
ಸಾಗರ: ‘ರಚನಾತ್ಮಕ ಚಟುವಟಿಕೆಗಳಿಗೆ ಒತ್ತು ನೀಡುವ ಮೂಲಕ ಶಿಕ್ಷಕರ ಸಮಸ್ಯೆಗಳಿಗೆ ಶಿಕ್ಷಕರ ಸಂಘಟನೆಗಳು ಪೂರಕವಾಗಿ ಸ್ಪಂದಿಸಬೇಕು’ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಬಿ.ರುದ್ರಪ್ಪ ಹೇಳಿದರು.
ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶನಿವಾರ ಏರ್ಪಡಿಸಿದ್ದ ಶೈಕ್ಷಣಿಕ ಕಾರ್ಯಾಗಾರ, ಸಂಘದ ವಾರ್ಷಿಕ ಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
‘ಆಯಾ ಭಾಗದ ಶಿಕ್ಷಣದ ಗುಣಮಟ್ಟವನ್ನು ಕಾಪಾಡುವ ಜವಾಬ್ದಾರಿ ಶಿಕ್ಷಕರ ಸಂಘಟನೆಗಳ ಮೇಲಿದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆತರುವ ಕೆಲಸವನ್ನು ಶಿಕ್ಷಕರು ಮಾಡಬೇಕಿದೆ. ಶಿಕ್ಷಣ ಕ್ಷೇತ್ರದಲ್ಲಿನ ಬದಲಾವಣೆಗಳ ಕುರಿತು ಸರ್ಕಾರದ ಗಮನ ಸೆಳೆಯುವ ರೀತಿಯಲ್ಲಿ ಕಾರ್ಯಾಗಾರಗಳು ನಡೆಯಬೇಕಿದೆ’ ಎಂದು ಅಭಿಪ್ರಾಯಪಟ್ಟರು.
‘ಇತರ ಇಲಾಖೆಗಳಿಗಿಂತ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರ ಮೇಲಿರುವ ಹೊಣೆಗಾರಿಕೆ ಹೆಚ್ಚು ಮಹತ್ವದ್ದಾಗಿದೆ. ಕೆಲವೇ ಶಿಕ್ಷಕರು ಮಾಡುವ ತಪ್ಪುಗಳಿಂದ ಇಡೀ ಶಿಕ್ಷಕ ಸಮೂಹದ ಮೇಲೆ ಆರೋಪ ಬರುತ್ತದೆ ಎಂಬ ಎಚ್ಚರಿಕೆ ಎಲ್ಲಾ ಶಿಕ್ಷಕರಲ್ಲಿರಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಹೇಳಿದರು.
‘ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಜೊತೆಗೆ ಶಿಕ್ಷಣ ಇಲಾಖೆಯ ಆಡಳಿತದಲ್ಲಿ ಶಿಕ್ಷಕರನ್ನು ಸಕ್ರಿಯವಾಗಿ ತೊಡಗಿಸುವ ಕೆಲಸದಲ್ಲಿ ನಮ್ಮ ಸಂಘಟನೆ ಕ್ರಿಯಾಶೀಲವಾಗಿದೆ’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಮಾಲತೇಶ್ ಹೇಳಿದರು.
ಶಿಕ್ಷಕರಲ್ಲಿ ಆರ್ಥಿಕ ನಿರ್ವಹಣೆ ಕುರಿತು ಶಿಕಾರಿಪುರದ ಶಂಕರ್ ಉಪನ್ಯಾಸ ನೀಡಿದರು. ಪ್ರಮುಖರಾದ ಅನ್ನಪೂರ್ಣ, ಭೂಮೇಶ್, ಜಗನ್ನಾಥ್ ಕೆ. ದೇವೇಂದ್ರಪ್ಪ, ಪ್ರಥ್ವಿ, ಗಣಪತಿ, ಮಂಜುನಾಥ, ಭೂಕೇಶ್ವರಪ್ಪ,ಕವಿರಾಜ್, ವಿಕ್ಟೋರಿಯಾ ಫರ್ನಾಂಡಿಸ್, ಗವಿಯಪ್ಪ ಎಲ್.ಟಿ. ಹೂವಪ್ಪ, ಮೂರ್ತಿ ಎಂ.ವೈ. ಇದ್ದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರನ್ನು, ನಿವೃತ್ತ ಶಿಕ್ಷಕರನ್ನು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ದಿನೇಶ್ ಎನ್.ಕೆ. ಸ್ವಾಗತಿಸಿದರು. ಮನೋಹರ ಟಿ.ವಿ.ವಂದಿಸಿದರು. ಶಂಕರ್ ಜಿ.ಕೆ. ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.