ADVERTISEMENT

ತರಳಬಾಳು ಮಹೋತ್ಸವ| ಸಂವಿಧಾನವೇ ದೇಶದ ಏಕೈಕ ಪವಿತ್ರ ಗ್ರಂಥ: ನ್ಯಾ. ಶ್ರೀಶಾನಂದ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 5:09 IST
Last Updated 1 ಫೆಬ್ರುವರಿ 2026, 5:09 IST
ಭದ್ರಾವತಿಯಲ್ಲಿ ಶನಿವಾರ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಹೈಕೋರ್ಟ್ ನ್ಯಾಯಾಧೀಶ ವಿ.ಶ್ರೀಶಾನಂದ ಮಾತನಾಡಿದರು
ಭದ್ರಾವತಿಯಲ್ಲಿ ಶನಿವಾರ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಹೈಕೋರ್ಟ್ ನ್ಯಾಯಾಧೀಶ ವಿ.ಶ್ರೀಶಾನಂದ ಮಾತನಾಡಿದರು   

ಭದ್ರಾವತಿ: ‘ನಮ್ಮ ನಮ್ಮ ಧರ್ಮ ಗ್ರಂಥಗಳು ಹಾಗೂ ಧಾರ್ಮಿಕ ನಂಬಿಕೆಗಳನ್ನು ದೇವರ ಮನೆಯಲ್ಲಿ ಇಟ್ಟುಕೊಳ್ಳೋಣ. ಅಲ್ಲಿಂದ ಹೊರಗೆ ಕಾಲಿಟ್ಟರೆ ಸಂವಿಧಾನ ನಮ್ಮೆಲ್ಲರ ಏಕೈಕ ಪವಿತ್ರ ಗ್ರಂಥ ಆಗಬೇಕು. ಆವತ್ತಿನ ದಿನ ದೇಶದಲ್ಲಿ ಸಮಾಜ ಮತ್ತು ನ್ಯಾಯಾಂಗದ ನಡುವಿನ ಸಂಘರ್ಷ ತಾನಾಗಿಯೇ ಕಡಿಮೆ ಆಗಲಿದೆ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ ಅಭಿಪ್ರಾಯಪಟ್ಟರು.

ಇಲ್ಲಿನ ವಿಐಎಸ್ಎಲ್ ಹೆಲಿಪ್ಯಾಡ್ ಮೈದಾನದಲ್ಲಿ ಶನಿವಾರ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ‘ನ್ಯಾಯಾಂಗ ಗೋಷ್ಠಿ’ಯಲ್ಲಿ ಮಾತನಾಡಿದ ಅವರು, ‘ತಾಯಿಗೆ ಕೊಟ್ಟ ಸ್ಥಾನವನ್ನು ದೇಶಕ್ಕೆ ಕೊಡಬೇಕು. ಆದರೆ ದೇಶವನ್ನು ವಿಕೃತವಾಗಿ ಚಿತ್ರಿಸಿ ಅದಕ್ಕೋಸ್ಕರ ಕೇಸು ಹಾಕಿದರೆ ಕೋರ್ಟಿಗೆ ಹೋಗಿ ತಡೆಯಾಜ್ಞೆ ತರುವ ಪ್ರವೃತ್ತಿ ಬಂದಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯವಾ’ ಎಂದು ಪ್ರಶ್ನಿಸಿದರು.

‘ದೈವ ಋಣ, ಪಿತೃ ಋಣ, ಸಮಾಜದ ಹಿತಕ್ಕೆ ಬದುಕಿದವರ ಋಷಿ ಋಣ, ರಾಷ್ಟ್ರ ಋಣ ಈ ನಾಲ್ಕನ್ನು ಸರಿಯಾಗಿ ಪರಿಪಾಲನೆ ಮಾಡಿದರೆ ಧರ್ಮ, ನ್ಯಾಯ ತಾನಾಗಿಯೇ ಬರುತ್ತದೆ’ ಎಂದು ಹೇಳಿದ ಅವರು, ಈ ರಾಷ್ಟ್ರದ ಮೇಲೆ ಸಾಂಸ್ಕೃತಿಕವಾಗಿ ದಾಳಿ ಆಗಿದೆ. ನಮ್ಮದು ಎಂಬುದು ಏನೂ ಉಳಿದಿಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯಗಳ ಕೊರತೆಯಿಂದ ಇಂತಹ ತೊಂದರೆ ಆಗುತ್ತಿದೆ. ಜಗತ್ತು ಇಂದು ವಿಪ್ಲವಗಳ ಎದುರಿಸುತ್ತಿರುವುದು ಅನ್ಯಾಯ ಮಾಡುತ್ತಿರುವವರಿಂದ ಅಲ್ಲ. ಬದಲಿಗೆ ಅನ್ಯಾಯ ಕಂಡು ಸುಮ್ಮನಿರುವ ಜನರಿಂದ ಎಂಬ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಮಾತು ಉಲ್ಲೇಖಿಸಿದ ಅವರು, ಸತ್ಯ ಹೇಳಲು ಹಿಂಜರಿಯಬೇಡಿ ಎಂದರು.

