ADVERTISEMENT

ಬೆಳಕು ನೀಡದ ರಾಜ್ಯ ಹೆದ್ದಾರಿ ದೀಪಗಳು

ಆನವಟ್ಟಿ: ಮುಖ್ಯರಸ್ತೆಯಲ್ಲಿ ಕತ್ತಲೆಯಲ್ಲೇ ಓಡಾಡುವ ಸ್ಥಿತಿ; ಭಯದಲ್ಲಿ ಸಂಚರಿಸುವ ಮಹಿಳೆಯರು

ರವಿ.ಆರ್ ತಿಮ್ಮಾಪುರ
Published 4 ಸೆಪ್ಟೆಂಬರ್ 2021, 3:53 IST
Last Updated 4 ಸೆಪ್ಟೆಂಬರ್ 2021, 3:53 IST
ಆನವಟ್ಟಿಯ ಮುಖ್ಯರಸ್ತೆಯಲ್ಲಿರುವ ಶಾಲೆ, ಕೆಇಬಿ, ಪ್ರವಾಸಿ ಮಂದಿರಗಳ ಮುಂದೆ ರಾತ್ರಿ ನಿರ್ಜನ ಪ್ರದೇಶದಲ್ಲಿ ಬೀದಿದೀಪಗಳು ಇಲ್ಲದೆ ಕತ್ತಲೆ ಆವರಿಸಿರುವುದು (ಎಡಚಿತ್ರ). ಆನವಟ್ಟಿಯ ರಾಜ್ಯ ಹೆದ್ದಾರಿ ವಿಭಜಕಗಳ ಮಧ್ಯೆ ಆಳವಡಿಸಿರುವ ವಿದ್ಯುತ್‌ ದೀಪಗಳು
ಆನವಟ್ಟಿಯ ಮುಖ್ಯರಸ್ತೆಯಲ್ಲಿರುವ ಶಾಲೆ, ಕೆಇಬಿ, ಪ್ರವಾಸಿ ಮಂದಿರಗಳ ಮುಂದೆ ರಾತ್ರಿ ನಿರ್ಜನ ಪ್ರದೇಶದಲ್ಲಿ ಬೀದಿದೀಪಗಳು ಇಲ್ಲದೆ ಕತ್ತಲೆ ಆವರಿಸಿರುವುದು (ಎಡಚಿತ್ರ). ಆನವಟ್ಟಿಯ ರಾಜ್ಯ ಹೆದ್ದಾರಿ ವಿಭಜಕಗಳ ಮಧ್ಯೆ ಆಳವಡಿಸಿರುವ ವಿದ್ಯುತ್‌ ದೀಪಗಳು   

ಆನವಟ್ಟಿ: ಇಲ್ಲಿನ ರಾಜ್ಯ ಹೆದ್ದಾರಿ ವಿಭಜಕಗಳ ಮಧ್ಯೆ ಅಳವಡಿಸಿರುವ ವಿದ್ಯುತ್ ದೀಪಗಳ ಕಾಮಗಾರಿ ಪೂರ್ಣಗೊಂಡಿದ್ದರೂ ಉದ್ಘಾಟನೆ ಭಾಗ್ಯ ಕಾಣದೆ ಇರುವುದರಿಂದ ಕತ್ತಲೆಯಲ್ಲೇ ಮುಖ್ಯರಸ್ತೆಯಲ್ಲಿ ಓಡಾಡುವುದು ಆನವಟ್ಟಿ ಪಟ್ಟಣ ನಿವಾಸಿಗಳಿಗೆ ಅನಿವಾರ್ಯವಾಗಿದೆ.

