ADVERTISEMENT

ನಮ್ಮದು ಶಿಲ್ಪಕಲೆ, ಭವ್ಯ ಸಂಸ್ಕೃತಿಯ ನಾಡು; ಶಾಸಕ ಚನ್ನಬಸಪ್ಪ ಅಭಿಮತ

ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ; ಶಾಸಕ ಚನ್ನಬಸಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 5:26 IST
Last Updated 2 ಜನವರಿ 2026, 5:26 IST
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಎಸ್.ಎನ್.ಚನ್ನಬಸಪ್ಪ ಉದ್ಘಾಟಿಸಿದರು
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಎಸ್.ಎನ್.ಚನ್ನಬಸಪ್ಪ ಉದ್ಘಾಟಿಸಿದರು   

ಶಿವಮೊಗ್ಗ: ‘ಶಿಲ್ಪಕಲೆಯೇ ಇಲ್ಲದ ಜಗತ್ತನ್ನು ಊಹಿಸಲೂ ಸಾಧ್ಯವಿಲ್ಲ. ಶಿಲ್ಪಕಲೆ ಭಗವಂತ ನಮಗೆ ನೀಡಿದ ವರ. ಜಕಣಾಚಾರಿಯಂತಹ ಮಹಾನ್ ಶಿಲ್ಪಿಯನ್ನು ನೀಡಿದ ಅವರ ತಾಯಿಗೆ ನಮ್ಮ ನಮನಗಳು’ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಅಮರಶಿಲ್ಪಿ ಜಕಣಾಚಾರಿಗಳು ಭಗವಂತ ಈ ನಾಡಿಗೆ ನೀಡಿದ ವರವಾಗಿದ್ದು, ಬೇಲೂರು, ಹಳೇಬೀಡಿನ ಶಿಲ್ಪಕಲೆಗಳು ಜಗತ್ಪ್ರಸಿದ್ದಿಯಾಗಲು ಇವರೇ ಕಾರಣಕರ್ತರು. ನಮ್ಮದು ಶಿಲ್ಪಕಲೆ, ಸಾಹತ್ಯ, ಭವ್ಯ ಸಾಂಸ್ಕೃತಿಕ ನೆಲಗಟ್ಟಿನ ನಾಡು. ಅನೇಕ ಸಾಧು-ಸಂತರು, ದಾರ್ಶನಿಕರು ಭವ್ಯವಾದ ಭಾರತ ದೇಶ ಕಟ್ಟಲು ತಮ್ಮನ್ನು ತಾವೇ ಧಾರೆ ಎರೆದುಕೊಂಡಿದ್ದು, ಅವರನ್ನೆಲ್ಲ ನಾವು ಸದಾ ಸ್ಮರಿಸಬೇಕು ಎಂದರು.

ADVERTISEMENT

‘ನಗರದ ಫ್ಲೈ ಓವರ್ ಅಥವಾ ಯಾವುದಾದರೂ ಮುಖ್ಯ ವೃತ್ತಕ್ಕೆ ಅಮರಶಿಲ್ಪಿ ಜಕಣಾಚಾರಿಗಳ ಹೆಸರನ್ನು ಇಡುವಂತೆ ಸಮುದಾಯದವರು ಮನವಿ ಮಾಡಿದ್ದಾರೆ. ಇದು ನಮ್ಮ ಕರ್ತವ್ಯವೂ ಆಗಿದೆ. ಇಲಾಖೆಯಿಂದ ಪ್ರಸ್ತಾವನೆಯನ್ನು ಸಲ್ಲಿಸಿದರೆ ಸೂಕ್ತ ಜಾಗವೊಂದಕ್ಕೆ ಹೆಸರು ಇಡಲು ಮಾಡಲು ಸಹಕರಿಸುತ್ತೇನೆ’ ಎಂದು ಭರವಸೆ ನೀಡಿದರು.

