳ ಹಿಂದೆ ಶಿಕಾರಿಪುರ ಉಪವಿಭಾಗದ ಡಿವೈಎಸ್‌ಪಿಯಾಗಿ ಸೇವೆ ಸಲ್ಲಿಸಿದ್ದರು. ಚಿತ್ರದುರ್ಗದಲ್ಲಿ ಹೆಚ್ಚುವರಿ ಎಸ್‌ಪಿಯಾಗಿ ಕೆಲಸ ಮಾಡಿದ್ದಾರೆ.

2017ನೇ ಸಾಲಿನಲ್ಲಿ ಐಪಿಎಸ್‌ಗೆ ಬಡ್ತಿ ಪಡೆದಿದ್ದಾರೆ. ಇಲ್ಲಿಗೆ ಬರುವ ಮೊದಲು ಗುಪ್ತಚರ ವಿಭಾಗದ ಡಿಸಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಪೊಲೀಸ್ ವರಿಷ್ಠಾಧಿಕಾರಿಯಾಗಿ ಇದು ಪ್ರಥಮ ಜಿಲ್ಲೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.