
ಶಿವಮೊಗ್ಗ: ‘ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸೆರೆಮನೆಗಳು ಅರಮನೆಯಂತಾಗಿ ಬದಲಾಗಿವೆ. ರಾಜಕೀಯ ನಂಟಿನ ಕಾರಣ ಪಾತಕಿಗಳು ಐಷಾರಾಮಿ ಬದುಕಿಗೆ ಅವಕಾಶವಿರುವ ಪರಪ್ಪನ ಅಗ್ರಹಾರ ಜೈಲನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಲೇವಡಿ ಮಾಡಿದರು.
‘ಸುಪ್ರೀಂಕೋರ್ಟ್ ಸೂಚಿಸಿದರೂ ಜೈಲುಗಳಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗುತ್ತಿಲ್ಲ. ಜೈಲುಗಳ ಸುಧಾರಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
‘ಜೈಲುಗಳೆಂದರೆ ಅಪರಾಧಿಗಳ ವಿಶ್ರಾಂತಿ ತಾಣಗಳಾಗಿವೆ. ಅಷ್ಟೇ ಅಲ್ಲ ಉಗ್ರರಿಗೆ ಆಶ್ರಯ ಕೊಡುವ ಶ್ರೀಮಂತ ಮನೆಗಳಂತಾಗಿವೆ. ಇದಕ್ಕೆ ಉದಾಹರಣೆ ಎಂದರೆ ಪರಪ್ಪನ ಆಗ್ರಹಾರದಲ್ಲಿ ನಡೆದ ಘಟನೆ. ಅಲ್ಲಿ ಕುಖ್ಯಾತ ಕೈದಿಗಳು ಪಾರ್ಟಿ ಮಾಡುತ್ತಾರೆ, ಕುಡಿಯುತ್ತಾರೆ, ಕುಣಿದು ಕುಪ್ಪಳಿಸುತ್ತಾರೆ. ಆದರೂ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಹೇಳಿದರು.
‘ಇಂತಹ ವಿಚಾರಗಳು ನನ್ನ ಗಮನಕ್ಕೆ ಬಂದಿಲ್ಲ ಎಂದು ಗೃಹಮಂತ್ರಿ ಹಾರಿಕೆಯ ಉತ್ತರ ಕೊಡುತ್ತಾರೆ’ ಎಂದು ದೂರಿದರು.
‘ಜೈಲುಗಳು ಅಪರಾಧಿಗಳ ಮನಪರಿವರ್ತನೆಗೆ ಮುಂದಾಗಬೇಕು. ಆದರೆ, ಇಲ್ಲಿ ಆರೋಪಿಗಳಿಗೆ ಯಾವ ಭಯವೂ ಇಲ್ಲ. ಏನೂ ಬೇಕಾದರೂ ಮಾಡಬಹುದು ಎಂಬ ಭಾವನೆ ಬೆಳೆದುಬಿಟ್ಟಿದೆ. ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ ಉಮೇಶ್‌ರೆಡ್ಡಿಯಂತಹ ಕುಖ್ಯಾತ ರೌಡಿಯ ಬ್ಯಾರಕ್‌ನಲ್ಲಿ ಕಲರ್ ಟಿವಿ ಎಂದರೆ ಏನೂ ಅರ್ಥ. ಎಲ್ಲಿಗೆ ಬಂದಿದೆ ನಮ್ಮ ಜೈಲಿನ ಸ್ಥಿತಿಗಳು. ಗೃಹ ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಜೈಲಿನಲ್ಲಿ ಕೈದಿಗಳಿಗೆ ಮೊಬೈಲ್ ಫೋನ್‌ಗಳು ಸರಾಗವಾಗಿ ಸಿಗುತ್ತವೆ. ಗಾಂಜಾ, ಹೆಂಡ ಎಲ್ಲವೂ ಅಧಿಕಾರಿಗಳ ಮೂಲಕವೇ ಕೈದಿಗಳಿಗೆ ನೇರವಾಗಿ ಹೋಗುತ್ತವೆ. ಕೈದಿಗಳು ತಿಂದು, ಉಂಡು, ಕುಣಿದು ಆರಾಮವಾಗಿ ಇರುತ್ತಾರೆ ಎಂದರೆ ಈ ಸರ್ಕಾರಕ್ಕೆ ನಾಚಿಕೆಯಾಗಬೇಕು. ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದರೂ ಸರ್ಕಾರಕ್ಕೆ ಬುದ್ಧಿ ಬಂದಿಲ್ಲ’ ಎಂದರು.
‘ಜೈಲಿನ ಸುತ್ತಮುತ್ತ ಮೊಬೈಲ್ ಫೋನ್‌ಗಳು ಕೆಲಸ ಮಾಡದಂತೆ ಜಾಮರ್ ಅಳವಡಿಸಲು ಗೃಹಮಂತ್ರಿಯಾಗಿದ್ದಾಗ ನಾನು ತೀರ್ಮಾನಿಸಿದ್ದೆ. ಜೈಲು ಸುಧಾರಣೆಗೆ ಹಲವು ನಿಯಮಗಳನ್ನು ಕೂಡ ರೂಪಿಸಿದ್ದೆ’ ಎಂದು ಸ್ಮರಿಸಿದರ ಅವರು, ‘ಅತ್ಯಾಚಾರಿಗಳು ಇದ್ದಾರೆ, ಇವರಿಗೆಲ್ಲ ರಾಜಾತಿಥ್ಯ ದೊರೆಯುತ್ತದೆ ಎಂದರೆ ಸರ್ಕಾರ ಕಣ್ಣು ಮುಚ್ಚಿ ಕುಳಿತುಕೊಳ್ಳಬಾರದು. ಇದಕ್ಕೆ ಸಹಕಾರ ನೀಡಿದ ಜೈಲು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ.ಜಗದೀಶ್, ಮಾಲತೇಶ್, ಕೆ.ವಿ.ಅಣ್ಣಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.