ಶಿವಮೊಗ್ಗ: ‘ತೀರ್ಥಹಳ್ಳಿ ತಾಲ್ಲೂಕಿನ ಮಹಿಷಿಯ ಉತ್ತರಾದಿ ಮಠದಲ್ಲಿ ₹ 300 ಕೋಟಿ ಕಪ್ಪು ಹಣದ ಸಂಗ್ರಹ ಇದೆ. ಅದನ್ನು ಕದ್ದರೆ ಜೀವನದಲ್ಲಿ ಭರ್ಜರಿಯಾಗಿ ಸೆಟಲ್ ಆಗಬಹುದು’ ಎಂದು ಹೊಂಚು ಹಾಕಿ ದರೋಡೆಗೆ ಮುಂದಾಗಿದ್ದವರು ಈಗ ಮಾಳೂರು ಠಾಣೆ ಪೊಲೀಸರ ಅತಿಥಿಗಳು!
ಉತ್ತರಾದಿ ಮಠದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ 12 ಜನರ ವಿಚಾರಣೆ ನಡೆಸಿದ್ದ ವೇಳೆ ಹೀಗೆ ದಿಢೀರ್ ಶ್ರೀಮಂತರಾಗುವ ಹೊಂಚಿನ ಕೃತ್ಯ ಬೆಳಕಿಗೆ ಬಂದಿದೆ.
ವಿಶೇಷವೆಂದರೆ ರಾತ್ರೋರಾತ್ರಿ ₹ 300 ಕೋಟಿ ಕೊಳ್ಳೆ ಹೊಡೆಯುವ ಭರಾಟೆಯಲ್ಲಿ ಏಪ್ರಿಲ್ 5ರಂದು ಮಚ್ಚು, ಲಾಂಗು ಹಿಡಿದು ಮಠಕ್ಕೆ ನುಗ್ಗಿದ್ದವರಿಗೆ ₹ 50,000 ನಗದು, ಸಿ.ಸಿ.ಟಿವಿ ಕ್ಯಾಮೆರಾ, ಡಿವಿಆರ್, ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್ ಮಾತ್ರ ಸಿಕ್ಕಿದ್ದವು.
ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್, ಕೃತ್ಯದಲ್ಲಿ ಒಟ್ಟು 21 ಜನ ಭಾಗಿಯಾಗಿದ್ದು, ಇನ್ನೂ 9 ಆರೋಪಿಗಳಿಗೆ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದರು.
ಘಟನೆಯ ವಿವರ: ಮಹಿಷಿಯ ಉತ್ತರಾದಿ ಮಠದಲ್ಲಿ ದರೋಡೆ ಮಾಡಲು ಸಂಚು ರೂಪಿಸಿದ್ದವರು ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆಯ ನೇರಲೆ ಸುರೇಶ್ ಹಾಗೂ ಸತೀಶ್. ಅದಕ್ಕಾಗಿ ತಿಂಗಳ ಹಿಂದಿನಿಂದಲೇ ಸಿದ್ಧತೆ ನಡೆಸಿದ್ದರು. ಅವರಿಗೆ ಆನಂದಪುರದಲ್ಲಿ ಮರಗೆಲಸ ಮಾಡುವ ಪೃಥ್ವಿರಾಜ್ ಜೊತೆಯಾಗಿದ್ದ. ನಂತರ ಶಿಕಾರಿಪುರದ ಶ್ರೀನಿವಾಸ್, ಅಭಿ ಸೇರಿದಂತೆ ನಾಲ್ಕೈದು ಜನರ ತಂಡ ರಚಿಸಿಕೊಂಡು ಕೈ ಜೋಡಿಸಿದ್ದರು. ಕೃತ್ಯಕ್ಕೂ ಮುನ್ನ ಮಠಕ್ಕೆ ಭೇಟಿ ನೀಡಿ ಅಲ್ಲಿನ ಪರಿಸರದ ಚಿತ್ರಣ ಪಡೆದಿದ್ದರು ಎಂದು ಅವರು ತಿಳಿಸಿದರು.
