ADVERTISEMENT

ಹೊಸನಗರ: ಬೀದಿ ನಾಯಿ, ಮಂಗಗಳ ಹಾವಳಿ ತಡೆಗೆ ಒತ್ತಾಯ

ಪ.ಪಂ. ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 6:27 IST
Last Updated 9 ಅಕ್ಟೋಬರ್ 2021, 6:27 IST
ಹೊಸನಗರ ಪಟ್ಟಣ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು
ಹೊಸನಗರ ಪಟ್ಟಣ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು   

ಹೊಸನಗರ: ಹೊಸನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳು ಮತ್ತು ಮಂಗಗಳ ಹಾವಳಿ ಹೆಚ್ಚಾಗಿದೆ. ಇದರಿಂದ ನಿವಾಸಿಗಳು ತೊಂದರೆ ಪಡುವಂತಾಗಿದೆ. ತಕ್ಷಣ ಟೆಂಡರ್ ಕರೆದು ಅವುಗಳನ್ನು ಹಿಡಿಸಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಹಾಲಗದ್ದೆ ಉಮೇಶ್ ಒತ್ತಾಯಿಸಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

‘ಮೂರು ತಿಂಗಳಿಂದ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಬೆಳಿಗ್ಗೆ ವಾಯುವಿಹಾರಕ್ಕೆ ಹೋಗುವಾಗ ನನಗೆ ಬೀದಿ ನಾಯಿ ಕಚ್ಚಿದೆ. ವಯೋವೃದ್ಧರು, ಮಕ್ಕಳು ಬೆಳಿಗ್ಗೆ ವಾಯುವಿಹಾರಕ್ಕೆ ಹೋಗುತ್ತಾರೆ. ಬೀದಿ ನಾಯಿಗಳ ಹಾವಳಿಯಿಂದ ಮುಖ್ಯ ರಸ್ತೆಗಳಲ್ಲಿ ವಾಹನ ಸಾವರರು ಬಿದ್ದು ಗಾಯಗೊಂಡಿರುವ ಹಲವು ನಿದರ್ಶನಗಳಿವೆ. ಮನೆಗಳಿಗೆ ಮಂಗಗಳು ಬಂದು ದಾಳಿ ಮಾಡುತ್ತಿವೆ. ಇವುಗಳನ್ನು ಹಿಡಿಯಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಪಟ್ಟಣ ಪಂಚಾಯಿತಿ ಸದಸ್ಯ ಗುರುರಾಜ್, ‘ನಾಯಿ ಹಾಗೂ ಮಂಗಗಳನ್ನು ಹಿಡಿಯಲು ಯಾರೂ ಮುಂದೆ ಬರುತ್ತಿಲ್ಲ. ಟೆಂಡರ್ ಕರೆದು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಪಟ್ಟಣ ಅಭಿವೃದ್ಧಿ ಪಡಿಸಿ: ‘ಚುನಾವಣೆ ವೇಳೆ ಬಿಜೆಪಿ ಹೋಗಿ ಉಪಾಧ್ಯಕ್ಷರಾಗಿರುವ ಕೃಷ್ಣವೇಣಿ ಅವರು ಪಟ್ಟಣವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನತ್ತ ಯೋಚಿಸಬೇಕು. ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಬಿಜೆಪಿ ಸರ್ಕಾರವಿದೆ. ಪಟ್ಟಣವನ್ನು ಅಭಿವೃದ್ಧಿ ಪಡಿಸಲು ಬಿಜೆಪಿಗೆ ಹೋಗಿದ್ದೆ ಎಂದು ಹಿಂದೆ ಹೇಳಿದ್ದೀರಿ. ಈಗ ಅನುದಾನ ತರುವ ಬಗ್ಗೆ ಯೋಚಿಸಿ’ ಎಂದು ಸದಸ್ಯ ಹಾಲಗದ್ದೆ ಉಮೇಶ್ ಉಪಾಧ್ಯಕ್ಷೆ ಕೃಷ್ಣವೇಣಿ ಅವರನ್ನು ಕೆಣಕಿದರು.

ಇದಕ್ಕೆ ಉತ್ತರಿಸಿದ ಬಿಜೆಪಿ ಸದಸ್ಯ ಸುರೇಂದ್ರ ಕೋಟ್ಯಾನ್, ‘ನೀವು ಜೆಡಿಎಸ್‌ನಲ್ಲಿದ್ದು, ಈಗ ಕಾಂಗ್ರೆಸ್ ಜತೆ ಇದ್ದೀರಿ. ನೀವು ಆಗಾಗ ಲಾಂಗ್ ಜಂಪ್ ಮಾಡಿದವರೇ. ಈಗೇಕೆ ಉಪಾಧ್ಯಕ್ಷರ ಬಗ್ಗೆ ಮಾತಾಡುತ್ತೀರಿ’ ಎಂದು ಕುಟುಕಿದರು.

ಎಲ್ಲ ಸದಸ್ಯರು ಒಟ್ಟಾಗಿ ಶಾಸಕರನ್ನು ಕೇಳೋಣ ಎಂದು ಕೃಷ್ಣವೇಣಿ ಹೇಳಿದರು.

ಮುಖ್ಯಾಧಿಕಾರಿ ಬಾಲಚಂದ್ರಪ್ಪ,ಸದಸ್ಯರಾದ ಗುರುರಾಜ್, ಸುರೇಂದ್ರ, ನಾಗಪ್ಪ, ಗಾಯಿತ್ರಿ ನಾಗರಾಜ್, ಅಶ್ವಿನಿಕುಮಾರ್, ಶಾಹಿನಾ ಬಾನು, ಚಂದ್ರಕಲಾ ನಾಗರಾಜ್, ಮುಖ್ಯಾಧಿಕಾರಿ ಬಾಲಚಂದ್ರಪ್ಪ, ಪಟ್ಟಣ ಪಂಚಾಯಿತಿಯ ಆರೋಗ್ಯಾಧಿಕಾರಿ ಪ್ರಶಾಂತ್, ಕಂದಾಯ ಅಧಿಕಾರಿ ಪರಶುರಾಮ್, ಎಂಜಿನಿಯರ್ ಗಣೇಶ್ ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.