ADVERTISEMENT

‘ಅನ್ಯಾಯದ ಮಾರ್ಗದಲ್ಲಿ ಸಂಪಾದನೆ ಮಾಡಿದ್ದು ತಂದು ಶ್ರೀಗಳಿಗೆ ಕೊಟ್ಟರೆ ಶಿವ ಒಪ್ಪುವುದಿಲ್ಲ ಎಂದು ಹೇಳಿದ ಶ್ರೀಶಾನಂದ, ಸರ್ವಜ್ಞನ ತ್ರಿಪದಿ, ಆಯ್ದಕ್ಕಿ ಲಕ್ಕಮ್ಮ, ಬಸವಣ್ಣನ ವಚನಗಳ ಉಲ್ಲೇಖಿಸಿದರು. ಅನ್ಯ ಮಾರ್ಗದಿಂದ ಮಕ್ಕಳ ಪಡೆಯಲು ಸಾಧ್ಯವೇ? ಅದೇ ರೀತಿ ಅನ್ಯ ಮಾರ್ಗದಲ್ಲಿ ದುಡಿದ ಲಂಚದ ಹಣ ಸ್ವೀಕಾರ್ಹವೇ ಎಂದು ಪ್ರಶ್ನಿಸಿದ ಅವರು, ಅನ್ಯ ಮಾರ್ಗದಲ್ಲಿ ಸಂಪಾದಿಸಿದ ದುಡ್ಡು ಬೇಡ ಎಂದು ಮನೆಯ ಮಹಿಳೆಯರು ತೀರ್ಮಾನಿಸಿ, ಲಂಚ ಪಡೆದ ಹಣ ತಂದಲ್ಲಿ ಎಲ್ಲಿಂದ ಬಂತು ಈ ದುಡ್ಡು ಹೆಣ್ಣುಮಕ್ಕಳು ನಿಂತು ಕೇಳಿ, ಆಗ ಭ್ರಷ್ಟಾಚಾರ ಸುಲಭವಾಗಿ ತಡೆಗಟ್ಟಬಹುದು’ ಎಂದು ಸಲಹೆ ನೀಡಿದರು.

ನಿವೃತ್ತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ಮಾತನಾಡಿ,  ‘ಅಪರಾಧ ರಹಿತ ಸಮಾಜ ಇರಲು ಸಾಧ್ಯವಿಲ್ಲ. ತಪ್ಪು ಮಾಡುವಂತಹದ್ದು ಮನುಷ್ಯ ಸಹಜವಾದ ಸ್ವಭಾವ. ಮಾಡಬಾರದ್ದನ್ನು ಮಾಡಿ, ತಪ್ಪು ಮಾಡಬಹುದು. ಮಾಡಬೇಕಾದ್ದನ್ನು ಸರಿಯಾಗಿ ಮಾಡದೇ ತಪ್ಪು ಮಾಡಬಹುದು. ಮಾಡಬೇಕದ ಕರ್ತವ್ಯ ತಪ್ಪು ಮಾಡಬಹುದು ಈ ರೀತಿ ಮೂರು ರೀತಿಯಲ್ಲಿ ಮನುಷ್ಯ ತಪ್ಪು ಮಾಡುತ್ತಾನೆ. ಅದನ್ನು ತಡೆಯಲು ಮನುಷ್ಯ ಕಾನೂನು ಸಕಾರಾತ್ಮಕ ಮೌಲ್ಯವನ್ನು ಸೃಷ್ಟಿಸಿದೆ’ ಎಂದು ಹೇಳಿದರು.

‘ಲಂಚ ಕೇಳುವುದು, ಕೊಡುವುದು, ಪಡೆಯುವುದು ತಪ್ಪು ಎಂದು ಕಾನೂನು ಇದೆ. ಅದನ್ನು ಗೌರವಿಸುತ್ತಿದ್ದೇವೆಯೇ ಆ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಿ. ಮನವರಿಯದ ಕಳ್ಳತನ ಜಗತ್ತಿನಲ್ಲಿ ಯಾವುದೂ ಇಲ್ಲ. ತಪ್ಪು ಮಾಡುವ ಮುನ್ನ ಆತ್ಮಸಾಕ್ಷಿಯ ಮಾತನ್ನು ಕೇಳಿ’ ಎಂದು ಕಿವಿಮಾತು ಹೇಳಿದರು.