ಶಿಕಾರಿಪುರದಿಂದ ದರೋಡೆ ಉದ್ದೇಶಕ್ಕಾಗಿಯೇ ಖರೀದಿಸಿದ್ದ ಟಿ.ಟಿ ವಾಹನದಲ್ಲಿ ಚಾಲಕ ಸೇರಿ 18 ಜನರ ತಂಡ ಆನಂದಪುರ ಆಯನೂರು, ಹಣಗರೆಕಟ್ಟೆ, ಬೆಜ್ಜವಳ್ಳಿ ಮಾರ್ಗವಾಗಿ ಹೊರಟು ರಾತ್ರಿ 9.30ಕ್ಕೆ ಮಠಕ್ಕೆ ತಲುಪಿತ್ತು. ಅಲ್ಲಿದ್ದವರಿಗೆ ಮಾರಕಾಸ್ತ್ರ ತೋರಿಸಿ ಹೆದರಿಸಿ ನಗದು, ಲ್ಯಾಪ್‌ಟಾಪ್ ದೋಚಿದ್ದರು.
ಮಠದಲ್ಲಿದ್ದ ಚಿನ್ನಾಭರಣ ದೇವರಿಗೆ ಸೇರಿದ್ದು, ಪೂಜೆಗೆ ಬಳಸಿರುತ್ತಾರೆ ಎಂಬ ಕಾರಣಕ್ಕೆ ಆಭರಣ ಬಿಟ್ಟು ಹಣ ಮಾತ್ರ ದೋಚಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದು ಮಿಥುನ್‌ಕುಮಾರ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ನೇರಲೆ ಸುರೇಶ್, ಸತೀಶ್, ಪೃಥ್ವಿರಾಜ್, ಶ್ರೀಕಾಂತ್, ಅಭಿ, ರಾಕೇಶ್, ಚಿಟ್ಟೆ ಭರತ್, ಗಿಡ್ಡ ಪವನ್, ರಮೇಶ್, ಡೈಮಂಡ್ ನವೀನ್, ದರ್ಶನ್, ಆರ್. ಕರಿಬಸಪ್ಪ ಬಂಧಿತ ಆರೋಪಿಗಳು ಎಂದು ಅವರು ವಿವರಿಸಿರು. ಎಎಸ್‌ಪಿ ಎ.ಜಿ. ಕಾರಿಯಪ್ಪ, ತೀರ್ಥಹಳ್ಳಿ ಡಿವೈಎಸ್‌ಪಿ ಅರವಿಂದ ಕಲಗುಜ್ಜಿ ಇದ್ದರು.
ಗುಂಡೇಟು ತಿಂದವ ಪೋಕ್ಸೊದಲ್ಲೂ ಆರೋಪಿ
ತನ್ನನ್ನು ಬಂಧಿಸಲು ಬಂದಿದ್ದ ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದ ಆರೋಪಿ ಶ್ರೀನಿವಾಸ್ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆಯಲಾಗಿದೆ. ಆತನ ವಿರುದ್ಧ ಕೊಲೆ ಹಾಗೂ ಪೋಕ್ಸೊ ಪ್ರಕರಣಗಳು ದಾಖಲಾಗಿವೆ. ಅದೇರೀತಿ ಪೃಥ್ವಿರಾಜ್ ವಿರುದ್ಧವೂ ಈ ಹಿಂದೆ ಪೋಕ್ಸೊ ಪ್ರಕರಣ ದಾಖಲಾಗಿತ್ತು ಎಂದು ಎಸ್‌ಪಿ ತಿಳಿಸಿದರು. ಟಿ.ಟಿ. ವಾಹನದ ಚಾಲಕನಿಗೆ ಆರಂಭದಲ್ಲಿ ದರೋಡೆ ಕೃತ್ಯದ ಬಗ್ಗೆ ಮಾಹಿತಿ ಇರಲಿಲ್ಲ. ಮಠದ ಹತ್ತಿರ ಬೆಜ್ಜವಳ್ಳಿ ಬಳಿ ಹೋದಾಗ ಗೊತ್ತಾಗಿದೆ. ಪ್ರತಿರೋಧ ತೋರಿದ ಆತನನ್ನು ಬೆದರಿಸಿ ಕರೆದೊಯ್ಯಲಾಗಿತ್ತು. ಕೃತ್ಯದ ವೇಳೆ ಚಾಲಕ ಮಠದ ಹೊರಗಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಕೃತ್ಯಕ್ಕೆ ಬಳಸಿದ್ದ ₹ 10 ಲಕ್ಷ ಮೌಲ್ಯದ ಟಿ.ಟಿ. ವಾಹನ ಹಾಗೂ ₹ 4 ಲಕ್ಷ ಮೌಲ್ಯದ ಮಹೀಂದ್ರ ಸ್ಕಾರ್ಪಿಯೊ ಕಾರು ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ತನಿಖೆಯಲ್ಲಿ ವಾಸ್ತವಾಂಶ ತಿಳಿಯಲಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.