
ಸಂಸದ ರಾಘವೇಂದ್ರ ಅವರು ಸಿದ್ಧತಾ ಕಾರ್ಯ ಪರಿಶೀಲಿಸಿದರು
ಭದ್ರಾವತಿ: ಜ್ಞಾನದಾಸೋಹ ಅರಿಯಲು ಪ್ರತಿಯೊಬ್ಬರೂ ತರಳಬಾಳು ಹುಣ್ಣಿಮೆ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ನಗರದ ವಿಐಎಸ್ಎಲ್ ಹೆಲಿಪ್ಯಾಡ್ ಮೈದಾನದಲ್ಲಿ ಶುಕ್ರವಾರ ತರಳಬಾಳು ಹುಣ್ಣಿಮೆ ಮಹೋತ್ಸವದ ಅಂತಿಮ ಹಂತದ ಸಿದ್ಧತಾ ಕಾರ್ಯ ಪರಿಶೀಲಿಸಿ ಮಾತನಾಡಿದರು.
ತರಳಬಾಳು ಹುಣ್ಣಿಮೆ ಈ ಬಾರಿ ಭದ್ರಾವತಿಯಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ. ಕಾರ್ಯಕ್ರಮದ ಯಶಸ್ಸಿಗೆ ಎರಡು ತಿಂಗಳಿಂದ ಸ್ಥಳೀಯ ಶಾಸಕರು, ಮುಖಂಡರು, ಕಾರ್ಯ ಕರ್ತರು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಮಠಾಧೀಶರು, ಸ್ವಾಮೀಜಿಗಳ ಆಶೀರ್ವಚನ, ಹಿತನುಡಿಗಳು ಪ್ರತಿಯೊಬ್ಬರಿಗೂ ದೊರಕ ಬೇಕೆಂಬುದೇ ತಮ್ಮ ಮಹದಾಸೆ ಎಂದರು.
ಕ್ರೀಡೆ, ಸಾಂಸ್ಕೃತಿಕ ಕಾರ್ಯ ಕ್ರಮ, ಕುಸ್ತಿ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ತಾಲ್ಲೂಕಿನ ಎಲ್ಲಾ ಸ್ಪರ್ಧಿಗಳು ಇವುಗಳಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದರು.
ಜ್ಞಾನದಾಸೋಹಕ್ಕೆ ಸರ್ವರಿಗೂ ಮುಕ್ತ ಅವಕಾಶವಿದೆ. ವಿವಿಧ ತಾಲ್ಲೂಕು, ಜಿಲ್ಲೆ, ರಾಜ್ಯಗಳಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಅವಕಾಶ ಕಡಿಮೆ ಇದ್ದು, ಭಕ್ತರಿಗೆ ಹಸಿವು ನೀಗಿಸಿಕೊಳ್ಳಲು ಸಸ್ಯಹಾರಿ ತಿಂಡಿ ತಿನಿಸು ಮಳಿಗೆಗಳನ್ನು ಪ್ರಾರಂಭಿಸಲಾಗುವುದು. ಕಡಿಮೆ ದರದಲ್ಲಿಯೇ ತಿನಿಸು ಮಾರಾಟ ಮಾಡಲು ಅಂಗಡಿ ಮಾಲೀಕರಿಗೆ ಸೂಚನೆ ನೀಡಲಾಗಿದೆ ಎಂದು ಮಹೋತ್ಸವ ಸಮಿತಿಯ ಮುಖ್ಯಸ್ಥ ಎಚ್. ಆರ್. ಬಸವರಾಜಪ್ಪ ಹೇಳಿದರು. ಬಳ್ಳಕೆರೆ ಸಂತೋಷ್, ಕೆ.ಜಿ. ರವಿಕುಮಾರ್, ವಿಜಯ ಕುಮಾರ್, ತೀರ್ಥಯ್ಯ, ರವಿಕು ಮಾರ್, ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಮಲ್ಲಯ್ಯ ಇದ್ದರು.
[
ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಎರಡು ಪಾಳಿಗಳಲ್ಲಿ ಬಂದೋಬಸ್ತ್ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಡಿವೈಎಸ್ಪಿ ಪ್ರಕಾಶ್ ರಾಥೋಡ್ ತಿಳಿಸಿದರು.
ಮೂವರು ಡಿ.ಎಸ್,ಪಿ., 9 ಇನ್‌ಸ್ಪೆಕ್ಟರ್, 20 ಪಿಎಸ್ಐಗಳು, 56 ಎಎಸ್ಐಗಳು ಹಾಗೂ 353 ಹೆಡ್ ಕಾನ್‌ಸ್ಟೆಬಲ್/ಕಾನ್‌ಸ್ಟೆಬಲ್, 400 ಗೃಹರಕ್ಷಕ ದಳ ಸಿಬ್ಬಂದಿ ಜತೆಗೆ 2 ಕೆ.ಎಸ್.ಆರ್.ಪಿ. ಪ್ಲಟೂನ್, 3 ಡಿಎಆರ್ ಪ್ಲಟೂನ್ ಸಿಬ್ಬಂದಿಯನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ.
ಮೈದಾನದಲ್ಲಿ ಪ್ರತ್ಯೇಕವಾಗಿ ವಿಐಪಿ ಪಾರ್ಕಿಂಗ್ ವ್ಯವಸ್ಥೆಯಿದೆ. ಮೂರು ಪ್ರತ್ಯೇಕ ಸ್ಥಳಗಳಲ್ಲಿ ಬಸ್, 4 ಚಕ್ರದ ವಾಹನ ಮತ್ತು ದ್ವಿಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ತಿಮ್ಲಾಪುರ ಕ್ರಾಸ್‌ನಿಂದ ಪಾರ್ಕಿಂಗ್ ಸ್ಥಳಕ್ಕೆ ಬರುವ ಬಸ್‌ಗಳು ಡಿಜಿ ಹಳ್ಳಿ ಮೂಲಕ ಹೊರ ಹೋಗಬೇಕಿದೆ. ಬೊಮ್ಮನಕಟ್ಟೆ ಕಡೆಯಿಂದ ಬರುವ ಬಸ್‌ಗಳಿಗೆ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.