ADVERTISEMENT

ತೀರ್ಥಹಳ್ಳಿ | ವಿಶೇಷ ಮಕ್ಕಳ ವಸತಿ ಶಾಲೆ ಶೀಘ್ರ ಆರಂಭ: ಸಚಿವ ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 5:53 IST
Last Updated 15 ಸೆಪ್ಟೆಂಬರ್ 2025, 5:53 IST
ತೀರ್ಥಹಳ್ಳಿಯಲ್ಲಿ ಸಚಿವ ಮಧು ಬಂಗಾರಪ್ಪ ವಿಶೇಷ ಮಕ್ಕಳನ್ನು ಮಾತನಾಡಿಸಿದರು
ತೀರ್ಥಹಳ್ಳಿಯಲ್ಲಿ ಸಚಿವ ಮಧು ಬಂಗಾರಪ್ಪ ವಿಶೇಷ ಮಕ್ಕಳನ್ನು ಮಾತನಾಡಿಸಿದರು   

ತೀರ್ಥಹಳ್ಳಿ: ‘ಬುದ್ಧಿಮಾಂದ್ಯ ಮಕ್ಕಳ ಲಾಲನೆ- ಪಾಲನೆ ಮಾಡುವುದು ಪಾಲಕರಿಗೆ ನಿತ್ಯವೂ ಸವಾಲಿನ ಕೆಲಸವಾಗಿದೆ. ಅವರನ್ನು ಸಹಜ ಮಕ್ಕಳಂತೆ ಪರಿವರ್ತಿಸಲು ವಿಶೇಷ ಮಕ್ಕಳ ವಸತಿ ಶಾಲೆ ಆರಂಭಿಸುತ್ತೇವೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಘೋಷಿಸಿದರು.

ಇಲ್ಲಿನ ಸೊಪ್ಪುಗುಡ್ಡೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭಾನುವಾರ ಭೇಟಿ ನೀಡಿ ವಿವಿಧ ದೈಹಿಕ, ಮಾನಸಿಕ ಸಮಸ್ಯೆಗಳಿಗೆ ತುತ್ತಾದ ಮಕ್ಕಳ ಪೋಷಕರೊಂದಿಗೆ ಚರ್ಚೆ ನಡೆಸಿದರು.

‘ವಿಶೇಷ ಮಕ್ಕಳು ಇರುವ ಕಾರಣದಿಂದ ಬಾಡಿಗೆ ಮನೆಗಳಿಗೆ ಪರದಾಡಬೇಕಿದೆ. ವಸತಿ ಶಾಲೆ ಆರಂಭಿಸಿದರೆ ಸಮಸ್ಯೆ ನಿವಾರಣೆಯಾಗುತ್ತದೆ’ ಎಂದು ಪೋಷಕರು ಸಚಿವರ ಗಮನ ಸೆಳೆದರು.

ADVERTISEMENT

‘ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಬೇಕು. ಶಾಲೆ ತೆರೆಯುವ ಸಂಬಂಧ ಸಂಪುಟ ಸಭೆಯಲ್ಲಿ ವಿಷಯ ಮಂಡಿಸುತ್ತೇನೆ. ಕಟ್ಟಡಗಳನ್ನು ಸಾರ್ವಜನಿಕ ದೇಣಿಗೆಯಿಂದ ನಿರ್ಮಿಸಲಾಗುತ್ತದೆ. ಶಾಲೆ ತೆರೆಯಲು ಸೂಕ್ತವಾದ ಸ್ಥಳ ಪರಿಶೀಲಿಸಿ ಇಲಾಖೆಗೆ ವರದಿ ಸಲ್ಲಿಸುವಂತೆ’ ಬಿಇಒ ವೈ.ಗಣೇಶ್‌ ಅವರಿಗೆ ಸೂಚಿಸಿದರು.

‘ಶಿಕ್ಷಕರ ಕುಮಾರ್‌ ಎಚ್.ಸಿ. ನಿವೃತ್ತಿಯಾಗುತ್ತಿದ್ದು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುತ್ತದೆ. ಇಲಾಖೆಯಿಂದ ಸಿಗುವ ಎಲ್ಲಾ ರೀತಿಯ ಸೌಲಭ್ಯ, ಭೌತಿಕ ಸಾಮಗ್ರಿ ಕಲ್ಪಿಸಿಕೊಡಲಾಗುವುದು’ ಎಂದು ತಿಳಿಸಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ, ಎಂಎಡಿಬಿ ಅಧ್ಯಕ್ಷ ಆರ್.ಎಂ ಮಂಜುನಾಥ ಗೌಡ, ಪಟ್ಟಣ ಪಂಚಾಯಿತಿ ಅಧ್ಯಕ್ಷ ರಹಮತ್‌ ಉಲ್ಲಾ ಅಸಾದಿ, ಮುಖಂಡರಾದ ಮುಡುಬ ರಾಘವೇಂದ್ರ, ಆದರ್ಶ ಹುಂಚದಕಟ್ಟೆ, ಅಮರನಾಥ ಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ವಿ.ಅಭಿಷೇಕ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.