ADVERTISEMENT

ಶಿವಮೊಗ್ಗ | 'ವಿದ್ಯಾರ್ಥಿಗಳಿಗೆ ಸಂಸ್ಕೃತಿ, ಸಂಸ್ಕಾರದ ಅರಿವು ಮುಖ್ಯ'

ಗುರುಪುರದ ಬಿಜಿಎಸ್ ಸಂಸ್ಥೆ ವಾರ್ಷಿಕೋತ್ಸವ; ಪ್ರಸನ್ನನಾಥ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 8:48 IST
Last Updated 30 ಡಿಸೆಂಬರ್ 2025, 8:48 IST
ಶಿವಮೊಗ್ಗದ ಗುರುಪುರದ ಬಿಜಿಎಸ್ ಶಾಲಾ–ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನೆಯ ನೋಟ
ಶಿವಮೊಗ್ಗದ ಗುರುಪುರದ ಬಿಜಿಎಸ್ ಶಾಲಾ–ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನೆಯ ನೋಟ   

ಶಿವಮೊಗ್ಗ: ಕೇವಲ ಅಂಕಗಳಿಗೋಸ್ಕರ ಓದುವುದು ಬೇಡ. ಅದರ ಜೊತೆಗೆ ನಮ್ಮ ಸಂಸ್ಕೃತಿ, ಸಂಸ್ಕಾರದ ಅರಿವನ್ನು ಹೊಂದುವುದು ಮುಖ್ಯ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಗುರುಪುರದ ಬಿಜಿಎಸ್ ಶಾಲಾ–ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಹೇಳುವಂತಹ ಮಾತನ್ನು ಪಾಲಿಸಿದಾಗ ಉತ್ತಮ ಭವಿಷ್ಯ ಹೊಂದಲು ಸಾಧ್ಯವಾಗುತ್ತದೆ ಎಂದರು.

ADVERTISEMENT

ವಿದ್ಯಾರ್ಥಿ ತಾನು ಓದಲು ಕೂರುವ ಸ್ಥಳದಲ್ಲಿ ವೇಳಾ ಪಟ್ಟಿ, ದಿನಚರಿಯ ಪಟ್ಟಿಯನ್ನು ಸದಾ ಕಣ್ಣಿಗೆ ಕಾಣುವಂತೆ ಇರಿಸಿಕೊಳ್ಳಬೇಕು. ತರಗತಿಯಲ್ಲಿ ತನಗಿಂತ ಹೆಚ್ಚು ಅಂಕ ಪಡೆದ ಸಹಪಾಠಿಯನ್ನು ಕಂಡು ಅಸೂಯೆ ಪಡದೇ ಅವನ ಓದಿನ ವಿಧಾನವನ್ನು ಅರಿತು ತಾನೂ ಅದನ್ನು ಕ್ರಮೇಣ ಅಳವಡಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಗುರುಗಳಿದ್ದಾಗ ಮಾತ್ರ ಗುರಿ ತಲುಪಲು ಸಾಧ್ಯ. ನಮ್ಮ ಧರ್ಮ ಇಂದು ಒಂದು ಮಹತ್ತರ ಮೈಲಿಗಲ್ಲನ್ನು ತಲುಪಿದೆ ಎಂದು ತಿಳಿಸಿದರು.

ಆದಿಚುಂಚನಗಿರಿ ವಿದ್ಯಾಸಂಸ್ಥೆ 450ಕ್ಕೂ ಹೆಚ್ಚು ಶಾಲಾ ಕಾಲೇಜುಗಳನ್ನು ನಡೆಸುತ್ತಿದ್ದು, 1.40 ಲಕ್ಷ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಸರ್ಕಾರ ಮಾಡಬೇಕಾದ ಕಾರ್ಯ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಬಿಇಒ ರಮೇಶ್ ನಾಯ್ಕ ಮಾತನಾಡಿ, ಪೋಷಕರು ಶಿಕ್ಷಕರ ಜೊತೆಗೆ ಕೈಜೋಡಿಸಿದಾಗ ಮಾತ್ರ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ ಎಂದರು.

ನಾದಮಯಾನಂದನಾಥ ಸ್ವಾಮೀಜಿ, ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಆರ್. ವೀರೇಂದ್ರ, ಮಹಾನಗರ ಪಾಲಿಕೆ ಕಂದಾಯ ಅಧಿಕಾರಿ ಡಿ.ನಾಗೇಂದ್ರ ಉಪಸ್ಥಿತರಿದ್ದರು. 

ಇದೇ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಸನ್ಮಾನಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.