ADVERTISEMENT

ಕೊರೊನಾ ವಿರುದ್ಧ ದೀರ್ಘ ಸಮರ, ಏಳೆಂಟು ತಿಂಗಳು ಅಗತ್ಯ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 2 ಮೇ 2020, 13:44 IST
Last Updated 2 ಮೇ 2020, 13:44 IST
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಕೋವಿಡ್‌ ಕೇಂದ್ರಕ್ಕೆ ಶನಿವಾರ ಸಚಿವ ಶ್ರೀಮಲು ಭೇಟಿ ನೀಡಿ ಪರಿಶೀಲಿಸಿದರು.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಕೋವಿಡ್‌ ಕೇಂದ್ರಕ್ಕೆ ಶನಿವಾರ ಸಚಿವ ಶ್ರೀಮಲು ಭೇಟಿ ನೀಡಿ ಪರಿಶೀಲಿಸಿದರು.   

ಶಿವಮೊಗ್ಗ: ಕೊರೊನಾ ವಿರುದ್ಧದ ಸಮರ ದೀರ್ಘಕಾಲದ ಕಾರ್ಯಾಚರಣೆ. ಇನ್ನೂ ಏಳೆಂಟು ತಿಂಗಳು ಕೊರೊನಾ ಜತೆ ಬದುಕು ಸಾಗಬೇಕಿದೆ. ಅದಕ್ಕಾಗಿ ಎಲ್ಲರೂ ಮಾನಸಿಕವಾಗಿ ಸಿದ್ಧರಾಗಬೇಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿಕೊರೊನಾ ಹಾಗೂ ಕೆಎಫ್‍ಡಿ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು.

ಕೊರೊನಾ ರೋಗಿಗಳಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆಯ ಪರೀಕ್ಷೆ ನಡೆದಿದೆ.ಪ್ರಯೋಗಯಶಸ್ವಿಯಾದರೆ ಎಲ್ಲಾ ಜಿಲ್ಲೆಗಳಲ್ಲೂ ಅನುಸರಿಸಲಾಗುವುದು. ಎಲ್ಲ ಜಿಲ್ಲೆಗಳ ರಕ್ತನಿಧಿಗಳಲ್ಲೂ ರಕ್ತ ಸಂಗ್ರಹ ಕಡಿಮೆಯಾಗಿದೆ. ನೆರವು ನೀಡಲು ದಾನಿಗಳನ್ನು ಕೋರಲಾಗಿದೆ. ಎಲ್ಲೆಡೆ ರಕ್ತದಾನ ಶಿಬಿರ ಆಯೋಜಿಸಲು ಕೋರಲಾಗಿದೆ ಎಂದರು.

ADVERTISEMENT

ಜಿಲ್ಲೆಯಲ್ಲಿ ಒಂದೂ ಪ್ರಕರಣ ಪತ್ತೆಯಾಗಿಲ್ಲ. ಹಸಿರು ವಲಯದಲ್ಲಿದೆ ಎಂದು ಯಾರೂ ಮೈಮರೆಯಬಾರದು. ಸಾರ್ವಜನಿಕ ಸ್ಥಳಗಳಲ್ಲಿ, ಅಗತ್ಯ ವಸ್ತುಗಳ ಖರೀದಿ ವೇಳೆ ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳಬೇಕು. ಅಗತ್ಯವಿಲ್ಲದ ಸಮಯದಲ್ಲಿ ಮನೆಯಲ್ಲೇ ಇರಬೇಕು ಎಂದು ಕಿವಿಮಾತು ಹೇಳಿದರು.

ಬಾಕಿ ವೇತನ ಪಾವತಿಗೆ ಕ್ರಮ:

ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಬಾಕಿ ವೇತನ ಪಾವತಿಸಲು ₹80 ಕೋಟಿ ಬಿಡುಗಡೆ ಮಾಡಲಾಗಿದೆ. ಇದೇ ರೀತಿ ವೈದ್ಯರು ಹಾಗೂವಿವಿಧ ಹಂತದ ಸಿಬ್ಬಂದಿ ಮಧ್ಯೆಇರುವ ವೇತನ ತಾರತಮ್ಯ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. 2,500 ವೈದ್ಯರ ನೇಮಕಾತಿ ಮಾಡಲಾಗುವುದು. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್,ಲಾಕ್‍ಡೌನ್ ಅವಧಿಯಲ್ಲಿ 842 ವಲಸೆ ಕಾರ್ಮಿಕರಿಗೆ ಜಿಲ್ಲೆಯ 20ಸ್ಥಳಗಳಲ್ಲಿವಸತಿ ಕಲ್ಪಿಸಲಾಗಿದೆ. ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಬಯಸಿದವರಿಗೆ ಜಿಲ್ಲಾಡಳಿತದ ವೆಚ್ಚದಲ್ಲೇಅವರ ಸ್ವಂತ ಊರುಗಳಿಗೆ ಕಳುಹಿಸಲಾಗುತ್ತಿದೆ ಎಂದರು.

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕರಾದ ಅರಗ ಜ್ಞಾನೇಂದ್ರ, ಹರತಾಳು ಹಾಲಪ್ಪ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್‌, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.