ತರಳಬಾಳು ಮಠದ ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ, ನವದೆಹಲಿಯ ಲೋಕಪಾಲ್‌ನ ನ್ಯಾಯಾಂಗ ಸದಸ್ಯ ಲಿಂಗಪ್ಪ ನಾರಾಯಣಸ್ವಾಮಿ, ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್.ಸಂತೋಷ್. ನ್ಯಾಯಾಧೀಶೆ ಇಂದಿರಾ, ಸಾಧು ಸದ್ಧರ್ಮ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಸಂವಿಧಾನದ ಅನ್ವಯ ಅಸ್ಪೃಶ್ಯತೆ ರದ್ದು ಮಾಡಲಾಗಿದೆ. ವರದಕ್ಷಿಣೆ ಪಡೆಯುವುದು ಅಪರಾಧ. ಅದನ್ನು ಗೌರವಿಸುತ್ತಿದ್ದೇವೆಯೇ? ಹಾಗಿದ್ದ ಮೇಲೆ ನಮ್ಮ ಸಮಾಜ ಹೇಗೆ ಸಂತೋಷವಾಗಿರುತ್ತದೆ. ಸಮಾಜ ಆರೋಗ್ಯಕರವಾಗಿರಬೇಕು ಅಂದರೆ ಕಾನೂನನ್ನು ಗೌರವಿಸಬೇಕು.
ಎಚ್.ಬಿಲ್ಲಪ್ಪ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ
ಕೂಡು ಕುಟುಂಬದ ನಿರ್ಮೂಲನೆಯ ಪರಿಣಾಮ ಮದುವೆ ಇಂದು ಒಪ್ಪಂದ ಆಗಿದೆ. ಅಹಂಭಾವ ಮಾಧ್ಯಮಗಳ ದುರ್ಬಳಕೆ ಪ್ರತಿಷ್ಠೆಯಿಂದಾಗಿ ಕೌಟುಂಬಿಕ ಸಂಬಂಧಗಳು ದುರ್ಬಲಗೊಳ್ಳುತ್ತಿವೆ.ತಾಳ್ಮೆ ತ್ಯಾಗ ಮನೋಭಾವ. ಹೊಂದಾಣಿಕೆಯಿಂದ ಸಂಸಾರ ಚೆನ್ನಾಗಿರುತ್ತವೆ. ಮಕ್ಕಳ ಬೆಳವಣಿಗೆ ಚೆನ್ನಾಗಿರುತ್ತದೆ
ಕೆ.ಬಿ.ವಾಣಿಗೌಡ. ದೇವನಹಳ್ಳಿ ಸಹಾಯಕ ಸರ್ಕಾರಿ ಅಭಿಯೋಜಕಿ
ನಮ್ಮ ವಿವೇಚನೆಯನ್ನು ಹೊರಗುತ್ತಿಗೆ ಕೊಟ್ಟ ಪರಿಣಾಮ ಇಂದು ವ್ಯಾಜ್ಯಗಳು ಹೆಚ್ಚಳಗೊಂಡಿವೆ. ಸಮಾಜ ನ್ಯಾಯಾಲಯ ಬೇರೆ ಅಲ್ಲ. ನ್ಯಾಯಾಧೀಶರು ವಕೀಲರು ಬೇರೆ ಗ್ರಹದಿಂದ ಬಂದವರು ಅಲ್ಲ. ಸಮಾಜದ ಪ್ರತಿಫಲವೇ ನ್ಯಾಯಾಲಯ. ವಿಳಂಬಕ್ಕೆ ನ್ಯಾಯಾಲಯವನ್ನು ದೂಷಣೆ ಮಾಡುವುದು ಸಲ್ಲ
ಸಂದೀಪ ಪಾಟೀಲ ಹೈಕೋರ್ಟ್ ವಕೀಲ

ತರಳಬಾಳು ಮಹೋತ್ಸವದಲ್ಲಿ ಇಂದು

ಸಂಜೆ 6.30ಕ್ಕೆ; ಧರ್ಮ-ವಿಜ್ಞಾನ–ಸಮಾಜ ಗೋಷ್ಠಿ: ಸದ್ಧರ್ಮ ಸಿಂಹಾಸನಾರೋಹಣ: ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮುಖ್ಯ ಅತಿಥಿಗಳು: ಸಚಿವ ದಿನೇಶ್ ಗುಂಡೂರಾವ್ ಸಂಸದ ಬಸವರಾಜ ಬೊಮ್ಮಾಯಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ. ಉಪನ್ಯಾಸ: ಪ್ರೊ.ಎಂ. ಕೃಷ್ಣೇಗೌಡ ಡಾ.ಟಿ.ಜಿ. ಸೀತಾರಾಮ್ ವಿಶೇಷ ಆಹ್ವಾನಿತರು: ಶಾಸಕರಾದ ಬಿ.ಕೆ. ಸಂಗಮೇಶ್ವರ ಯು.ಬಿ. ಬಣಕಾರ್ ಬಿ.ಪಿ. ಹರೀಶ್ ಜಿ.ಎಚ್. ಶ್ರೀನಿವಾಸ್ ಶಿವಗಂಗಾ ಬಸವರಾಜ್ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಸಾಂಸ್ಕೃತಿಕ ಕಾರ್ಯಕ್ರಮ: ವಚನಗೀತೆ ನೃತ್ಯ ರೂಪಕ ಮಲ್ಲಕಂಬ ವಚನ ನೃತ್ಯ. 

ಮಧ್ಯಾಹ್ನ 2:30 ರಿಂದ ತೆರೆದ ವಾಹನದಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಡ್ಡ ಪಲ್ಲಕ್ಕಿ ಉತ್ಸವ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.