ಆನವಟ್ಟಿ ರಾಜ್ಯ ಹೆದ್ದಾರಿ ಕಾಮಗಾರಿ ಶುರುವಾದಾಗಿನಿಂದ ಅಪಘಾತಗಳು ಸಂಭವಿಸುತ್ತಲೇ ಇವೆ. ಅದರಲ್ಲೂ ರಾತ್ರಿ ವೇಳೆ ಭೀಕರ ಅಪಘಾತಗಳು ಸಂಭವಿಸುತ್ತಿವೆ. ವಿದ್ಯುತ್ ದೀಪದ ಬೆಳಕು ಇಲ್ಲದೆ ಇರುವುದರಿಂದ ಪಾದಚಾರಿಗಳು ಸಂಚಾರ ಮಾಡುವುದು ಕಷ್ಟಸಾಧ್ಯವಾಗಿದೆ.

ಪಟ್ಟಣದಲ್ಲಿರುವ ಬಟ್ಟೆ ಅಂಗಡಿ, ಕಂಪ್ಯೂಟರ್ ಶಾಪ್ ಸೇರಿ ಹಲವು ವಿಭಾಗಗಳಲ್ಲಿ ಮಹಿಳೆಯರು ಹೆಚ್ಚಾಗಿ ಕೆಲಸ ಮಾಡುತ್ತಿದ್ದು, ರಾತ್ರಿ 8ರವರೆಗೆ ತಿಮ್ಮಾಪುರ, ಕೋಟಿಪುರ, ನೇರಲಗಿ ಗ್ರಾಮಗಳಿಗೆ ನಡೆದುಕೊಂಡೇ ಹೋಗುತ್ತಾರೆ. ರಸ್ತೆ ಪಕ್ಕದಲ್ಲೇ ವಿಶಾಲವಾದ ಕೆಪಿಎಸ್‍ಸಿ ಶಾಲೆ ಆವರಣ, ಕೆಇಬಿ ಆವರಣ ಇವೆ. ಆನವಟ್ಟಿಯಿಂದ ಕೋಟಿಪುರ ಮಧ್ಯೆ ಬರುವ ಕೆರೆ ಏರಿ ನಿರ್ಜನ ಪ್ರದೇಶವಾಗಿದ್ದು, ಅದನ್ನು ದಾಟಿ ಮಹಿಳೆಯರು ತಮ್ಮ ಮನೆಗಳಿಗೆ ಹೋಗಬೇಕು. ಕೆಲವು ಕಿಡಿಗೇಡಿಗಳು ರಾತ್ರಿ ವೇಳೆ ಹೆಚ್ಚು ವೇಗವಾಗಿ ದ್ವಿಚಕ್ರ ವಾಹನಗಳನ್ನು ಓಡಿಸುತ್ತಾರೆ. ಪಾದಚಾರಿಗಳ ಪಕ್ಕದಲ್ಲೇ ಚಲಿಸುತ್ತಾರೆ. ಇದರಿಂದಾಗಿ ರಾತ್ರಿ ವೇಳೆ ಆತಂಕದಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಮಹಿಳಾ ಉದ್ಯೋಗಿಗಳು.

