ಶಿರಾಳಕೊಪ್ಪ ಸಮೀಪದ ಕಡೇನಂದಿಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ನಿವಾರಿಸಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು, ಪೋಷಕರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಶಿರಾಳಕೊಪ್ಪ: ಸಮೀಪದ ಕಡೇನಂದಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿಢೀರ್ ವರ್ಗಾವಣೆ ಖಂಡಿಸಿ ವಿದ್ಯಾರ್ಥಿಗಳು, ಪೋಷಕರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಶಾಲೆಯಲ್ಲಿ ಒಟ್ಟು ಏಳು ಶಿಕ್ಷಕರ ಹುದ್ದೆ ಇದ್ದು, ಇಬ್ಬರು ಈಗಾಗಲೇ ಬೇರೆಡೆ ನಿಯೋಜನೆಗೊಂಡಿದ್ದಾರೆ. ಇದೀಗ ಮೂರು ಶಿಕ್ಷಕರ ವರ್ಗಾವಣೆ ಮಾಡಲಾಗಿದ್ದು ಕೇವಲ ಇಬ್ಬರು ಶಿಕ್ಷಕರು ಶಾಲೆ ನಡೆಸುವಂತಾಗಿದೆ. ಅರ್ಧ ವಾರ್ಷಿಕ ಪರೀಕ್ಷೆ ಸಮಯದಲ್ಲೇ ಹೀಗಾಗಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಮೊದಲ ಹಂತದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ್ದೇವೆ. ಶಿಕ್ಷಕರ ಕೊರತೆ ನಿವಾರಿಸದಿದ್ದರೆ ಶಾಲೆಗೆ ಬೀಗ ಹಾಕಿ ರಸ್ತೆತಡೆ ನಡೆಸಿ ಪ್ರತಿಭಟನೆ ಮಾಡುವುದಾಗಿ’ ಶಾಲಾಭಿವೃದ್ಧಿ ಸಮಿತಿ ಸದಸ್ಯೆ ಅಶ್ವಿನಿ ಎಚ್ಚರಿಸಿದರು.
ಮಕ್ಕಳ ಶೈಕ್ಷಣಿಕ ಪ್ರಗತಿಗೆ ತೊಂದರೆ ಆಗದಂತೆ ಕೂಡಲೇ ಶಿಕ್ಷಕರ ನಿಯೋಜನೆ ಮಾಡಬೇಕು ಇಲ್ಲವಾದರೆ ಅನಿವಾರ್ಯವಾಗಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಲಿದ್ದಾರೆ ಸರ್ಕಾರಿ ಶಾಲೆ ಉಳಿಸಿಕೊಳ್ಳಲು ತಕ್ಷಣ ಸರ್ಕಾರ ಶಿಕ್ಷಕರ ನೇಮಕ ಮಾಡಬೇಕು ಎಂದು ಶಾಲಾಭಿವೃದ್ಧಿ ಸಮಿತಿ ಸದಸ್ಯ ಕುಮಾರ್ ಕಟ್ಟಿಮನಿ ಒತ್ತಾಯಿಸಿದರು.
ಗ್ರಾ.ಪಂ. ಅಧ್ಯಕ್ಷ ಲಿಂಗರಾಜ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರೆಡ್ಡಪ್ಪ ರೆಡ್ಡಿ, ಸದಸ್ಯರಾದ ಸಿದ್ದಯ್ಯಸ್ವಾಮಿ, ಬಸವರಾಜ ಮೇಲಿನಮನೆ, ಮಲ್ಲಮ್ಮ, ಸುಜಾತಾ, ನೇತ್ರ ಸೇರಿದಂತೆ ಹಲವು ಪೋಷಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.