ಭದ್ರಾವತಿ: ನಗರದ ಕಡದಕಟ್ಟೆ ಗ್ರಾಮದ ನವಚೇತನ ಕನ್ನಡ ಶಾಲೆಯ ವಿದ್ಯಾರ್ಥಿಗಳು ಈಚೆಗೆ ಶಾಲೆ ಪಕ್ಕದ ಗೌಡ್ರ ರಾಮಣ್ಣ ಅವರ ಗದ್ದೆಯಲ್ಲಿ ಶಿಕ್ಷಕರ ಮಾರ್ಗದರ್ಶನದೊಂದಿಗೆ ಭತ್ತದ ನಾಟಿ ಮಾಡಿ ಸಂಭ್ರಮಿಸಿದರು.
7ನೇ ತರಗತಿ ಕನ್ನಡ ಪಠ್ಯದಲ್ಲಿರುವ ಗದ್ಯವೊಂದರಲ್ಲಿ ಬರುವ ಭತ್ತದ ನಾಟಿ ಮಾಡುವ ವಿಧಾನವನ್ನು ಶಿಕ್ಷಕ ಸಿ.ಎಚ್.ನಾಗೇಂದ್ರಪ್ಪ ವಿದ್ಯಾರ್ಥಿಗಳಿಗೆ ವಿವರಿಸಿದ್ದರು.
ಗದ್ದೆಗಿಳಿದು ನಾಟಿ ಮಾಡುವ ವಿದ್ಯಾರ್ಥಿಗಳ ಕುತೂಹಲ ಮತ್ತು ಆಸಕ್ತಿ ಗಮನಿಸಿದ ಶಾಲಾ ಆಡಳಿತಾಧಿಕಾರಿ ಎಂ.ಚನ್ನೇಶ್ವರಪ್ಪ, ಮುಖ್ಯಶಿಕ್ಷಕರಾದ ಎಚ್.ಡಿ.ಸುವರ್ಣ, ಕೆ.ಮಮತಾ, ದೈಹಿಕ ಶಿಕ್ಷಕರಾದ ಅಬ್ದುಲ್ ಹಕ್, ಎಚ್.ಎಸ್.ಹರೀಶ್ ಹಾಗೂ ಕನ್ನಡ ಶಿಕ್ಷಕರಾದ ಜಿ.ಜಿ.ನಾಗರಾಜ್ ಹಾಗೂ ಎಂ.ಜಿ.ಬಿ.ಕಿರಣ್ ಕುಮಾರ್ ಅವರು ಶಾಲೆ ಪಕ್ಕದ ಗದ್ದೆಗೆ ವಿದ್ಯಾರ್ಥಿಗಳನ್ನು ಕರೆದೊಯ್ದು, ಭತ್ತದ ಸಸಿ ಕೀಳುವ ವಿಧಾನ, ನಾಟಿ ಮಾಡುವ ವಿಧಾನವನ್ನು ಹೇಳಿಕೊಡುವುದರ ಜೊತೆ ತಾವೂ ಭತ್ತದ ನಾಟಿ ಮಾಡಿದರು.
ಮಕ್ಕಳು ಸಹ ಅತೀವ ಸಂತೋಷದಿಂದ ನಾಟಿ ಮಾಡಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ರೈತರ, ಕೂಲಿ ಕಾರ್ಮಿಕರ ಶ್ರಮದ ಬಗ್ಗೆ ಅರಿತು ಭೂ ತಾಯಿಗೆ ನಮಿಸಿ ‘ಅನ್ನ ನೀಡುವ ರೈತರಿಗೆ ಜಯವಾಗಲಿ’ ಎಂಬ ಘೋಷಣೆ ಕೂಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.