ADVERTISEMENT

ಕೋಟಿಪುರ ದೇಗುಲದ ರಸ್ತೆಗೆ ಬೃಹತ್ ವಿದ್ಯುತ್ ದೀಪ ಆಳವಡಿಸಿ: ‘ಪ್ರವಾಸಿ ತಾಣವಾಗಿರುವ ಕೋಟಿಪುರದ ಕೈಟಬೇಶ್ವರ ದೇವಸ್ಥಾನ ಹಾಗೂ ಪಟ್ಟಣದ ವಿಶಾಲವಾದ ಅವಳಿ ಕೆರೆಗಳಾದ ಕುಬಟೂರು ದೊಡ್ಡ ಕೆರೆ, ಆನವಟ್ಟಿಯ ತಾವರೆಕೆರೆ ಮಧ್ಯೆ ರಾಜ್ಯ ಹೆದ್ದಾರಿ ಇದ್ದು, ಜನರ ವಿಹಾರಕ್ಕೆ ಅನುಕೂಲವಾಗಿದೆ.
ರಾತ್ರಿ ವೇಳೆ ಕೆರೆ ಏರಿ ಮೇಲೆ ಕಸದ ರಾಶಿ ಸುರಿಯುತ್ತಿದ್ದು, ವಿದ್ಯುತ್
ದೀಪ ಇಲ್ಲದ ಕಾರಣ ಕಸ ಹಾಕುವವರನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಶಿವರಾತ್ರಿ ಸೇರಿ ವಿಶೇಷ ಪೂಜೆಗಳು ಇದ್ದಾಗ ರಾತ್ರಿ ವೇಳೆ ಹೆಚ್ಚು ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ. ಹಾಗಾಗಿ ಆನವಟ್ಟಿಯ ಜೋಡಿಕಟ್ಟೆಯಿಂದ ನೇರಲಗಿ ಕ್ರಾಸ್‌ವರೆಗೆ ಬೃಹತ್ ವಿದ್ಯುತ್ ದೀಪಗಳನ್ನು ಅಳವಡಿಸಬೇಕು. ಈ ಹಿಂದೆ ಸಂಸದರಿಗೆ ಮನವಿ ಸಲ್ಲಿಸಿದ್ದೇವೆ. ಆದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ರಾಕೇಶ್
ಗುತ್ತೇರ್.

‘ರಸ್ತೆ ವಿಸ್ತರಣೆ ಕಾಮಗಾರಿ ಶುರುವಾದಾಗಿನಿಂದ ಮಧ್ಯ ರಸ್ತೆಯಿಂದ 50 ಅಡಿ ದೂರದಲ್ಲಿ ಸಣ್ಣ ಎಲ್‍ಇಡಿ ಬಲ್ಪ್‌ಗಳನ್ನು ಹಾಕಲಾಗಿದೆ. ಅವು ರಸ್ತೆ ಮೇಲೆ ಬೆಳಕು ಚೆಲ್ಲುವುದಿಲ್ಲ. ವಿದ್ಯಾರ್ಥಿನಿನಿಲಯಗಳು ರಸ್ತೆ ಪಕ್ಕದಲ್ಲೇ ಇದ್ದು, ಸುರಕ್ಷತೆಯ ದೃಷ್ಟಿಯಿಂದ ಆದಷ್ಟು ಬೇಗ ವಿದ್ಯುತ್ ದೀಪಗಳು ಬೆಳಗುವಂತೆ ಮಾಡಬೇಕು’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಧುಕೇಶ್ವರ ಪಾಟೀಲ್.

‘ಆನವಟ್ಟಿ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ಬೃಹತ್ ವಾಹನಗಳ ಸಂಚಾರ ಹೆಚ್ಚಾಗಿದೆ. ವಾಹನ ಚಾಲಕರು ಹೆಡ್‌ಲೈಟ್‍ ಅನ್ನು ಡಿಮ್ ಅಂಡ್ ಡಿಪ್ ಮಾಡುವುದಿಲ್ಲ. ದ್ವಿಚಕ್ರ ವಾಹನ ಸವಾರರ ಕಣ್ಣಿಗೆ ನೇರವಾಗಿ ಬೆಳಕು ಬೀಳುವುದರಿಂದ ಮುಂದಿನ ದಾರಿ ಕಾಣದಂತೆ ಆಗುತ್ತದೆ. ಇದರಿಂದ ಅಪಘಾತ ಸಂಭವಿಸುತ್ತವೆ. ಹಾಗಾಗಿ, ಆದಷ್ಟು ಬೇಗ ರಾಜ್ಯ ಹೆದ್ದಾರಿಯ ವಿದ್ಯುತ್ ದೀಪಗಳ ಉದ್ಘಾಟನೆ ಆಗಬೇಕು’ ಎನ್ನುತ್ತಾರೆ ದ್ವಿಚಕ್ರ ವಾಹನ ಸವಾರ ಮಾಲತೇಶ ವೈ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.