ADVERTISEMENT

ಶಿವಮೊಗ್ಗದಲ್ಲಿ ಸುಸಜ್ಜಿತ ಕ್ರೀಡಾಗ್ರಾಮ ನಿರ್ಮಾಣ: ಸಂಸದ ಬಿ.ವೈ. ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 12:06 IST
Last Updated 16 ಡಿಸೆಂಬರ್ 2020, 12:06 IST

ಶಿವಮೊಗ್ಗ: ತ್ಯಾವರೆಕೊಪ್ಪದ ಸರ್ವೆ ನಂಬರ್ 50ರ 30 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಕ್ರೀಡಾಗ್ರಾಮ ನಿರ್ಮಿಸಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಕೇಂದ್ರ ಸರ್ಕಾರದ ಖೇಲೊ ಇಂಡಿಯಾ ಯೋಜನೆಯಲ್ಲಿ ಕ್ರೀಡಾ ಗ್ರಾಮ ನಿರ್ಮಾಣವಾಗಲಿದೆ. ಹಿಂದೆ ಕೆ.ಎಸ್.ಈಶ್ವರಪ್ಪ ಅವರು ಕ್ರೀಡಾ ಸಚಿವರಾಗಿದ್ದಾಗ ಈ ಪ್ರಸ್ತಾವ ಕಳುಹಿಸಿದ್ದರು. ನಿರಂತರ ಪ್ರಯತ್ನದ ಫಲವಾಗಿ ಈಗ ಭಾರತೀಯ ಕ್ರೀಡಾ ಪ್ರಾಧಿಕಾರದ ಕುರಿಯನ್ ಮ್ಯಾಥ್ಯೂ, ಹರೀಶ್, ಸುರೇಶ್ ಮತ್ತು ಅಸುತೋಷ್ ಘೋಷ್ ಅವರ ತಂಡ ಕ್ರೀಡಾ ಗ್ರಾಮದ ಸ್ಥಳ ವೀಕ್ಷಣೆಗೆ ಆಗಮಿಸಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ವಿಮಾನ ನಿಲ್ದಾಣ, ರೈಲುನಿಲ್ದಾಣ, ಬಸ್‌ನಿಲ್ದಾಣ, ತರಬೇತಿಗಾಗಿ ಬಳಸಲಾಗುತ್ತಿರುವ ನೆಹರೂ ಕ್ರೀಡಾಂಗಣ, ಉದ್ದೇಶಿತ ಕ್ರೀಡಾ ಗ್ರಾಮಕ್ಕಿರುವ ಅಂತರ, ಸೌಲಭ್ಯಗಳು ಮತ್ತಿತರ ವಿವರಗಳನ್ನು ತಂಡಕ್ಕೆ ಒದಗಿಸಲಾಗಿದೆ. ಬಹು ದಿನಗಳ ಕನಸು ಶೀಘ್ರ ಸಾಕಾರಗೊಳ್ಳುವ ನಿರೀಕ್ಷೆ ಇದೆ ಎಂದರು.

ADVERTISEMENT

ಕ್ರೀಡಾ ಗ್ರಾಮಕ್ಕೆ ಅಗತ್ಯವಿರುವ ಅನುದಾನ ಪ್ರಸಕ್ತ ಸಾಲಿನಲ್ಲೇ ಬಿಡುಗಡೆಗೊಳಿಸಲು ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ. ಸಹ್ಯಾದ್ರಿ ಕಾಲೇಜಿನ ಅಭಿವೃದ್ಧಿ ಕಾರ್ಯಗಳಿಗೆ ಸಲ್ಲಿಸಲಾದ ₹ 8.50 ಕೋಟಿಯಲ್ಲಿ ₹ 4 ಕೋಟಿ ಬಿಡುಗಡೆಯಾಗಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ತಲಾ ₹ 3 ಕೋಟಿ ಬಿಡುಗಡೆಗೊಳಿಸುವಂತೆ ಮನವಿ ಮಾಡಲಾಗಿದೆ ಎಂದರು.

ಕ್ರೀಡಾ ಗ್ರಾಮದಲ್ಲಿ ಅಥ್ಲೆಟಿಕ್, ವಾಲಿಬಾಲ್, ಫುಟ್‌ಬಾಲ್, ಹಾಕಿ, ಜೂಡೊ, ಕುಸ್ತಿ ಸ್ಪರ್ಧೆಗಳಿಗೆ ಅವಕಾಶ ಕಲ್ಪಿಸಲಾಗುವುದು. ಜಿಲ್ಲೆಯ ಕ್ರೀಡಾ ಸಾಧಕರ ಶ್ರಮ ಪರಿಗಣಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮೇಯರ್‌ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರುಳೀಧರ್, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ್, ‘ಸೂಡಾ’ ಅಧ್ಯಕ್ಷ ಜ್ಯೋತಿ ಪ್ರಕಾಶ್, ಕೈಗಾರಿಕಾ ನಿಗಮದ ಉಪಾಧ್ಯಕ್ಷ ಎಸ್‌.ದತ್ತಾತ್ರಿ, ಪಾಲಿಕೆ ಸದಸ್ಯರಾದ ಜ್ಞಾನೇಶ್ವರ, ಚನ್ನಬಸಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.