ರಾಣೆಬೆನ್ನೂರಿನ ವಿಶ್ವವಿಭು ರೇಕಿ ಧ್ಯಾನಪೀಠದ ಮೌನೇಶ್ವರ ಆಚಾರ್ಯ ಶೇಷ ಉಪನ್ಯಾಸ ನೀಡಿ ಮಾತನಾಡಿ, ವಿಶ್ವಕರ್ಮ ಪರಂಪರೆ ಪ್ರತಿಭಾವಂತರ, ತಂತ್ರಜ್ಞಾನರ, ಪಂಚವೇದದ, ಪಂಚ ಶಕ್ತಿ, ಪಂಚ ವಿಜ್ಞಾನಗಳ ಪರಂಪರೆ ಹೊಂದಿದೆ. ಶಿಲ್ಪಗಳ ರಚನೆಯು ಸೌಂದರ್ಯದ ಬೀಡು ಮತ್ತು ಭಕ್ತಿಯ ನೆಲೆಯನ್ನಾಗಿ ಈ ನಾಡನ್ನು ರೂಪಿಸಿದೆ ಎಂದರು.

‘ಶಿಲ್ಪಗಳ ಮೂಲಕ ಭಕ್ತಿಯ ಬೀಜ ಬಿತ್ತಿದ ಮಹಾನ್ ಶಿಲ್ಪಿ ಜಕಣಾಚಾರಿ. ವಿಶ್ವಕರ್ಮ ಪರಂಪರೆ ಪ್ರಾಚೀನವಾದ ಐದು ವೇದಗಳನ್ನು ಮಾನ್ಯ ಮಾಡುತ್ತದೆ ಮತ್ತು ಅದಕ್ಕೆ ತಕ್ಕಂತೆ ಆಚರಣೆಗಳೂ ಇರುತ್ತವೆ. ದೇವಶಿಲ್ಪ ಮತ್ತು ಮಾನವ ಶಿಲ್ಪ ಎಂಬ ಪ್ರಕಾರಗಳಿದ್ದು ವೇದಗಳ ಆಚರಣೆ ಅನುಸಾರ ಈ ಶಿಲ್ಪಕಲೆಗಳನ್ನು ಕೆತ್ತಲಾಗುತ್ತದೆ’ ಎಂದು ಮಾಹಿತಿ ನೀಡಿದ ಅವರು ಅಮರಶಿಲ್ಪಿ ಜಕಣಾಚಾರಿಗಳ ಜೀವನ ಚರಿತ್ರೆ ಕುರಿತು ವಿವರಣೆ ನೀಡಿದರು.

ಜಿಲ್ಲಾ ವಿಶ್ವಕರ್ಮ ಮಹಾಸಭಾದ ಗೌರವ ಅಧ್ಯಕ್ಷ ಸತ್ಯನಾರಾಯಣ, ಅಗರದಹಳ್ಳಿ ನಿರಂಜನಮೂರ್ತಿ, ಅನ್ನಪೂರ್ಣ ಕಾಳಾಚಾರ್, ರಮೇಶ್, ಶ್ರೀನಿವಾಸಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಎಚ್. ಇದ್ದರು.

ನಮ್ಮದು ದೇವನಿರ್ಮಿತ ದೇಶ. ಇದಕ್ಕೆ ಹುಟ್ಟಿದ ದಿನಾಂಕವಿಲ್ಲ. ಹಾಗೆಯೇ ಸಾವಿನ ದಿನಾಂಕವೂ ಇಲ್ಲದ ಚಿರಸ್ಥಾಯಿ ನಮ್ಮ ನೆಲೆವೀಡು. ಅಮರಶಿಲ್ಪಿ ಜಕಣಾಚಾರಿ ಎಂದಿಗೂ ಅಮರ
ಚನ್ನಬಸಪ್ಪ ಶಾಸಕ
ಜಕಣಾಚಾರಿ ಅವರ ಹೆಸರನ್ನು ನಗರದ ಪ್ರಮುಖ ವೃತ್ತಕ್ಕೆ ಇಡಲು ನನ್ನ ಸಂಪೂರ್ಣ ಸಹಕಾರವಿದೆ. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಶೀಘ್ರದಲ್ಲಿ ಮಾತನಾಡುತ್ತೇನೆ
ಸಿ.ಎಸ್.ಚಂದ್ರಭೂಪಾಲ್ ಅಧ್ಯಕ್ಷ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.