ADVERTISEMENT

ಕ್ರೀಡೆಯಲ್ಲಿ ಸಾಧನೆ ಸದಾ ಸ್ಫೂರ್ತಿದಾಯಕ: ಸಚಿವ ಮಧು ಬಂಗಾರಪ್ಪ ಅಭಿಮತ

ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನೆ: ಸಚಿವ ಮಧು ಬಂಗಾರಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 4:37 IST
Last Updated 3 ಸೆಪ್ಟೆಂಬರ್ 2025, 4:37 IST
ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ದಸರಾ ಕ್ರೀಡಾಕೂಟ ಉದ್ಘಾಟನೆ ವೇಳೆ ಶಾಟ್‌ಪಟ್ ಎಸೆದರು
ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ದಸರಾ ಕ್ರೀಡಾಕೂಟ ಉದ್ಘಾಟನೆ ವೇಳೆ ಶಾಟ್‌ಪಟ್ ಎಸೆದರು   

ಶಿವಮೊಗ್ಗ: ಕ್ರೀಡಾ ಕ್ಷೇತ್ರ ಸೇರಿದಂತೆ ಯಾವುದೇ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಎಂದಿಗೂ ವಿಶೇಷ ಗೌರವವಿದೆ. ಅವರು ಸದಾ ಸ್ಫೂರ್ತಿದಾಯಕರಾಗಿರುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.

ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ದಸರಾ ಕ್ರೀಡಾಕೂಟದಲ್ಲಿ ವಯಸ್ಸಿನ ಮಿತಿ ಇಲ್ಲ. ಎಲ್ಲ ವಯೋಮಾನದವರೂ ಭಾಗವಹಿಸಬಹುದು. ಮಕ್ಕಳಿಗೆ ಸ್ಫೂರ್ತಿಯಾಗುವಂತೆ ವಯಸ್ಸಾದವರು ಸ್ಪರ್ಧಿಸುತ್ತಿರುವುದು ಸಂತಸದ ವಿಷಯ. ಈ ಕ್ರೀಡಾಕೂಟದ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು. ಜಿಲ್ಲೆಯಲ್ಲಿ 5 ಸಾವಿರ ಕ್ರೀಡಾಪಟುಗಳು ಭಾಗವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕ್ರೀಡಾಪಟುಗಳು ಪಾಲ್ಗೊಳ್ಳಬೇಕು ಎಂದರು.

ADVERTISEMENT

ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಮಾತನಾಡಿ, ಜನ ವೈದ್ಯರಲ್ಲಿ ಹಸಿವು, ಜೀರ್ಣ, ನಿದ್ರೆ, ಸೇರಿದಂತೆ ಎಲ್ಲದಕ್ಕೂ ಮಾತ್ರೆ ಬೇಕೆಂದು ಕೇಳುತ್ತಾರೆ. ಈ ಎಲ್ಲ ಸಮಸ್ಯೆಗಳಿಗೆ ಕಾರಣ ಜೀವನಶೈಲಿ. ಹೀಗಾಗಿ ವೈದ್ಯರಿಂದ ದೂರ ಇರಲು ಕ್ರೀಡೆಗಳಲ್ಲಿ ಭಾಗವಹಿಸಬೇಕು. ಒಂದು ಗಂಟೆ ಆಟ ಆಡಿದರೆ 200 ರಿಂದ 500 ಕ್ಯಾಲರಿ ಕಡಿಮೆ ಮಾಡಿಕೊಳ್ಳಬಹುದು. ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಆರೋಗ್ಯ ವೃದ್ಧಿಯಾಗುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಮಾತನಾಡಿ, ವಯಸ್ಸಿನ ಮಿತಿ ಇಲ್ಲದೆ ನಾವೆಲ್ಲ ಒಂದೇ ಎಂಬ ಭಾವನೆ ಬೆಳೆಸುವ ಉದ್ದೇಶದಿಂದ ನಮ್ಮ ಹಿರಿಯರು ದಸರಾ ಕ್ರೀಡಾಕೂಟ ಆರಂಭಿಸಿದ್ದಾರೆ. ಕ್ರೀಡೆಯಿಂದ ನಮ್ಮ ದೇಹದ ಅಂಗಗಳು ಚುರುಕಾಗಿ ಆರೋಗ್ಯಯುತವಾಗಿರಲು ಸಾಧ್ಯವಾಗುತ್ತದೆ ಎಂದರು.

ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಮಾತನಾಡಿ, ನಮ್ಮನ್ನೆಲ್ಲ ಆರೋಗ್ಯವಂತರನ್ನಾಗಿ, ಯುವಕರನ್ನಾಗಿ ಇಡುವ ಶಕ್ತಿ ಕ್ರೀಡೆಗೆ ಇದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಹಳೆಯ ಗ್ರಾಮೀಣ ಕ್ರೀಡೆಗಳು ಈಗಿನ ಮಕ್ಕಳಿಗೆ ಗೊತ್ತಿಲ್ಲ. ಈ ಆಟಗಳ ನಾಶಕ್ಕೆ ಕಾರಣ ನಾವೇ ಆಗಿದ್ದು, ಅವುಗಳ ಪರಿಚಯ ಅವರಿಗೆ ಮಾಡಿಸಿ, ಆಡಲು ಪ್ರೋತ್ಸಾಹಿಸಬೇಕು ಎಂದರು.

ಸೊರಬ ತಾಲ್ಲೂಕಿನ ತಲ್ಲೂರು ಗ್ರಾಮದ ಹಾಕಿ ಆಟಗಾರ ಸುನಿಲ್ ಬರ್ಲಿನ್‌ನಲ್ಲಿ ಈಚೆಗೆ ನಡೆದ ಅಂತರಾಷ್ಟ್ರೀಯ ಬಾಲಕರ ಜ್ಯೂನಿಯರ್ ಹಾಕಿ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ ಇದ್ದರು.

‘ಶಿಕ್ಷಣ ಇಲಾಖೆ ಕುರಿತ ಪೋಸ್ಟ್; ನೈತಿಕತೆ ಏನು?’

ಶಿವಮೊಗ್ಗ: ಬಿ.ಎಸ್‌.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ಬಿಜೆಪಿ ಅಧಿಕಾರದ ವೇಳೆ ರಾಜ್ಯದಲ್ಲಿ ಬರೀ 4370 ಶಿಕ್ಷಕರ ನೇಮಕ ಮಾಡಿಕೊಂಡಿದ್ದಾರೆ. ನಾನು ಶಿಕ್ಷಣ ಸಚಿವನಾದ 10 ತಿಂಗಳಲ್ಲಿಯೇ 13500 ಶಿಕ್ಷಕರ ನೇಮಕ ಮಾಡಿಕೊಂಡಿದ್ದೇನೆ. ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ರಾಜ್ಯದಲ್ಲಿ ಶಿಕ್ಷಣ ಇಲಾಖೆ ವೈಫಲ್ಯ ಕಂಡಿದೆ ಎಂದು ಪೋಸ್ಟ್ ಹಾಕಿಕೊಳ್ಳಲು ಯಾವ ನೈತಿಕತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಪ್ರಶ್ನಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬಿಜೆಪಿ ಅವಧಿಯಲ್ಲಿ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಬರೀ ₹300 ಕೋಟಿ ಕೊಟ್ಟು ₹1100 ಕೋಟಿ ಬಾಕಿ ಉಳಿಸಿ ಹೋಗಿದ್ದರು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಆ ಹಣ ಪಾವತಿಸಲಾಗಿದೆ. 2018ರಿಂದ ಕೆಪಿಎಸ್ ಶಾಲೆ ಸ್ಥಾಪನೆ ಆರಂಭವಾಗಿದ್ದು ಮೂರೂವರೆ ವರ್ಷಗಳಲ್ಲಿ ಬಿಜೆಪಿಯವರು ಬರೀ 308 ಕೆಪಿಎಸ್‌ ಶಾಲೆಗಳನ್ನು ಆರಂಭಿಸಿದ್ದರು. ಆದರೆ ನಾವು (ಕಾಂಗ್ರೆಸ್) 800 ಕೆಪಿಎಸ್‌ ಶಾಲೆಗಳನ್ನು ಆರಂಭಿಸುತ್ತಿದ್ದೇವೆ. ಇನ್ನೂ 18500 ಶಿಕ್ಷಕರ ನೇಮಕಕ್ಕೆ ಸಿದ್ಧತೆ ನಡೆಸಿದ್ದೇನೆ. ರಾಘವೇಂದ್ರ ಅವರಿಗೆ ನನ್ನನ್ನು ವೈಯಕ್ತಿಕವಾಗಿ ಟೀಕೆ ಮಾಡಲು ಏನು ಅರ್ಹತೆ ಇದೆ. ಬದಲಿಗೆ ಮತಗಳ್ಳತನದ ಬಗ್ಗೆ ಮಾತನಾಡಲಿ. ಮತಕಳ್ಳತನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಿಜೆಪಿಯವರು ಹಾಳು ಮಾಡಿದ್ದಾರೆ. ಪಕ್ಷದಿಂದ ಸೂಚನೆ ಬಂದಿದ್ದು ಮತಗಳ್ಳನದ ವಿಚಾರವನ್ನು ಗ್ರಾಮ ಪಂಚಾಯ್ತಿ ಮಟ್ಟಕ್ಕೆ ಕೊಂಡೊಯ್ದು ಜನರಿಗೆ ಸತ್ಯಸಂಗತಿ ತಿಳಿಸಲಿದ್ದೇವೆ ಎಂದರು.

ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್ ಕಮಿಷನ್ ವಿಚಾರ ಮಾತನಾಡಿದ ಆಡಿಯೊ ವೈರಲ್ ಆಗಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಸತ್ಯ ಗೆಲ್ಲುತ್ತದೆ. ಮುಖ್ಯಮಂತ್ರಿ ಆ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ಎಂದರು. ಅತಿವೃಷ್ಟಿಯ ಕಾರಣ ಜಿಲ್ಲೆಯಲ್ಲಿ ಅಡಿಕೆಗೆ ಕೊಳೆ ರೋಗ ಹೆಚ್ಚಳಗೊಂಡಿದೆ. ಸ್ವತಃ ನನ್ನ ತೋಟವೂ ರೋಗ ಬಾಧೆಗೊಳಗಾಗಿದೆ. ಸಮೀಕ್ಷೆ ನಡೆಸಿ ಬಾಧಿತ ಪ್ರದೇಶದ ಪಟ್ಟಿ ಸಿದ್ಧಪಡಿಸುವಂತೆ ತೋಟಗಾರಿಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ರಾಜ್ಯ ಸರ್ಕಾರದಿಂದ ಅಗತ್ಯ ನೆರವು ಕೊಡಿಸಲಾಗುವುದು. ಅಡಿಕೆ ಬೆಳೆಗಾರರಿಗೆ ನೆರವು ನೀಡುವುದು ಕೇಂದ್ರ ಹಾಗೂ ರಾಜ್ಯ ಎರಡೂ ಸರ್ಕಾರಗಳ ಜವಾಬ್ದಾರಿ. ಆದರೆ ಎಲೆಚುಕ್ಕಿ ರೋಗಕ್ಕೆ ಕೇಂದ್ರ ಸರ್ಕಾರ ಹೆಕ್ಟೇರ್‌ಗೆ ಬರೀ ₹1200 ಕೊಟ್ಟಿದೆ.

ಈ ಬಗ್ಗೆ ಸಂಸದರು ಲೋಕಸಭೆಯಲ್ಲಿ ಏಕೆ ಪ್ರಸ್ತಾಪಿಸುವುದಿಲ್ಲ. ಅಡಿಕೆಗೆ ಜಿಲ್ಲೆಯಲ್ಲಿ ಸಂಗ್ರಹವಾಗುವ ಜಿಎಸ್‌ಟಿಯಲ್ಲಿ ಒಂದು ಭಾಗ ಕೊಟ್ಟರೂ ಬೆಳೆಗಾರರಿಗೆ ನೆರವಾಗಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್‌ಬಾನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಪ್ರಮುಖರಾದ ಡಾ.ಶ್ರೀನಿವಾಸ ಕರಿಯಣ್ಣ ಕಲಗೋಡು ರತ್ನಾಕರ್ ರಮೇಶ್ ಹೆಗ್ಡೆ ಜಿ.ಡಿ. ಮಂಜುನಾಥ್ ಎಸ್.ಪಿ. ಶೇಷಾದ್ರಿ ಇಕ್ಕೇರಿ ರಮೇಶ್ ಕಲೀಂಪಾಷಾ ರಮೇಶ್ ಶಂಕರಘಟ್ಟ ಶರತ್ ಮರಿಯಪ್ಪ ಆರ್. ರಾಜಶೇಖರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.